ಬಿಜೆಪಿ ಗೂಂಡಾಗಿರಿಯಿಂದ ಬೆಂಗಳೂರು ರಕ್ಷಿಸಬೇಕು : ಗೃಹ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಮಾ. 1: ‘ಬೆಂಗಳೂರು ರಕ್ಷಿಸಿ’ ಎಂಬ ಬಿಜೆಪಿ ಯಾತ್ರೆ ಹಾಸ್ಯಾಸ್ಪದ. ಬಿಜೆಪಿಯವರ ಗೂಂಡಾಗಿರಿಯಿಂದ ಬೆಂಗಳೂರು ರಕ್ಷಿಸಬೇಕಾದ ಅಗತ್ಯವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪರ ಆಪ್ತ ಸಹಾಯಕ ವಿನಯ್ ಅಪಹರಣ ಪಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್ ಭಾಗಿಯಾಗಿದ್ದು ಸುಳ್ಳೇ? ಸಂತೋಷ್ ಗೂಂಡಾ ಅಲ್ಲವೇ? ಎಂದು ಪ್ರಶ್ನಿಸಿದರು.
ಬಿಬಿಎಂಪಿ ಸದಸ್ಯರಾಗಿದ್ದ ಗೋವಿಂದೇಗೌಡ ಬರ್ಬರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರು ಬಿಜೆಪಿಯ ಗೂಂಡಾಗಳಲ್ಲವೇ? ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರು? ಎಂದು ಪ್ರಶ್ನಿಸಿದ ಅವರು, ಮೊದಲು ಇವರಿಂದ ಬೆಂಗಳೂರು ನಗರದ ಜನರನ್ನು ರಕ್ಷಿಸಬೇಕಾಗಿದೆ ಎಂದು ತಿರುಗೇಟು ನೀಡಿದರು.
ಹಲವು ಪ್ರಕರಣಗಳಲ್ಲಿ ಬಿಜೆಪಿಯ ಕಾರ್ಯಕರ್ತರೇ ಆರೋಪಿಗಳಾಗಿದ್ದು, ಬಿಜೆಪಿ ಮುಖಂಡರು ಮೊದಲು ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ವಿರುದ್ಧ ನಿಷ್ಪಕ್ಷಪಾತವಾಗಿ ಸರಕಾರ ನಡೆದುಕೊಂಡಿದೆ ಎಂದರು.
ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಬಿಬಿಎಂಪಿಯ ಆಸ್ತಿಗಳನ್ನು ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟು 8 ಸಾವಿರ ರೂ.ಸಾಲ ಪಡೆದಿತ್ತು. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಆ ಎಲ್ಲ ಆಸ್ತಿಗಳನ್ನು ಉಳಿಸಿಕೊಳ್ಳಲಾಗಿದೆ. ಇಂತಹವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.







