ಮಂಗಳೂರು: ವಾಗ್ವಾದಕ್ಕೆ ಕಾರಣವಾಯ್ತು ಎಂಎಲ್‌ಎ ಆಕಾಂಕ್ಷಿ ವಿಚಾರ !
ಸಚಿವರ ಸಮ್ಮುಖದಲ್ಲೇ ಶಾಸಕರ ಮಾತಿನ ಚಕಮಕಿ

ಮಂಗಳೂರು, ಮಾ.1: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಇಂದು 3ಡಿ ತಾರಾಲಯದ ಉದ್ಘಾಟನೆ ಬಂದಿದ್ದ ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಅವರ ಸಮ್ಮುಖದಲ್ಲೇ ಶಾಸಕರಾದ ಅಭಯಚಂದ್ರ ಜೈನ್ ಹಾಗೂ ಮೊಯ್ದಿನ್ ಬಾವ ಪರಸ್ಪರ ಮಾತಿನ ಚಕಮಕಿ ನಡೆಸಿ ಸಚಿವರನ್ನು ಮುಜಗರಕ್ಕೆ ತಳ್ಳಿದ ಪ್ರಸಂಗ ನಡೆಯಿತು.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಆಗಮನ ವಿಳಂಬವಾದ ಹಿನ್ನೆಲೆಯಲ್ಲಿ ಸಚಿವ ಸೀತಾರಾಂ, ಶಾಸಕರು ಹಾಗೂ ಇತರ ಗಣ್ಯರು ಕುಶಲೋಪಹಾರಿ ಮಾತುಕತೆಯಲ್ಲಿದ್ದರು. ಈ ಸಂದರ್ಭ, ಕವಿತಾ ಸನಿಲ್‌ರವರ ಮೇಯರ್ ಅವಧಿ ಕೆಲ ದಿನಗಳಲ್ಲಿಯೇ ಕೊನೆಗೊಳ್ಳಲಿದೆ ಎಂದು ಶಾಸಕ ಮೊಯ್ದಿನ್ ಬಾವ ಅವರು ಸಚಿವರಿಗೆ ಮೇಯರ್‌ರನ್ನು ಪರಿಚಯಿಸಿದರು. ಅವಧಿ ಮುಗಿದರೇನಾಯಿತು. ಮುಂದೆ ಅವರಿಗೆ ಉತ್ತಮ ಸ್ಥಾನ ಸಿಗಬೇಕು ಎಂದು ಹೇಳಿದರು.
ಹೌದ್ ಸರ್, ಅವರು ಮುಂಬರುವ ಚುನಾವಣೆಯಲ್ಲಿ ಮೂಡುಬಿದಿರೆಯಿಂದ ಶಾಸಕ ಸ್ಥಾನದ ಆಕಾಂಕ್ಷಿ ಎಂದು ಮೊಯ್ದಿನ್ ಬಾವ ಹೇಳಿದ್ದು, ಅಭಯಚಂದ್ರ ಜೈನ್ ಅವರನ್ನು ಅಸಮಾಧಾನಗೊಳಿಸಿತು. ಅವರು ಮೊಯ್ದಿನ್ ಬಾವ ಜತೆ ವಾಗ್ವಾದಕ್ಕಿಳಿದರು. ಶಾಸಕರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿ ದಾಗ ಕೆಲ ಕೆಲ ಕ್ಷಣ ವಾತಾವರಣ ಬಿಗುಗೊಂಡು ಬಳಿಕ ಸಚಿವರ ಆಪ್ತರ ಮಧ್ಯ ಪ್ರವೇಶದೊಂದಿಗೆ ಶಾಸಕರನ್ನು ಸಮಾಧಾನ ಪಡಿಸಬೇಕಾಯಿತು.







