ಕೋಲಾರ: ಕೆ.ಎಸ್.ಪುಟ್ಟಣಯ್ಯರವರ ಪುಣ್ಯ ತಿಥಿ ಆಚರಣೆ
.jpg)
ಕೋಲಾರ,ಫೆ.28: ಕೃಷಿ ಕಾರ್ಮಿಕರ ಹಾಗೂ ಮಹಿಳೆಯರ, ರೈತರ ಕಷ್ಟಗಳಿಗೆ ಸದನದ ಒಳಗೂ ಮತ್ತು ಹೊರಗೂ ಸದಾ ದ್ವನಿಯಾಗಿದ್ದ ಧೀಮಂತ ಹೋರಾಟಗಾರ ಶಾಸಕ ಕೆ.ಎಸ್.ಪುಟ್ಟಣಯ್ಯರವರ ಪುಣ್ಯ ತಿಥಿಯನ್ನು ತಿಥಿ ಬಿಡಿ ಸಸಿ ನೆಡಿ ಎಂಬ ಘೋಷಣೆಯೊಂದಿಗೆ ರೈತ ಸಂಘದಿಂದ ತಾಲೂಕು ಕಚೇರಿಯ(ಮಿನಿ ವಿಧಾನಸೌದ)ಮುಂದೆ ಸಸಿ ನೆಡುವ ಮೂಲಕ ಆಚರಿಸಲಾಯಿತು.
ದಲಿತ ಹಿರಿಯ ಮಹಿಳೆ ಮುನಿಯಮ್ಮನ ಕೈಯಿಂದ ಸಸಿ ನೆಡೆಸಿ ಮುನಿಯಮ್ಮನವರನ್ನು ಸನ್ಮಾನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
37 ವರ್ಷಗಳ ನಿರಂತರವಾಗಿ ಚಳವಳಿಯಲ್ಲಿ ಸಕ್ರಿಯವಾಗಿ ಕುವೆಂಪುರವರ ವಿಚಾರಗಳಲ್ಲಿ ಅಪಾರ ನಂಬಿಕೆಯಿಟ್ಟು ಮೂಡನಂಬಿಕೆಗಳ ವಿರೋಧಿಯಾಗಿದ್ದರು. ನಂಜುಂಡಸ್ವಾಮಿ ಮತ್ತು ಎಸ್.ಡಿ.ಜಯರಾಮ್‍ರವರ ಮಾರ್ಗದರ್ಶನದಲ್ಲಿ ಚಳವಳಿಗೆ ಬಂದ ಪಟ್ಟಣಯ್ಯ ನಿರಂತರವಾಗಿ ಶೋಷಿತರ ಧ್ವನಿಯಾಗಿದ್ದರು. ಕಂದಾಯ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ರೈತನ ಪ್ರತಿ ಸಮಸ್ಯೆಯನ್ನು ಹೋರಾಟದ ಮೂಲಕ ಸರ್ಕಾರಗಳಿಗೆ ತಿಳಿಸಿ, ಹಾಸ್ಯಮಿಶ್ರಿತ ವ್ಯಂಗ್ಯರೂಪದಲ್ಲಿ ಸರ್ಕಾರಗಳನ್ನು ಬೆತ್ತಲೆಗೊಳಿಸುತ್ತಿದ್ದರೆಂದು ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ನುಡಿದರು.
1994 ಮತ್ತು 2014ರಲ್ಲಿ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ ಇವರು ವಿಧಾನಸಭೆಯ ಕಲಾಪಗಳಲ್ಲಿ ನೊಂದವರಿಗೆ ದ್ವನಿಯಾಗುತ್ತಿದ್ದರು. ಸದನದಲ್ಲಿ ನಾಡಿನ ಸಂಕಷ್ಟದ, ಶೋಷಿತ ಜನಾಂಗದ ವ್ಯವಸ್ಥೆಯ ಬಗ್ಗೆ ಚರ್ಚಿಸಿ ಸದನದ 224 ಶಾಸಕರ ಮನಕಲಕುತ್ತಿದ್ದರು. ಇಂತಹ ದೈತ್ಯ ಶಕ್ತಿ ರೈತ ಕುಲವನ್ನು ಹಗಲಿರುವುದು ನಾಡಿನ ಶ್ರಮಿಕರ ಆಶಾಕಿರಣ ಇಲ್ಲದಂತಾಗಿದ್ದು, ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಪುಟ್ಟಣಯ್ಯನರವರು ಇಹಲೋಕ ತ್ಯಜಿಸಿರುವುದು ದೊಡ್ಡ ದುರಂತವಾಗಿದೆ. ಇಂತಹ ದೀಮಂತ ಹೋರಾಟಗಾರನ ಆಶಯಗಳನ್ನು ನೆರವೇರಿಸುವುದು ನಮ್ಮ ಯುವ ಸಮಾಜದ ಆದ್ಯ ಕರ್ತವ್ಯವಾಗಬೇಕಾಗಿದೆ. ಪುಟ್ಟಣ್ಣಯನವರ ಕನಸಿನಂತೆ ಸಮಸಮಾಜ ಕಟ್ಟಲು ಪ್ರತಿಯೊಬ್ಬರು ಮುಂದಾದಾಗ ಇವರ ಆದರ್ಶ ಮತ್ತು ನೆನಪುಗಳ ಚಿರಸ್ತಾಯುವಾಗಿ ಉಳಿಯುತ್ತವೆಂದು ಹೇಳಿ ನಮನ ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ಅಬ್ದುಲ್ ಸತ್ತಾರ್, ಎ.ನಳಿನಿ, ಮುನಿಯಮ್ಮ, ಮರಗಲ್ ಶ್ರೀನಿವಾಸ್, ಆನಂದಸಾಗರ್, ನುಕ್ಕನಹಳ್ಳಿ ಶ್ರೀರಾಮ್, ನಗರಸಭೆ ರಾಜೇಶ್, ಕನ್ನಡಮಿತ್ರ ವೆಂಕಟಪ್ಪ, ಚೇತನ್‍ಬಾಬು, ಚಂಬೆ ರಾಜೇಶ್, ಅಹಿಂದ ಮಂಜುನಾಥ್, ಶಿವು, ಸುಪ್ರಿಂಚಲ, ನಾರಾಯಣ್, ಕೇಶವಾ, ಕೆಂಬೋಡಿ ಕೃಷ್ಣೇಗೌಡ, ಈಕಂಬಳ್ಳಿ ಮಂಜುನಾಥ್, ಪುರುಶೋತ್ತಮ್, ಪುತ್ತೇರಿ ರಾಜು ಹಾಗೂ ವಿವಿದ ಸಂಘಟನೆಗಳ ಮುಖಂಡರು ಹಾಜರಿದ್ದರು.







