ಪಾಸ್‍ಪೋರ್ಟ್ ವ್ಯಕ್ತಿಯ ಪ್ರತಿಷ್ಠಿತ ದಾಖಲೆ: ಸಚಿವ ಜಯಚಂದ್ರ

ತುಮಕೂರು,ಫೆ.28: ಪಾಸ್ ಪೋರ್ಟ್ ಎಂಬುದು ವ್ಯಕ್ತಿಯ ಪ್ರತಿಷ್ಠಿತ ದಾಖಲೆಯಾಗಿದ್ದು, ಪ್ರಪಂಚದ ಯಾವುದೇ ಮೂಲೆಗೆ ಹೋಗಲು ಇದರ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ನಗರದ ಅಂಚೆ ಮತ್ತು ತಂತಿ ಇಲಾಖೆಯ ವಸತಿಗೃಹ ಸಮುಚ್ಚಯದಲ್ಲಿ ಭಾರತ ವಿದೇಶಾಂಗ ಸಚಿವಾಲಯ, ಅಂಚೆ ಕಚೇರಿ ತುಮಕೂರು ಆಯೋಜಿಸಿದ್ದ ಅಂಚೆ ಕಚೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಒಂದು ಪಾಸ್‍ಪೋರ್ಟ್ ಪಡೆಯುವುದು ತುಂಬ ಕಷ್ಟದ ದಿನಗಳಿದ್ದವು. ಆದರೆ ಇಂದು ನಮ್ಮ ಜಿಲ್ಲಾ ಕೇಂದ್ರದಲ್ಲಿಯೇ ಇಂತಹ ಕೇಂದ್ರ ಉದ್ಘಾಟನೆಯಾಗುತ್ತಿದ್ದು, ಇದರ ಲಾಭವನ್ನು ಎಲ್ಲರು ಪಡೆಯಬೇಕು. ಅದರಲ್ಲಿಯೂ ವಿದ್ಯಾರ್ಥಿಗಳು ಹೆಚ್ಚಿನದಾಗಿ ಇದರ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಎಸ್.ಪಿ.ಮುದ್ದ ಹನುಮೇಗೌಡ, ತುಮಕೂರು ನಗರದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ತೆರೆಯಲು ಅನುಮತಿ ನೀಡಿದ ಕೇಂದ್ರ ಸರಕಾರಕ್ಕೆ ಮೊದಲು ಅಭಿನಂದನೆ ಸಲ್ಲಿಸಿದರು. ಅಂಚೆ ಇಲಾಖೆ, ವಿದೇಶಾಂಗ ಇಲಾಖೆ ಹಾಗೂ ಸ್ಥಳೀಯ ಶಾಸಕರಾದ ಡಾ.ರಫೀಕ್ ಅಹಮದ್ ಅವರ ಸಹಕಾರದಿಂದ ಅತಿ ಶೀಘ್ರವಾಗಿ ಅಂಚೆ ಪಾಸ್‍ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆಗೊಂಡಿದೆ. ಪಾಸ್ ಪೋರ್ಟ್‍ಗೆ ಅರ್ಜಿ ಸಲ್ಲಿಸುವವರ ಪ್ರತಿಯೊಬ್ಬರ ದೂರು ಪೊಲೀಸ್ ತನಿಖೆಯ ವಿಳಂಬ ಎಂಬುದಾಗಿದೆ. ವೇದಿಕೆಯಲ್ಲಿಯೇ ಪೊಲೀಸ್ ವರಿಷ್ಠಾಧಿಕಾರಿಗಳಿದ್ದು, ತುರ್ತಾಗಿ ಮತ್ತು ಕಟ್ಟು ನಿಟ್ಟಾಗಿ ತನಿಖೆ ನಡೆಸಿ ಸಹಕರಿಸುವಂತೆ ಮನವಿ ಮಾಡಿದರು.
ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರು ನಗರ ಬೆಳೆಯುತ್ತಿದ್ದು, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಹೊಂದುತ್ತಿದೆ. ಅದರ ಒಂದು ಭಾಗವೇ ಅಂಚೆ ಕಚೇರಿ ಪಾಸ್ ಪೋರ್ಟ್ ಸೇವಾ ಕೇಂದ್ರ. ಇಲ್ಲದೆ ಸದ್ಯದಲ್ಲಿಯೇ ಹಳೆಯ ಹೆಚ್.ಎಂ.ಟಿ.ಜಾಗದಲ್ಲಿ ಇಸ್ರೋ ಕಾರ್ಯನಿರ್ವಹಿಸಲಿದೆ. ಹೆಚ್.ಎ.ಎಲ್.,ತುಮಕೂರು ಮಿಷನ್ ಟೂಲ್ ಪಾರ್ಕು,ಎಂ.ಎಸ್.ಎಂ.ಇ ತರಬೇತಿ ಕೇಂದ್ರ,ಕೈಗಾರಿಕಾ ಕಾರಿಡಾರ್ ಸೇರಿದಂತೆ ಹಲವು ಯೋಜನೆಗಳು ತುಮಕೂರು ಜಿಲ್ಲೆಯಲ್ಲಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ಮುದ್ದಹನುಮೇಗೌಡರು ವ್ಯಕ್ತಪಡಿಸಿದರು.
ಪ್ರಾದೇಶಿಕ ಪಾಸ್‍ಪೋರ್ಟ್ ಅಧಿಕಾರಿ ಭರತ್‍ಕುಮಾರ್ ಕುಟಿಯಾ ಮಾತನಾಡಿ, ಭಾರತ ಸರಕಾರ ಜನರ ಅನುಕೂಲಕ್ಕಾಗಿ ಪ್ರತಿ 50 ಕಿ.ಮಿ.ಗೆ ಒಂದು ಪಾಸ್‍ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲು ಮುಂದಾಗಿದ್ದು, ಇದರ ಭಾಗವಾಗಿ ಈ ವರ್ಷದ ಅಂತ್ಯಕ್ಕೆ 251 ಪಾಸ್ ಪೊರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಕರ್ನಾಟಕದಲ್ಲಿ ಈ ವರ್ಷ 12 ಸೇವಾ ಕೇಂದ್ರಗಳು ಆರಂಭವಾಗಲಿದ್ದು, ಈಗಾಗಲೇ ಮೈಸೂರು, ಬಳ್ಳಾರಿ, ಹಾಸನ, ಗದಗ ಹಾಗೂ ತುಮಕೂರು ಸೇರಿದಂತೆ ಒಟ್ಟು 5 ಕೇಂದ್ರಗಳು ಉದ್ಘಾಟನೆಯಾಗಿವೆ. ಪಾಸ್‍ಪೋರ್ಟ್ ಕೇವಲ ವಿದೇಶಕ್ಕೆ ಹೋಗಲು ಬೇಕಾದ ದಾಖಲೆಯಲ್ಲ. ಪ್ರತಿಯೊಬ್ಬ ವ್ಯಕ್ತಿಯ ಬಳಿ ಇರಲೇಬೇಕಾದ ದಾಖಲೆ, ಆದರೆ ಭಾರತದ ಶೇ5 ರಷ್ಟು ಜನ ಮಾತ್ರ ಹೊಂದಿದ್ದಾರೆ. ಇದನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಭಾರತ ಸರಕಾರ ಕ್ರಮ ಕೈಗೊಂಡಿದೆ. ತುಮಕೂರಿನ ಈ ಅಂಚೆ ಕಚೇರಿ ಪಾರ್ಸ್‍ಪೋರ್ಟ್ ಸೇವಾ ಕೇಂದ್ರ ಜಿಲ್ಲೆಯ ಜನರಲ್ಲಿ ಧನಾತ್ಮಕ ಬದಲಾವಣೆ ತರಲಿದೆ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಅಂಚೆ ಇಲಾಖೆಯ ಪ್ರಧಾನ ವ್ಯವಸ್ಥಾಪಕ ರಾಜೇಂದ್ರಕುಮಾರ್,ಪಾಸ್‍ಪೋರ್ಟ್ ಪಡೆಯುವುದು ಕಷ್ಟ ಎಂಬ ಕಾಲದಲ್ಲಿ, ಸರಕಾರ ಜನರ ಮನೆ ಬಾಗಿಲಲ್ಲಿಯೇ ಈ ಸೇವೆ ಒದಗಿಸಲು ಮುಂದಾಗಿದೆ. ತುಮಕೂರಿನ ಈ ಕೇಂದ್ರ ತೆರೆಯಲು ಜಾಗದ ಕೊರತೆ ಎದುರಾದಾಗ ಸಂಸದರು, ಶಾಸಕರು ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಕೇಂದ್ರ ಆರಂಭಗೊಂಡಿದೆ. ಇದರ ಲಾಭವನ್ನು ಎಲ್ಲರೂ ಪಡೆಯುವಂತಾಗಲಿದೆ ಎಂದರು.
ವೇದಿಕೆಯಲ್ಲಿ ಶಾಸಕ ಡಾ.ರಫೀಕ್ ಅಹಮದ್,ಉಪಮೇಯರ್ ಫರ್ಜಾನಾಖಾನಂ,ಅಂಚೆ ಇಲಾಖೆಯ ಅಧೀಕ್ಷಕ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







