ಮಂಗಳೂರು: ಸ್ಕಾರ್ಫ್ ಧರಿಸಿದ್ದಕ್ಕೆ ಪರೀಕ್ಷೆ ಬರೆಯಲು ನಿರಾಕರಣೆ ಆರೋಪ
ಪ್ರಾಂಶುಪಾಲರನ್ನು ತರಾಟೆಗೆತ್ತಿಕೊಂಡ ಡಿಡಿಪಿಯು

ಮಂಗಳೂರು, ಮಾ. 1: ಸ್ಕಾರ್ಫ್ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದಿದ್ದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಗೆ ಪರೀಕ್ಷೆಗೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ನಗರದ ಕೆನರಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಗುರುವಾರ ನಡೆದಿದೆ.
ಸ್ಕಾರ್ಫ್ ಧರಿಸಿಕೊಂಡು ಪರೀಕ್ಷೆಗೆ ಆಗಮಿಸಿದ ವಿಟ್ಲದ ವಿದ್ಯಾರ್ಥಿನಿಗೆ ಕೆನರಾ ಕಾಲೇಜಿನ ಪ್ರಾಂಶುಪಾಲರು ಸ್ಕಾರ್ಫ್ ತೆಗೆಯುವಂತೆ ವಿದ್ಯಾರ್ಥಿನಿಗೆ ಸೂಚಿಸಿದ್ದು, ತೆಗೆಯದಿದ್ದರೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾರೆ.
ಕೊನೆಗೆ ಪರೀಕ್ಷೆ ಬರೆಯುವ ಸಲುವಾಗಿ ವಿದ್ಯಾರ್ಥಿನಿ ಸ್ಕಾರ್ಫ್‌ನ್ನು ತೆಗೆದ ನಂತರವೇ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಡಿಡಿಪಿಯು ಭೇಟಿ: ಪ್ರಾಂಶುಪಾಲರಿಗೆ ತರಾಟೆ
ಕೆನರಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆಯ ಬಗ್ಗೆ ಡಿಡಿಪಿಯು ತಿಮ್ಮಯ್ಯ ಅವರನ್ನು ಸಂಪರ್ಕಿಸಿದಾಗ ಘಟನೆಯ ಬಗ್ಗೆ ಮಾಹಿತಿ ಪಡೆದು ಕೂಡಲೇ ಪರೀಕ್ಷಾ ಕೇಂದ್ರ ಭೇಟಿ ನೀಡಿದ್ದೇನೆ. ಕೇಂದ್ರದಲ್ಲಿದ್ದ ಕಾಲೇಜಿನ ಪ್ರಾಂಶುಪಾಲರನ್ನು ತರಾಟೆಗೆ ತೆಗೆಕೊಂಡಿದ್ದೇನೆ. ವಿದ್ಯಾರ್ಥಿನಿಯು ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಹೋದರನ ಹೇಳಿಕೆ
"ತನ್ನ ತಂಗಿ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಿಯುತ್ತಿದ್ದು, ಇಂದು ಆಕೆಗೆ ಭೌತಶಾಸ್ತ್ರ ವಿಷಯದಲ್ಲಿ ಪರೀಕ್ಷೆಯಿತ್ತು. ಪರೀಕ್ಷೆ ಬರೆಯಲು ಕೆನರಾ ಕಾಲೇಜಿಗೆ ತೆರಳಿದ್ದಳು. ಈ ವೇಳೆ ತನ್ನ ತಂಗಿ ಸೇರಿ ಇಬ್ಬರು ವಿದ್ಯಾರ್ಥಿನಿಗಳ ಸ್ಕಾರ್ಫ್ ತೆಗೆಯುವಂತೆ ಹೇಳಿದ ಪರೀಕ್ಷಾ ಕೊಠಡಿಯ ವೀಕ್ಷಕಕರು, ನಂತರ ಕೊಠಡಿಯಿಂದ ಹೊರಹೋಗುವಂತೆ ಹೇಳಿದ್ದೂ ಅಲ್ಲದೆ, "ಸ್ಕಾರ್ಫ್ ತೆಗೆದು ಬನ್ನಿ. ಇದು ಪರೀಕ್ಷಾ ನಿಯಮ" ಎಂದು ಹೇಳಿದ್ದಾರೆ.
ಈ ಸಂಬಂಧ ಈಕೆ ಅಲೋಶಿಯಸ್ ಕಾಲೇಜಿನ ಅಧ್ಯಾಪಕರಿಗೆ ಕರೆಯ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದು, ಇದಕ್ಕೆ ಅಲೋಶಿಯಸ್ ಅಧ್ಯಾಪಕರೊಬ್ಬರು ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯಿರಿ, ತಾನು ಪ್ರಾಂಶುಪಾಲರೊಂದಿಗೆ ಮಾತನಾಡುತ್ತೇನೆ. ಪರೀಕ್ಷೆಯನ್ನು ಬರೆಯದೇ ಇರಬೇಡಿ ಎಂದು ಹೇಳಿದ್ದರು.
ತದನಂತರ ತಂಗಿ ಹಾಗೂ ಆಕೆಯ ಸ್ನೇಹಿತೆಯರು ಮತ್ತೆ ಪರೀಕ್ಷೆ ಕೊಠಡಿಯ ಒಳಗೆ ಹೋಗುವಾಗ ಮತ್ತೆ ಗದರಿಸಿದ ಪರೀಕ್ಷಾ ಕೊಠಡಿ ವೀಕ್ಷಕರು "ಸ್ಕಾರ್ಫ್‌ನ ಶಾಲನ್ನು ಬುಜದ ಮೇಲೂ ಹಾಕಬಾರದು. ಶಾಲನ್ನು ಹೊರಗಿಟ್ಟು ಬನ್ನಿ. ನಿಮಗೆ ಹೇಳಿದರೆ ಅರ್ಥ ಆಗವುದಿಲ್ವ" ಎಂದು ಹೇಳಿದ್ದಾರೆ.
ಇದರಿಂದ ಮತ್ತೆ ನೊಂದ ವಿದ್ಯಾರ್ಥಿನಿಯರು ಅಲೋಶಿಯಸ್ ಕಾಲೇಜಿನ ಅಧ್ಯಾಪಕರಿಗೆ ಕರೆ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಅಲೋಶಿಯಸ್ ಕಾಲೇಜಿನ ಅಧ್ಯಾಪಕರೊಬ್ಬರು ಈ ಬಗ್ಗೆ ಪ್ರಾಂಶುಪಾಲರೊಂದಿಗೆ ಸಂಪರ್ಕಕ್ಕೆ ಮುಂದಾಗಿದ್ದು, ಅದು ಸಾಧ್ಯವಾಗಿಲ್ಲ. ತದನಂತರ ಪರೀಕ್ಷಾ ದೃಷ್ಟಿಯಿಂದ ತನ್ನ ತಂಗಿ ಪರೀಕ್ಷೆ ಬರೆದಿದ್ದಾಳೆ. ನಂತರ ತನಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಡಿಡಿಪಿಯು ತಿಮ್ಮಯ್ಯ ಅವರನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿನಿಯೊಬ್ಬಳ ಸಹೋದರ 'ವಾರ್ತಾಭಾರತಿ'ಗೆ ಮಾಹಿತಿ ನೀಡಿದ್ದಾರೆ.
ಖಂಡನೆ
ಪರೀಕ್ಷಾ ಸಮಯದಲ್ಲಿ ವಸ್ತ್ರಸಂಹಿತೆ ನೆಪವೊಡ್ಡಿ ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುವಂತಹ ಶೈಕ್ಷಣಿಕ ಸಂಸ್ಥೆಯ ನಡವಳಿಕೆಯು ಖಂಡನೀಯ. ಇಂತಹ ವಿದ್ಯಾಸಂಸ್ಥೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಎಫ್‌ಐನ ಜಿಲ್ಲಾಧ್ಯಕ್ಷ ಇಮ್ರಾನ್ ಅವರು ಒತ್ತಾಯಿಸಿದ್ದಾರೆ.







