ದತ್ತಮಾಲಾಧಾರಿಗಳನ್ನು ಅವಮಾನಿಸಿದ ಆರೋಪ : ಹೆಚ್ ಡಿ ಕೆ ಕ್ಷಮೆ ಕೇಳಲು ಆಗ್ರಹಿಸಿ ಧರಣಿ
ಜೆಡಿಎಸ್ ಮುಖಂಡರು ಹೇಳಿದ್ದೇನು ?

ಚಿಕ್ಕಮಗಳೂರು, ಮಾ.1: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದತ್ತಮಾಲಾಧಾರಿಗಳನ್ನು ಭಿಕ್ಷುಕರೆಂದು ಕರೆದಿದ್ದು, ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಬಜರಂಗದಳ ಹಾಗೂ ವಿಎಚ್‍ಪಿ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಇತ್ತೀಚೆಗೆ ಮೂಡಿಗೆರೆಗೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ದತ್ತಮಾಲಾಧಾರಿಗಳನ್ನು ಭಿಕ್ಷುಕರೆಂದು ಹೀಯಾಳಿಸುವ ಮೂಲಕ ದತ್ತಮಾಲಾಧಾರಿಗಳನ್ನು ಅವಮಾನಿಸಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಇರುವ ಲಕ್ಷಾಂತರ ದತ್ತಮಾಲಾಧಾರಿಗಳ ನಂಬಿಕೆಯನ್ನು ಘಾಸಿಗೊಳಿಸಿದ್ದಾರೆ. ಒಂದು ಪ್ರಮುಖ ರಾಜಕೀಯ ಪಕ್ಷದ ಉನ್ನತ ಸ್ಥಾನದಲ್ಲಿರುವ ಹಾಗೂ ಮಾಜಿ ಮುಖ್ಯಮಂತ್ರಿಯಾಗಿದ್ದವರು ಕೇವಲ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕಾಗಿ ಇಂತಹ ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಅವರ ಸ್ಥಾನಕ್ಕೆ ಚ್ಯುತಿ ತಂದುಕೊಂಡಿದ್ದಾರೆ ಎಂದು ಈ ವೇಳೆ ಧರಣಿ ನಿರತ ಸಂಘಪರಿವಾರದ ಕಾರ್ಯಕರ್ತರು ಟೀಕಿಸಿದರು.
ಅಲ್ಪಸಂಖ್ಯಾತರ ಮತಗಳಿಕೆಯ ಉದ್ದೇಶದಿಂದ ಕುಮಾರಸ್ವಾಮಿ ದತ್ತಮಾಲಾಧಾರಿಗಳನ್ನು ಭಿಕ್ಷುಕರಿಗೆ ಹೋಲಿಸಿ ನಾಡಿನ ಬಹುಸಂಖ್ಯಾತ ಹಿಂದುಗಳ ಭಾವನೆಗೆ ಪೆಟ್ಟು ನೀಡಿದ್ದಾರೆಂದ ಅವರು, ಕುಮಾರಸ್ವಾಮಿ ಅವರಿಗೆ ನಿಜವಾಗಿಯೂ ಹಿಂದೂ ಧರ್ಮೀಯರ ಮೇಲೆ ಕಾಳಜಿ ಇದ್ದಲ್ಲಿ ದತ್ತಮಾಲಾಧಾರಿಗಳ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಸಿದರು.
ನಂತರ ಈ ಸಂಬಂಧ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದರು.
ಪುಂಡಾಟಿಕೆ ನಿಲ್ಲಿಸದಿದ್ದರೆ ಸೂಕ್ತ ಪಾಠ : ದೇವರಾಜ್
ಸಂಘಪರಿವಾರದ ಕಾರ್ಯಕರ್ತರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡುವ ಕೃತ್ಯದಲ್ಲಿ ನಿರತರಾಗಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ಮುಖಂಡರು ಸಂಘಪರಿವಾರದ ಕಾರ್ಯಕರ್ತರ ಪುಂಡಾಟಿಕೆ ಕಡಿವಾಣ ಹಾಕದಿದ್ದಲ್ಲಿ ತಕ್ಕ ಪಾಠ ಕಲಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಎಚ್ಚರಿಸಿದ್ದಾರೆ.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಪರಿವಾರದ ಕಾರ್ಯಕರ್ತರು ವಿನಾಕಾರಣ ಪಕ್ಷದ ವರಿಷ್ಠರ ವಿರುದ್ಧ ಅಪಪ್ರಚಾರ ಮಾಡುತ್ತಾ ತೇಜೋವಧ ಮಾಡುವ ಕಾನೂನು ಬಾಹಿತ ಕೃತ್ಯಕ್ಕೆ ಕೈ ಹಾಕಿದ್ದಾರೆ. ಕುಮಾರಸ್ವಾಮಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ನಿಂದಿಸಲೂ ಮುಂದಾಗಿದ್ದಾರೆ. ಈ ಕೃತ್ಯದ ಹಿಂದೆ ಕ್ಷೇತ್ರದ ಶಾಸಕರ, ಬಿಜೆಪಿ ಮುಖಂಡರ ಕೈವಾಡವಿದೆ. ಇದನ್ನು ಪಕ್ಷದ ಕಾರ್ಯಕರ್ತರು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಪಕ್ಷದಲ್ಲಿ ಇಂತಹ ಪುಂಡರನ್ನು ಹತ್ತಿಕ್ಕುವ ಯುವ ಪಡೆ ಇದೆ. ಆದರೆ ಸಮಾಜದ ಶಾಂತಿಗೆ ಬಂಗ ತರುವ ಉದ್ದೇಶ ಪಕ್ಷಕ್ಕಿಲ್ಲ. ಆದ್ದರಿಂದ ಬಿಜೆಪಿ ಪಕ್ಷದ ಮುಖಂಡರು ಸಂಘಪರಿವಾರದ ಪುಂಡರ ಪುಂಡಾಟಿಕೆಗೆ ಕಡಿವಾಣ ಹಾಕದಿದ್ದಲ್ಲಿ ತಕ್ಕ ಪಾಠ ಕಲಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ರಾಜ್ಯ ವಕ್ತಾರ ಎಸ್.ಎಲ್.ಭೋಜೇಗೌಡ ಮಾತನಾಡಿ, ಮೂಡಿಗೆರೆ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ ದತ್ತಮಾಲಾಧಾರಿಗಳನ್ನು ಭಿಕ್ಷುಕರಿಗೆ ಹೋಲಿಸಿಲ್ಲ. ಯುವಜನತೆ ಧರ್ಮ ಅಮಲಿಗೆ ಸಿಲುಕಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ಬುದ್ಧಿವಾದ ಹೇಳಿದ್ದಾರಷ್ಟೆ. ಆದರೆ ಸಂಘಪರಿವಾರದ ಸದಸ್ಯರು ಚುನಾವಣೆ ಸಂದರ್ಭದಲ್ಲಿ ವರಿಷ್ಠರ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಹಿಂದೆ ಕಾಣದ ಕೈಗಳು ಹುನ್ನಾರ ನಡೆಸಿವೆ. ಸಂಘಪರಿವಾರದವರಿಗೆ ನಿಜವಾಗಿಯೂ ಹಿಂದೂಗಳ ಮೇಲೆ ಕಾಳಜಿ ಇದ್ದಲ್ಲಿ ಆಲ್ದೂರಿನಲ್ಲಿ ಬಜರಂಗದಳದ ಮುಖಂಡ ದಲಿತ ಯುವಕರ ಮೇಲೆ ಹಲ್ಲೆ ನಡೆಸಿದಾಗ ಘಟನೆಯನ್ನು ಖಂಡಿಸದೇ ಮೌನ ವಹಿಸದ್ದೇಕೆ ಎಂದು ಅವರು ಪ್ರಶ್ನಿಸಿದರು.
ಈ ವೇಳೆ ಜೆಡಿಎಸ್‍ನ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ, ಜಿಲ್ಲಾ ವಕ್ತಾರ ಗಿರೀಶ್, ಮುಖಂಡರಾದ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.







