ವಿಶ್ವಶಾಂತಿಯೇ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಮುಖ್ಯ ಗುರಿ : ಗುರುಸ್ವಾಮಿ

ಕೊಳ್ಳೇಗಾಲ.ಮಾ.1:ಗೆಳೆತನ, ಒಡನಾಟ, ಮಾನವೀಯ ಸೇವೆ, ವಿಶ್ವಶಾಂತಿಯೇ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಚಾಮರಾಜನಗರ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಗುರುಸ್ವಾಮಿ ಬಣ್ಣಿಸಿದರು.
ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ 113ನೇ ವರ್ಷಾಚರಣೆ ಅಂಗವಾಗಿ ರೋಟರಿ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಟರಿ ವಿಶ್ವದ ಮೊಟ್ಟ ಮೊದಲ ಸೇವಾ ಸಂಸ್ಥೆಯಾಗಿದ್ದು ಅಮೆರಿಕಾ ದೇಶದ ಚಿಕಾಗೋ ನಗರದಲ್ಲಿ 1905ರಲ್ಲಿ ಜನ್ಮತಳೆದು ಜಗತ್ತಿನಾದ್ಯಂತ 195ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪಸರಿಸಿ ಪೊಲಿಯೋ ನಿರ್ಮೂಲನೆ ಸೇರಿದಂತೆ ಅನೇಕ ಮಾನವೀಯ ಸೇವಾ ಕಾರ್ಯಕ್ರಮಗಳಲ್ಲಿ ರೋಟರಿ ಯಶಸ್ಸು ಸಾಧಿಸಿ ಮುನ್ನಡೆದಿದೆ ಎಂದರು.
ಇಂತಹ ಮಹಾನ್ ಸಂಸ್ಥೆಯ ಸದಸ್ಯತ್ವ ಹೊಂದುವುದೇ ಪೂರ್ವ ಜನ್ಮದ ಪುಣ್ಯದ ಫಲ ಎಂದ ಅವರು ಸ್ವಹಿತ ಮೀರಿದ ಸೇವೆ ಹಾಗೂ ಚತುರ್ವಿಧ ಪರೀಕ್ಷೆ ಅಳವಡಿಕೆ ಮೂಲಕ ರೋಟರಿ ಬಂಧುಗಳು ಸಮಾಜಕ್ಕೆ ತಮ್ಮದೇ ಆದ ವಿಶೇಷ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ನುಡಿದರು.
ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಪ್ರಭಾಕರ್ ಪರಿಸರ ಜಾಗೃತಿ ಮಹತ್ವ ಕುರಿತು ಮಾತನಾಡಿ, ಜಲಸಂರಕ್ಷಣೆ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆ ಅರಿತು ಪ್ರತಿಯೊಬ್ಬರೂ ಜಲಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಹೇಳಿದರು.
ರೋಟರಿ ಅಧ್ಯಕ್ಷ ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರೋಟರಿ ಸಂಸ್ಥಾಪಕ ಪಾಲ್‍ಹ್ಯಾರೀಸ್ ಗುಣಗಾನ ಮಾಡಿದರು.
ಪುಷ್ಪ ನಮನ : ಅಂತರಾಷ್ಟ್ರೀಯ ರೋಟರಿ ಸಂಸ್ಥೆ ಹುಟ್ಟುಹಬ್ಬದ ಅಂಗವಾಗಿ ರೋಟರಿ ಸಂಸ್ಥೆ ಸಂಸ್ಥಾಪಕ ಪಾಲ್‍ಹ್ಯಾರೀಸ್ ಭಾವಚಿತ್ರಕ್ಕೆ ರೋಟರಿ ಪದಾಧಿಕಾರಿಗಳು ಸದಸ್ಯರು ಪುಷ್ಪ ನಮನ ಸಲ್ಲಿಸಿ, ಗೌರವ ಸಮರ್ಪಿಸಿದರು.
ಉಪಾಧ್ಯಕ್ಷರಾದ ಪ್ರೇಮಲತಾಕೃಷ್ಣಸ್ವಾಮಿ, ಜೋನಲ್ ಲೆಫ್ಟಿನೆಂಟ್ ಪಿ. ಈಶ್ವರ್, ಕಾರ್ಯದರ್ಶಿ ಜೋಸೆಫ್ ಅಲೆಗ್ಸಾಂಡರ್, ಆರ್.ಪಿ. ನರೇಂದ್ರನಾಥ್, ಬಿ.ಕೆ. ಪ್ರಕಾಶ್, ಕೆ. ಪುಟ್ಟರಸಶೆಟ್ಟಿ, ಡಿ. ವೆಂಕಟಾಚಲ, ಕಿರಣ್‍ಬಾಬು ಇತರರು ಇದ್ದರು.







