ಹಿಟ್ಲರ್ ಮಾದರಿಯಲ್ಲಿ ಪ್ರಧಾನಿ ನಡೆ :ಸಚಿವ ರಮೇಶ್ ಕುಮಾರ್

ಬೆಂಗಳೂರು, ಮಾ.1: ಪ್ರಧಾನಿ ನರೇಂದ್ರ ಮೋದಿ ತಾನೊಬ್ಬ ಅತೀವ ಪುರುಷ ಅಂದುಕೊಂಡಿದ್ದಾರೆ. ಇವರ ನಡೆ ಹಿಟ್ಲರ್‌ನ ನಡೆಯ ರೀತಿಯಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ಟೀಕಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಸಾಮಾನ್ಯ. ಆದರೆ, ಪ್ರಧಾನಿಯಂತಹ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವವರು, ಮತ್ತೊಬ್ಬರ ಚಾರಿತ್ರವಧೆ ಮಾಡುವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಮೇಶ್‌ಕುಮಾರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಯಾವುದೆ ಆಧಾರಗಳಿಲ್ಲ. ಮೋದಿ ಹಿಟ್ಲರ್‌ನಂತೆ ನಡೆದುಕೊಳ್ಳುತ್ತಿದ್ದು, ಇದು ದೇಶದ ರಾಜಕಾರಣ ಅಪಾಯದ ಅಂಚಿಗೆ ಬರುತ್ತಿರುವ ಮುನ್ಸೂನೆಯಾಗಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷವನ್ನು ಉಳಿಸುವ ಮೂಲಕ, ಪ್ರಜಾತಂತ್ರವನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ. ಪ್ರಜಾತಂತ್ರದ ಬೇರುಗಳನ್ನು ಚಿವುಟಲು ಪ್ರಯತ್ನಿಸುವ ಶಕ್ತಿಗಳನ್ನು ಪ್ರಾಣ ತೆತ್ತಾದರೂ ಹಿಮ್ಮೆಟಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಚುನಾವಣೆಗಾಗಿ ಪಕ್ಷದ ಬಾವೂಟ ಹಿಡಿಯುವುದಲ್ಲ. ದೇಶ ಉಳಿಸಲು ಕಾಂಗ್ರೆಸ್ ಅನಿವಾರ್ಯ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಈ ದೇಶ ಮಾರಾಟಕ್ಕೆ ಇಲ್ಲ, ಹಾರಾಜಿಗಿಲ್ಲ ಎಂಬುದನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕಿದೆ ಎಂದು ರಮೇಶ್‌ಕುಮಾರ್ ಹೇಳಿದರು.
ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು ಬಗ್ಗೆ ಸಂಸದ ಪ್ರತಾಪ್‌ಸಿಂಹ ಮಾತನಾಡುತ್ತಾರೆ. ಒಬ್ಬರ ಬಗ್ಗೆ ಮಾತನಾಡಬೇಕಾದರೆ ಒಮ್ಮೆ ನಮ್ಮ ಯೋಗ್ಯತೆ ಬಗ್ಗೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದು ಪ್ರತಾಪ್‌ಸಿಂಹ ವಿರುದ್ಧ ಅವರು ಕಿಡಿಗಾರಿದರು.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಶ್ರೀನಿವಾಸಪುರದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಕೆಲಸ ಮಾಡಿಕೊಂಡು ಬಂದವರು. ಇಂದು ಜೆಡಿಎಸ್‌ನಲ್ಲಿರುವ ಉಸಿರುಕಟ್ಟಿದ ವಾತಾವರಣದಿಂದ ಬೇಸತ್ತು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರ ಎಂದರು.
ಬಿಜೆಪಿಯಿಂದ ರಾಜ್ಯ ಸರಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಕಾರಣಕ್ಕಾಗಿ ಬಿಜೆಪಿ ನಮ್ಮ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿದೆ ಎಂದರು.
ಭ್ರಷ್ಟಾಚಾರ ಮಾಡಿರುವ ಬಗ್ಗೆ ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಲಿ. ಅಲ್ಲದೇ, ದಾಖಲೆ ಸಹಿತ ಎಸಿಬಿ ಸೇರಿದಂತೆ ಬೇರೆ ಬೇರೆ ತನಿಖಾ ಸಂಸ್ಥೆಗಳಿಗೆ ನಮ್ಮ ವಿರುದ್ಧ ದೂರು ನೀಡಲಿ ಎಂದು ಸವಾಲು ಹಾಕಿದ ಅವರು, ರಾಜ್ಯ ಸರಕಾರದ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಬಿಜೆಪಿ ಬಳಿ ಯಾವುದೆ ದಾಖಲೆ ಇಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಏನೆಲ್ಲಾ ಆಗಿತ್ತು ಎಂಬುದನ್ನು ರಾಜ್ಯದ ಜನರು ಇನ್ನೂ ಮರೆತಿಲ್ಲ. ಆದರೆ, ಇವರು ನಮ್ಮ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿರುವುದು ಹಾಸ್ಯಾಸ್ಪದ ಎಂದು ಪರಮೇಶ್ವರ್ ವ್ಯಂಗ್ಯವಾಡಿದರು.
ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಹಾಗೂ ಬೆಂಗಳೂರು ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ವಿರುದ್ಧ ಈಗಾಗಲೆ ಪಕ್ಷದ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಕರಣಗಳಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವುದು ಖಚಿತ ಎಂದು ಅವರು ಹೇಳಿದರು.
ಕೋಲಾರದ ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಶ್ರೀನಿವಾಸಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಸೈಯದ್ ಖಾದರ್ ಸೇರಿದಂತೆ ಸುಮಾರು 52ಕ್ಕೂ ಹೆಚ್ಚು ಮಂದಿ ಮುಖಂಡರನ್ನು ಕಾಂಗ್ರೆಸ್ ಬಾವುಟ ಪರಮೇಶ್ವರ್ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್, ವಿಧಾನಪರಿಷತ್ ಮಾಜಿ ಸದಸ್ಯ ನಸೀರ್‌ಅಹ್ಮದ್, ಶಾಸಕ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.







