ಸಿರಿಯ: ನೆರವು ಸಾಮಗ್ರಿ ಹೊತ್ತ 40 ಟ್ರಕ್‌ಗಳು ಇನ್ನೂ ಹೊರಟಿಲ್ಲ
ಪೂರ್ವ ಘೌಟದಲ್ಲಿ ಯುದ್ಧವಿರಾಮದ ಹೊರತಾಗಿಯೂ ದಾಳಿ ನಿರಂತರ

ವಿಶ್ವಸಂಸ್ಥೆ, ಮಾ. 1: ಸಿರಿಯದಲ್ಲಿ ಸರಕಾರಿ ಪಡೆಗಳ ದಾಳಿಯಿಂದ ಜರ್ಝರಿತಗೊಂಡಿರುವ ಪೂರ್ವ ಘೌಟ ಪ್ರದೇಶಕ್ಕೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು 40 ಟ್ರಕ್‌ಗಳು ಸಿದ್ಧವಾಗಿ ನಿಂತಿವೆ; ಆದರೆ, ವಿಶ್ವಸಂಸ್ಥೆ ಪ್ರಾಯೋಜಿತ ಯುದ್ಧವಿರಾಮದ ಹೊರತಾಗಿಯೂ ಅಲ್ಲಿ ಯುದ್ಧ ನಿಂತಿಲ್ಲ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಬಂಡುಕೋರರ ನಿಯಂತ್ರಣದ ಪೂರ್ವ ಘೌಟ ನಗರದಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಮಾರ್ಕ್ ಲೋಕಾಕ್ ಹೇಳಿದರು.
‘‘ನಿಮ್ಮ ಯುದ್ಧವಿರಾಮ ನಿರ್ಣಯ ಯಾವಾಗ ಜಾರಿಗೆ ಬರುತ್ತದೆ?’’ ಎಂದು ಅವರು ಸಿರಿಯ ಸಂಘರ್ಷ ಕುರಿತ ಮಾಸಿಕ ಭದ್ರತಾ ಮಂಡಳಿಯ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ ಕೇಳಿದರು. ಭದ್ರತಾ ಮಂಡಳಿಯ ಸದಸ್ಯರು ಅವರ ಮಾತುಗಳನ್ನು ವೌನವಾಗಿ ಆಲಿಸಿದರು.
ಮುತ್ತಿಗೆಗೆ ಒಳಗಾಗಿರುವ ನಗರದ ಪ್ರಧಾನ ಪ್ರದೇಶ ಡೌಮ ಸೇರಿದಂತೆ 10 ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಟ್ರಕ್‌ಗಳು ಶನಿವಾರದಿಂದ ಸಿದ್ಧವಾಗಿ ನಿಂತಿವೆ ಎಂದು ಲೋಕಾಕ್ ಹೇಳಿದರು.
ಬಾಂಬ್ ದಾಳಿಗಳಲ್ಲಿ ಹೆಚ್ಚಳ
ಯುದ್ಧವಿರಾಮ ನಿರ್ಣಯ ವಿಶ್ವಸಂಸ್ಥೆಯಲ್ಲಿ ಜಾರಿಗೆ ಬಂದಂದಿನಿಂದಲೂ ಮಾನವೀಯ ನೆರವು ಹೊತ್ತ ವಾಹನಗಳಿಗೆ ನಗರ ಪ್ರವೇಶಿಸಲು ಅನುಮತಿ ಸಿಕ್ಕಿಲ್ಲ ಹಾಗೂ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರನ್ನು ಹೊರಸಾಗಿಸಲು ಸಿರಿಯ ಆಡಳಿತ ಅನುಮೋದನೆ ನೀಡಿಲ್ಲ ಎಂದು ವಿಶ್ವಸಂಸ್ಥೆ ಅಧಿಕಾರಿ ಹೇಳಿದರು.
‘‘ಬದಲಿಗೆ, ಸರಕಾರಿ ಪಡೆಗಳು ಮತ್ತು ಸಿರಿಯದ ಮಿತ್ರ ದೇಶಗಳು ನಡೆಸುತ್ತಿರುವ ಬಾಂಬ್ ದಾಳಿಗಳಲ್ಲಿ ಹೆಚ್ಚಳವಾಗಿದೆ. ಸಾವು-ನೋವಿಗೀಡಾದವರ ಸಂಖ್ಯೆ ಹೆಚ್ಚುತ್ತಿದೆ’’ ಎಂದರು.
ಆರೋಪ, ಪ್ರತ್ಯಾರೋಪ
ಸಿರಿಯ ಸರಕಾರವು ಯುದ್ಧವಿರಾಮವನ್ನು ಉಲ್ಲಂಘಿಸುತ್ತಿದೆ ಎಂಬುದಾಗಿ ಅಮೆರಿಕದ ಪ್ರತಿನಿಧಿ ಕೆಲ್ಲಿ ಕ್ಯೂರೀ ಆರೋಪಿಸಿದರೆ, ಯುದ್ಧವಿರಾಮ ಉಲ್ಲಂಘನೆಗೆ ಬಂಡುಕೋರರು ಕಾರಣ ಎಂದು ರಶ್ಯದ ಪ್ರತಿನಿಧಿ ವಾಸಿಲಿ ನೆಬೆಂಝಿಯ ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರತ್ಯಾರೋಪ ಮಾಡಿದರು.
ಪೂರ್ವ ಘೌಟದಲ್ಲಿ ಫೆಬ್ರವರಿ 18ರಿಂದ ನಡೆಯುತ್ತಿರುವ ನಿರಂತರ ಬಾಂಬ್ ದಾಳಿಗಳಲ್ಲಿ 600ಕ್ಕೂ ಅಧಿಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಹೇಳಿದೆ. ಮೃತಪಟ್ಟವರಲ್ಲಿ 150ಕ್ಕೂ ಅಧಿಕ ಮಂದಿ ಮಕ್ಕಳು.







