ಪಾವಗಡ : ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಗೆ ಸಿಎಂ ಸಿದ್ದರಾಮಯ್ಯ ಚಾಲನೆ

ತುಮಕೂರು/ಪಾವಗಡ,ಮಾ.01:ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಸುತ್ತಮುತ್ತ 13ಸಾವಿರ ಎಕರೆ ಪ್ರದೇಶದಲ್ಲಿ ಹರಡಿರುವ ಸೋಲಾರ್ ವಿದ್ಯುತ್ ಘಟಕ ಇಡೀ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸೋಲಾರ್ ಪಾರ್ಕ್ ಆಗಿದ್ದು, ಇದು ವಿಶ್ವದ 7 ಅದ್ಭುತಗಳ ಜೊತೆಗೆ 8ನೇ ಅದ್ಭುತವಾಗಿ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಪಾವಗಡ ತಾಲೂಕಿನ ತಿರುಮಣಿಯಲ್ಲಿ ನಿರ್ಮಾಣವಾಗುತ್ತಿರುವ 2000 ಮೇ.ವ್ಯಾ ವಿದ್ಯುತ್ ಉತ್ಪಾದಿಸುವ ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕಿನ ಮೊದಲ ಹಂತದ 600 ಮೆ.ವ್ಯಾಟ್ ಸೋಲಾರ್ ವಿದ್ಯುತ್ ಸರಬರಾಜಿಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಇನ್ನೆರಡು ಮೂರು ತಿಂಗಳಲ್ಲಿಯೇ 1400 ಮೆ.ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದಾಗಿ ಈ ಭಾಗದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆಗಳು ಉಂಟಾಗಿ ಜನರ ಜೀವನ ಮಟ್ಟ ಸುಧಾರಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ವಿದ್ಯುತ್ ಯಥೇಚ್ಛವಾಗಿ ಸಿಗುವ ಕಾರಣ ಇಲ್ಲಿ ಇನ್ನು ಮುಂದೆ ಉದ್ದಿಮೆದಾರರು, ಕೈಗಾರಿಕೋದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ಜನರಿಗೆ ಉದ್ಯೋಗಾವಕಾಶಗಳು ದೊರಕಲಿದೆ. ಅಲ್ಲದೆ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕುವುದರ ಜೊತೆಗೆ ಆರ್ಥಿಕವಾಗಿ ಲಾಭವಾಗಲಿದೆ.ಇದರಿಂದ ಶತಮಾನಗಳಿಂದ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಪಾವಗಡ ಹೊರಬರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸೋಲಾರ್ ಪಾರ್ಕ್‍ಗೆ ನೀಡಿರುವ ಜಮೀನಿಗೆ ರೈತನೇ ಮಾಲೀಕನಾಗಿದ್ದು,ಜಮೀನಿನಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ಮೂಲಕ ರೈತ ಹಾಗೂ ಸರಕಾರ ಇಬ್ಬರೂ ಮಾಲೀಕತ್ವವನ್ನು ಹೊಂದಿರುವ ವಿಶ್ವದ ಅತ್ಯಂತ ಬೃಹತ್ ಸೋಲಾರ್ ವಿದ್ಯುತ್ ಘಟಕ.ಈ ಭಾಗದ ಜನರ ಹಾಗೂ ರಾಜ್ಯದ ಜನರ ಹೆಮ್ಮೆಯ ವಿಷಯವಾಗಿದೆ.ಜಮೀನು ನೀಡಿರುವ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕ ಒಪ್ಪಂದದಂತೆ 21 ಸಾವಿರ ರೂ.ಗಳು ನೀಡುವುದರ ಜೊತೆಗೆ ಪ್ರತಿ 2 ವರ್ಷಕ್ಕೊಮ್ಮೆ ಇದರ ಮೇಲೆ ಶೇ. 5 ರಷ್ಟು ಹೆಚ್ಚಳ ಮಾಡಲು ಒಪ್ಪಂದವಾಗಿದೆ.ಮುಂದಿನ 25 ವರ್ಷಗಳವರೆಗೆ ಜಾರಿಯಲ್ಲಿರಲಿದೆ ಎಂದರು.
ಸೋಲಾರ್ ಪಾರ್ಕ್‍ಗೆ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಯಾವುದೇ ಕೃಷಿ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ಎಕರೆಗೆ 6.6 ಲಕ್ಷ ರೂ. ನೀಡಲಾಗಿದೆ. ಕಳೆದ 2 ವರ್ಷಗಳಿಂದಲೂ ಈ ಭಾಗದ ಜನರು ಇದೇ ಆಧಾರದಲ್ಲಿ ಪರಿಹಾರ ಪಡೆಯುತ್ತಿದ್ದಾರೆ.ನಮ್ಮ ರಾಜ್ಯದ ಅತ್ಯಂತ ಒಣಭೂಮಿಗಳಲ್ಲಿ ತುಮಕೂರು ಜಿಲ್ಲೆಯ ಪಾವಗಡ ಕೂಡ ಒಂದಾಗಿದ್ದು, ಕಳೆದ 5 ದಶಕಗಳಲ್ಲಿ 47 ವರ್ಷ ಈ ಭಾಗ ಬರಪೀಡಿತ ಪ್ರದೇಶವಾಗಿದ್ದರಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಬೇರೆ ಪ್ರದೇಶಗಳಿಗೆ ಉದ್ಯೋಗ ಹರಸಿ ಹೊಟ್ಟೆ ಪಾಡಿಗಾಗಿ ಗುಳೆ ಹೋಗಿದ್ದಾರೆ. ಇಂತಹ ಸಮಸ್ಯೆಯನ್ನು ನಿವಾರಿಸಲು ವಿಶ್ವದ ಅತಿ ದೊಡ್ಡ ಸೌರ ಪಾರ್ಕ್ ಆರಂಭ ಒಂದು ಆಶಾದಾಯಕವಾದ ಮಾರ್ಗವಾಗಿದೆ.ಸೋಲಾರ್ ಪಾರ್ಕ್‍ನ ಮೂಲಕ ಪಾವಗಡ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.ಈ ಮೂಲಕ ತಾಲೂಕಿಗೆ ಅಭಿವೃದ್ಧಿಯ ಭಾಗ್ಯ ದೊರಕಿದಂತಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದ ವಿದ್ಯುತ್ ಕ್ಷೇತ್ರ ಬದಲಾಗುತ್ತಿದೆ. 2012-13ರಲ್ಲಿ 14,030 ಮೆ.ವ್ಯಾಟ್ ವಿದ್ಯುತ್‍ನ್ನು ಉತ್ಪಾದಿಸಲಾಗುತ್ತಿತ್ತು.ಇಂದು ಇದರ ಪ್ರಮಾಣ 23,379 ಮೆ.ವ್ಯಾಟ್ ಆಗಿದೆ. ಜಲ,ಉಷ್ಣ, ನ್ಯೂಕ್ಲಿಯರ್ ಮತ್ತು ಜೈವಿಕ ಇಂಧನದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದ್ದು, ಕೆಪಿಸಿಎಲ್ ಮತ್ತು ಕೆಪಿಟಿಸಿಎಲ್‍ನ ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹಾಜರಿದ್ದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿಯೇ 4ನೇ ಅತಿದೊಡ್ಡ ರಾಜ್ಯವಾಗಿದ್ದು, ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಇಡೀ ವಿಶ್ವದಲ್ಲಿಯೇ ನಂಬರ್ 1 ಸ್ಥಾನದಲ್ಲಿರುವುದರಿಂದ ಇನ್ನು ಮುಂದೆ ರಾಜ್ಯದ ಜನರಿಗೆ ಯಾವುದೇ ರೀತಿಯ ಲೋಡ್‍ಶೆಡ್ಡಿಂಗ್ ಸಮಸ್ಯೆ ಇರುವುದಿಲ್ಲ. ಪಾವಗಡ ತಾಲೂಕಿನಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್‍ನ್ನು ಇಲ್ಲಿಯ ರೈತರಿಗೆ ಮೊದಲ ಆದ್ಯತೆ ನೀಡಿ ಅವರ ಕೃಷಿ ಕಾರ್ಯಗಳಿಗೆ ನೀಡಲಾಗುವುದು. ಇದರಿಂದ ಈ ಭಾಗದಲ್ಲಿ ಪಂಪ್‍ಸೆಟ್‍ಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿ ಮಾಡಬಹುದಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಪಾವಗಡ, ಶಿರಾ, ಚಿತ್ರದುರ್ಗ ಜಿಲ್ಲೆಯ ಜಗಳೂರು ಸೇರಿದಂತೆ ಅನೇಕ ತಾಲೂಕುಗಳಿಗೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ.ಇದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ತಿಮ್ಮರಾಯಪ್ಪ ವಹಿಸಿದ್ದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಚಂದ್ರಪ್ಪ, ಕ್ರೆಡಿಲ್ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್.ಪಾಟೀಲ್, ಮಾಜಿ ಸಚಿವ ವೆಂಕಟರಮಣಪ್ಪ,ತಾಲೂಕು ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಜಿ.ಪಂ. ಸದಸ್ಯರು ಹಾಗೂ ಇಂಧನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರವಿಕುಮಾರ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್,ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಮುಂತಾದವರು ಹಾಜರಿದ್ದರು.







