ಉಡುಪಿ: ಕುಕ್ಕೆಹಳ್ಳಿ ಫಿಶ್‌ಮಿಲ್ ತ್ಯಾಜ್ಯ ನೀರಿನಿಂದ ಕುಡಿಯುವ ನೀರು ಕಲುಷಿತ
ದಲಿತರ ಕುಂದುಕೊರತೆ ಸಭೆಯಲ್ಲಿ ದೂರು
ಉಡುಪಿ, ಮಾ.1: ಕುಕ್ಕೆಹಳ್ಳಿ ಗ್ರಾಪಂನ ಕಮಾಲಿಮಜಲುವಿನಲ್ಲಿ ಊರಿ ನವರ ಪ್ರತಿರೋಧದ ನಡುವೆಯೇ ಕಾರ್ಯಾಚರಿಸುತ್ತಿರುವ ಫಿಶ್‌ಮಿಲ್‌ನ ತ್ಯಾಜ್ಯದಿಂದ ಪರಿಸರದ ಕುಡಿಯುವ ನೀರು ಸಂಪೂರ್ಣ ಕಲುಷಿತಗೊಂಡಿದೆ. 70-75 ದಲಿತರ ಮನೆಯ ಬಾವಿಯ ನೀರು ಕುಡಿಯಲು ಸಾಧ್ಯವಿಲ್ಲದಷ್ಟು ಹಾಳಾಗಿದ್ದು, 750ರಿಂದ 800 ಮಂದಿ ಕುಡಿಯುವ ಹಾಗೂ ನಿತ್ಯಬಳಕೆಯ ನೀರಿಗಾಗಿ ಪರದಾಡುವಂತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ದಲಿತರ ಕುಂದು-ಕೊರತೆ ಸಭೆಯಲ್ಲಿ ದೂರು ನೀಡಲಾಯಿತು.
ಪರಿಸರದಲ್ಲಿರುವ ಬಾವಿ ನೀರಿನ ವೈಜ್ಞಾನಿಕ ಪರೀಕ್ಷೆಯಿಂದ ಕುಡಿಯಲು ಅದು ಅನರ್ಹ ಎಂದು ವರದಿ ಬಂದಿದೆ. ಇದರೊಂದಿಗೆ ಸೇವಿಸುವ ಗಾಳಿಯ ಮಲೀನಗೊಂಡಿದೆ. ಈ ಬಗ್ಗೆ ಎಲ್ಲಾ ಇಲಾಖೆಗಳೊಂದಿಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಲಕ್ಷ್ಮಣ್ ನಿಂಬರಗಿ, ಈ ಪ್ರದೇಶದ ಬೀಟ್ ಪೊಲೀಸರನ್ನು ಕಳುಹಿಸಿ ವರದಿ ತರಿಸುವಂತೆ ಹಾಗೂ ವಿವಿಧ ಇಲಾಖೆಗಳಿಗೆ ಪತ್ರ ಬರೆಯುವಂತೆ ಸೂಚಿಸಿದರು.
ಹೆಬ್ರಿ ಗ್ರಾಪಂ ವ್ಯಾಪ್ತಿಯ ನಂಚಾರು ಮಿಯಾರುವಿನಲ್ಲಿ ನವಯುಗ ಜಲ್ಲಿ ಕ್ರಷರ್‌ನ ಪರವಾನಿಗೆ ಅವಧಿ ಕಳೆದ ಜನವರಿ ತಿಂಗಳಲ್ಲೇ ಮುಗಿದಿದ್ದರೂ, ಈಗಲೂ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿಶ್ವನಾಥ್ ಪೇತ್ರಿ ದೂರಿದರು. ಇದು ಕಾನೂನಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತಿದ್ದು, 50ಮೀ. ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ದಲಿತರ ಮನೆ, ಶಾಲೆಗಳಿವೆ ಎಂದರು.
ಗಂಗೊಳ್ಳಿಯ ಮಾಂಕಾಳಿ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಅಜಲು ಪದ್ಧತಿಯನ್ನು ಆಚರಿಸಲಾಗಿದೆ ಎಂದು ಚಂದ್ರಮ ತಲ್ಲೂರು ದೂರಿದರು. ತಲ್ಲೂರು ಕೋಟೆಬಾಗಿಲು ಅಂಗನವಾಡಿಯಲ್ಲಿ ಸಂಜೆ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಹೊಸಾಡು ಗ್ರಾಪಂನ ಅಧ್ಯಕ್ಷರು ದಲಿತರ ಮನೆಗೆ ಹೋಗುವ ದಾರಿಯನ್ನು ನೀಡದೇ ದಿಗ್ಭಂಧನ ವಿಧಿಸಿದ್ದಾರೆ ಎಂದೂ ಅವರು ಎಸ್ಪಿ ಬಳಿ ದೂರಿದರು. ಈ ಬಗ್ಗೆ ಕ್ರಮದ ಭರವಸೆಯನ್ನು ಅವರು ನೀಡಿದರು.
ಮರಳುಗಾರಿಕೆಗೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳ ವಿರುದ್ಧ ಅಕ್ರಮದ ದೂರು ಸಲ್ಲಿಸಿದ ನಮಗೆ ಕೆಲವರಿಂದ ಬೆದರಿಕೆ ಇದೆ ಎಂದು ಉದಯಕುಮಾರ್ ತಲ್ಲೂರು ದೂರಿದರು.
ಮರಳುಗಾರಿಕೆಯಲ್ಲಿ ದುಡಿಯುತ್ತಿರುವ ಹೊರ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಎಲ್ಲಾ ಕಾರ್ಮಿಕರ ಮಾಹಿತಿಗಳನ್ನು ಸಂಗ್ರಹಿಸಿ ಡಾಟಾಬೇಸ್ ಸಿದ್ಧಪಡಿಸಬೇಕೆಂದು ನಿಂಬರಗಿ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಎಲ್ಲಾ ಮಾಹಿತಿಗಳು ಗುತ್ತಿಗೆ ದಾರರ ಬಳಿಯೂ ಇರುವಂತೆ ನೋಡಿಕೊಳ್ಳಿ ಎಂದರು.
ಸಿದ್ಧಾಪುರದ ಅಟೋ ನಿಲ್ದಾಣದಲ್ಲಿ ಇಬ್ಬರು ದಲಿತರ ಅಟೋರಿಕ್ಷಾಗಳಿಗೆ ನಿಲ್ಲಲು ಗ್ರಾಪಂ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಿರುವುದರತ್ತ ವಾಸುದೇವ ಅವರು ಎಸ್ಪಿಯವರ ಗಮನ ಸೆಳೆದರು. ಇಬ್ಬರ ನಂತರ ಬಂದವರಿಗೂ ಅದೇ ನಿಲ್ದಾಣದಲ್ಲಿ ನಿಲ್ಲಲು ಅವಕಾಶ ನೀಡಲಾಗಿದ್ದು, ದಲಿತರೆಂಬ ಕಾರಣಕ್ಕೆ ಇಬ್ಬರು ಚಾಲಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಚಂದ್ರ ಶೆಟ್ಟಿ ಎಂಬವರು ಇವರಿಗೆ ಬೆದರಿಕೆಯನ್ನೂ ಹಾಕುತಿದ್ದಾರೆ ಎಂದು ವಾಸುದೇವ ಹೇಳಿದರು.
ಸಾರ್ವಜನಿಕರು ಬೀಟ್ ಪೊಲೀಸರಿಗೆ ನೀಡುವ ಗುಪ್ತ ಮಾಹಿತಿಗಳು ಸಂಬಂಧಿತರಿಗೆ ಸೊರಿಕೆಯಾಗುತ್ತಿದೆ. ಇದರಿಂದ ಮಾಹಿತಿ ನೀಡುವವರಿಗೆ ತೊಂದರೆಯಾಗುತ್ತಿದೆ ಎಂದು ಉದಯಕುಮಾರ್ ತಲ್ಲೂರು ಹೇಳಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಲಾಯಿತು.
ರಾಜ್ಯ ಸರಕಾರದ ಆರ್‌ಟಿಇ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ಬ್ರಹ್ಮಾವರದ ಜಿಎಂ ಪಬ್ಲಿಕ್ ಸ್ಕೂಲ್ ತಾನು ತುಳು ಭಾಷಾ ಅಲ್ಪಸಂಖ್ಯಾತ ಎಂದು ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದೆ. ಇದರಿಂದ ಆಸುಪಾಸಿನ ದಲಿತರ ಹಾಗೂ ಹಿಂದುಳಿದವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಭಾಸ್ಕರ್ ಬೈಂದೂರು ಹೇಳಿದರು.
ಚೇರ್ಕಾಡಿ, ಪೇತ್ರಿ ಪರಿಸರದಲ್ಲಿ ಈಗಲೂ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಚೇರ್ಕಾಡಿ ಮುಣ್ಕಿನಜೆಡ್ಡು ಶಾಲೆಯ ಬಳಿ ಮರಳುಗಾರಿಕೆಗೆ ಹೊಸ ಅಧಿಕಾರಿ ಬಂದ ಬಳಿಕ ದಾಳಿ ನಡೆದು ಅದು ನಿಂತರೂ, ಅಲ್ಲೇ ಸಮೀಏಪದಲ್ಲಿ ಚೇರ್ಕಾಡಿ ಹಂಚಿನ ಕಾರ್ಖಾನೆ ಬಳಿ ಇಮ್ರಗೋಡಿನಲ್ಲಿ, ಮಡಿಯಲ್ಲಿ ಕುಕ್ಕೆಹಳ್ಳಿಯ ಕಮಲಮಜಲು ಪರಿಸರದಲ್ಲಿ ಈಗಲೂ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಉಮೇಶ್‌ಕುಮಾರ್ ಹೇಳಿದರು.
ಮಡಿಸಾಲು ಹೊಳೆಯ ಮರಳುಗಾರಿಕೆಗೆ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿ, ವಸ್ತುಗಳನ್ನು ವಶಪಡಿಸಿಕೊಂಡಿದ್ದು ಎಂದು ಹೇಳಿದ ಎಸ್ಪಿ, ಇಲ್ಲಿ ಕೇಳಿಬಂದಿರುವ ದೂರಿನ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ಎಎಸ್ಪಿ ಕುಮಾರಚಂದ್ರ ಅಲ್ಲದೇ, ಡಿವೈಎಸ್ಪಿಗಳು, ವಿವಿಧ ವೃತ್ತಗಳ ಸಿಪಿಐಗಳು ಉಪಸ್ಥಿತರಿದ್ದರು.







