ಕುಡಿಯುವ ನೀರಿನ ಕಾಮಗಾರಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ ತಾಪಂ ತ್ರೈಮಾಸಿಕ ಕೆಡಿಪಿಯಲ್ಲಿ ಶಾಸಕ ಸೊರಕೆ ಸೂಚನೆ
ಉಡುಪಿ, ಮಾ.1: ಈ ಬಾರಿ ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಜನರು ಬವಣೆ ಪಡಬಾರದು. ಕುಡಿಯುವ ನೀರಿನ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಹುದಾದ ಸನ್ನಿವೇಶಗಳಿದ್ದರೆ, ಬೋರ್‌ವೆಲ್, ಬಾವಿಗಳ ರಿಪೇರಿ, ಪೈಪ್‌ಲೈನ್, ಪಂಪು ಕನೆಕ್ಷನ್ ಮೊದಲಾದ ಕೆಲಸಗಳಾಗಬೇಕೆಂದಾದರೆ ಅತಿ ಜರೂರು ಪ್ರಕರಣಗಳೆಂದು ಪರಿಗಣಿಸಿ ಆಯಾ ಗ್ರಾಪಂಗಳ ಪಿಡಿಒಗಳು ಐದು ಲಕ್ಷ ರೂ.ವರೆಗಿನ ಮೊತ್ತಕ್ಕೆ ಸರಿಯಾಗಿ ಕಾಮಗಾರಿಯ ಪ್ರಸ್ತಾವನೆಯನ್ನು ಶಾಸಕರ ಅಧ್ಯಕ್ಷತೆಯ ಕುಡಿಯುವ ನೀರಿನ ಟಾಸ್ಕ್‌ಫೋರ್ಸ್ ಸಮಿತಿಗೆ ಅಥವಾ ತಾಪಂ ಇಒಗೆ ತುರ್ತಾಗಿ ಕಳುಹಿಸಿಕೊಡುವಂತೆ ಕಾಪು ಶಾಸಕ ವಿನಯಕುಮಾರ್ ಸೊರಕೆ ಸಂಬಂಧಿತರಿಗೆ ಸೂಚನೆಗಳನ್ನು ನೀಡಿದ್ದಾರೆ.
ಉಡುಪಿ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು. ಪೂರ್ತಿಯಾಗದ ಬಾವಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿ ಸುವಂತೆ, ಕುಡಿಯುವ ನೀರಿನ ಯಾವುದೇ ಕಾಮಗಾರಿಯನ್ನು ವಿಳಂಬ ಮಾಡದೆ ನಡೆಸುವಂತೆ ಶಾಸಕರು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಕಾಪುಗೆ 57ಕೋಟಿ ರೂ.ಮಂಜೂರು: ಕುಡಿಯುವ ನೀರಿನ ಕಾಮಗಾರಿ ಗಳಿಗೆ ಸಂಬಂಧಿಸಿದಂತೆ ಕಾಪು ಪಟ್ಟಣಕ್ಕೆ ನೀರು ಸರಬರಾಜು ಮಾಡುವ 57 ಕೋಟಿ ರೂ. ಯೋಜನೆಗೆ ಕ್ಯಾಬಿನೆಟ್ ಮಂಜೂರಾತಿ ದೊರೆತಿದೆ. ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ. ಶಾಶ್ವತವಾಗಿ 25 ವರ್ಷಗಳ ದೂರದೃಷ್ಟಿತ್ವದಲ್ಲಿ ಈ ಯೋಜನೆ ಅನುಷ್ಠಾನಿಸಲಾಗುತ್ತಿದೆ. ಕುರ್ಕಾಲು, ಇನ್ನಂಜೆ, ಮೂಡಬೆಟ್ಟು, ಮಜೂರು ಅಕ್ಕಪಕ್ಕದ ಗ್ರಾಮಗಳಿಗೂ ಇದೇ ಯೋಜನೆಯಲ್ಲಿ ನೀರು ಸರಬರಾಜು ಮಾಡಲಾಗುವುದು.
ಬಿಪಿಎಲ್ ಕಾರ್ಡ್: ಬಿಪಿಎಲ್ ಕಾರ್ಡಿಗೆ ಅರ್ಜಿ ಕೊಟ್ಟವರು ಆದಾಯ ಸರ್ಟಿಫಿಕೇಟ್ ಮತ್ತು ಆಧಾರ್ ಕಾರ್ಡು ತಂದರೆ ಸ್ಥಳದಲ್ಲಿಯೇ ಜೋಡಣೆ ಮಾಡಿ ಬಿಪಿಎಲ್ ಕಾರ್ಡ್ ವಿತರಿಸುವ ಯೋಜನೆಗೆ ಸುತ್ತೋಲೆ ಹೊರಡಿಸಲಾಗಿದೆ. ಮಾ. 9ರವರೆಗೆ ಈ ಕಾರ್ಯ ನಡೆಯಲಿದೆ. ಹಿರಿಯಡಕ, ಕಾಪು, ಪಡುಬಿದ್ರಿಯ 3 ಕೇಂದ್ರಗಳಲ್ಲಿ 3 ದಿನದಲ್ಲಿ 500 ಬಿಪಿಎಲ್ ಕಾರ್ಡ್ ವಿರಿಸಲಾಗಿದೆ ಎಂದವರು ವಿವರಿಸಿದರು.
ಕೇಂದ್ರ ಸರಕಾರದ ಸಿಆರ್‌ಎಫ್ ಯೋಜನೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಾಗಲೀ, ರಾಜ್ಯದ ಪಿಡಬ್ಲೂಡಿ ಇಲಾಖೆ ನಡೆಸುವ ರಸ್ತೆ ಕಾಮಗಾರಿಗಳಲ್ಲೇ ಆಗಲಿ ಯಾವುದೇ ರಸ್ತೆ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗಳಿಗೆ ಹಾನಿಯಾದರೆ ಅದನ್ನು ಸರಿಪಡಿಸುವ, ನಷ್ಟ ಭರಿಸುವ ಸಂಪೂರ್ಣ ಜವಾಬ್ದಾರಿ ಇಲಾಖೆಯದ್ದೇ ಆಗಿದೆ ಎಂದು ಸೊರಕೆ ಹೇಳಿದರು.
ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ 94ಸಿ, 94ಸಿಸಿ, ಅಕ್ರಮ-ಸಕ್ರಮ, ಸಿಆರ್‌ಝೆಡ್, ಗೋಮಾಳ, ಡೀಮ್ಡ್ ಫಾರೆಸ್ಟ್ ಹಕ್ಕುಪತ್ರ ಸಮಸ್ಯೆಗಳ ಕುರಿತು ಚರ್ಚಿಸಲು ಇದ್ದರೂ, ಉಡುಪಿ ತಹಶೀಲ್ದಾರ್ ಅವರು ಗೈರುಹಾಜರಾಗಿದ್ದ ಕಾರಣ ವಿಷಯ ಕುರಿತ ಚರ್ಚೆ ನಡೆಯಲಿಲ್ಲ. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸಭೆ ಮುಗಿದ ಬಳಿಕ ಬಂದರು. ಹೀಗಾಗಿ ಸಭೆಯಲ್ಲಿ ಕಂದಾಯ ಇಲಾಖೆಯ ಬಹುಮುಖ್ಯ ಸಮಸ್ಯೆಗಳು ಚರ್ಚೆಗೆ ಬರಲಿಲ್ಲ.
ಸಭೆಯಲ್ಲಿ ಬೋರ್‌ವೆಲ್, ವರ್ಷವಾದರೂ ಬಾರದ ಓಟರ್ ಐಡಿ, ನರೇಗಾ ಕಾಮಗಾರಿ, ಅನಿಲ ಭಾಗ್ಯ, ಪಠ್ಯಪುಸ್ತಕ ವಿಳಂಬ, ಆಸ್ಪತ್ರೆಯ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ದೇವಿಪ್ರಸಾದ್ ಶೆಟ್ಟಿ ಬೆಳಪು, ಗೀತಾ ವಾಗ್ಳೆ ಶಶಿಪ್ರಭಾ ಶೆಟ್ಟಿ ಮತ್ತಿತರರು ಸಮಸ್ಯೆಗಳ ಕುರಿತು ಮಾತನಾಡಿದರು.
ಪರಿಹಾರದ ಚೆಕ್ ವಿತರಣೆ: ಕೃಷಿ ಮಾಡುತ್ತಿದ್ದಾಗ ಮೃತಪಟ್ಟ ಅಣ್ಣಯ್ಯ ನಾಯಕ್ ಪೆರ್ಡೂರು ಅವರ ಕುಟುಂಬಕ್ಕೆ ಹಾಗೂ ಹೆಜಮಾಡಿಯಲ್ಲಿ ನೀರಿಗೆ ಬಿದ್ದು ಮಗು ಮೃತಪಟ್ಟ ಕುಟುಂಬಕ್ಕೆ ತಲಾ 1 ಲ.ರೂ. ಚೆಕ್ ಅನ್ನು ಶಾಸಕ ವಿನಯಕುಮಾರ್ ಸೊರಕೆಯವರು ವಿತರಿಸಿದರು.
ಉಡುಪಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಪಡುಬಿದ್ರಿ, ಜಿಪಂ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಉಪಸ್ಥಿತರಿದ್ದರು.
ಕೊನೆಯ ಸಭೆಗೆ ಅಭಿನಂದನೆ
ಈಗಿನ ಸರಕಾರದಲ್ಲಿ ತ್ರೈಮಾಸಿಕ ಕೆಡಿಪಿ ಕೊನೆಯ ಸಭೆ ಇದಾಗಿದ್ದು, ಈವರೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕರಿಸಿದ ವಿಪಕ್ಷೀಯರು, ಅಧಿಕಾರಿಗಳ ಸಹಿತ ಸರ್ವರಿಗೂ ವಿನಯಕುಮಾರ್ ಸೊರಕೆ ಅಭಿನಂದನೆ ಸಲ್ಲಿಸಿದರು.







