ಮಂಗಳೂರು: ಯುವಕ-ಯುವತಿ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್ ವಿತರಣೆ
ಮಂಗಳೂರು, ಫೆ. 28: ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಚೈತನ್ಯ ಕಾರ್ಯಕ್ರಮದಡಿ ದ.ಕ. ಜಿಲ್ಲೆಯ 100 ಯುವಕ-ಯುವತಿ ಸಂಘಗಳಿಗೆ ಕ್ರೀಡಾ ಸಾಮಗ್ರಿಗಳನ್ನೊಳಗೊಂಡ ಕಿಟ್‌ಗಳನ್ನು ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿತರಣೆ ಮಾಡಿದರು.
ಜಿಲ್ಲೆಯ 187 ಯುವಕ, ಯುವತಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಮೊದಲ ಹಂತದಲ್ಲಿ 100 ಸಂಘಗಳಿಗೆ ಮಂಜೂರಾಗಿದ್ದು, 87 ಯುವ ಸಂಘಗಳಿಗೆ ಎರಡನೇ ಹಂತದಲ್ಲಿ ಮಂಜೂರಾಗಲಿವೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊರಾಂಗಣ ಉಪಯೋಗದ ವಾಲಿಬಾಲ್-3, ಒಂದು ಜೋಡಿ ವಾಲಿಬಾಲ್ ಪೋಲ್, ಒಂದು ವಾಲಿಬಾಲ್ ನೆಟ್, ಮೂರು ಫುಟ್‌ಬಾಲ್, ಮೂರು ಬ್ಯಾಟ್, 6 ಸ್ಟಂಪ್ಸ್, 6 ಹಾರ್ಡ್ ಟೆನ್ನಿಸ್‌ಬಾಲ್‌ಗಳನ್ನೊಳಗೊಂಡ ಒಂದು ಕ್ರಿಕೆಟ್ ಸೆಟ್, 2 ತ್ರೋ ಬಾಲ್‌ಗಳು, ಸ್ಪೋರ್ಟ್ಸ್ ಕಿಟ್ ಬ್ಯಾಗ್, ಆರು ಟೆನ್ನಿಕಾಯ್ಟ್ ರಿಂಗ್ಸ್, ಎರಡು ಶಟಲ್ ರ್ಯಾಕೆಟ್, ಒಂದು ಬಾಕ್ಸ್ ಶಟಲ್ ಕಾಕ್‌ಗಳು ಸೆಟ್‌ನಲ್ಲಿ ಒಳಗೊಂಡಿವೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವ ರಮಾನಾಥ ರೈ, ದೇಶದ ಸಮಗ್ರತೆ, ಭಾವೈಕ್ಯತೆಗಳನ್ನು ಉಳಿಸಿಕೊಂಡು, ಎಲ್ಲ ಜಾತಿ, ಧರ್ಮಗಳ ಜನರೆಲ್ಲ ಒಂದೇ ಎನ್ನುವ ತತ್ವದ ನೆಲೆಯಲ್ಲಿ ಸಮಾಜವನ್ನು ಮುನ್ನಡೆಸಬೇಕು. ಅಹಿತಕರ ಘಟನೆಗಳಿಲ್ಲದ, ಮನುಷ್ಯ ಮನುಷ್ಯರ ನಡುವೆ ಘರ್ಷಣೆಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದರು.
ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ, ಹಿಂದೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಬಹಳ ಕಡಿಮೆ ಅನುದಾನ ಬರುತ್ತಿತ್ತು. ಆದರೆ, ಈಗ ಕ್ರೀಡಾ ಕ್ಷೇತ್ರಕ್ಕೆ ಅನುದಾನ ಹೆಚ್ಚಾಗಿದ್ದು, ಯುವಜನ ಮೇಳಗಳು, ಕ್ರೀಡಾ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ಎಂ.ಎಸ್. ಮುಹಮ್ಮದ್, ತುಂಬೆ ಚಂದ್ರಪ್ರಕಾಶ್ ಶೆಟ್ಟಿ, ವಿನೋದ್ ಬೊಳ್ಳೂರು, ಮಂಜುಳಾ ಮಾಧವ ಬಾವೆ, ಮಮತಾ ಗಟ್ಟಿ, ಕಮಲಾಕ್ಷಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪ್ರದೀಪ್ ಡಿಸೋಜ, ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.







