ಅಂಗನವಾಡಿ ಮಕ್ಕಳಿಗೆ ಆಹಾರ ಪದಾರ್ಥ ಖರೀದಿಗೆ ಹಣ : ಮೇನಕಾ ಗಾಂಧಿ

ಬೆಳಗಾವಿ, ಮಾ.1: ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರ ಸೌಲಭ್ಯವನ್ನು ಸ್ಥಗಿತಗೊಳಿಸಿ, ಅದರ ಬದಲು ಪ್ರತಿ ತಿಂಗಳು ಮಕ್ಕಳಿಗೆ ಅಗತ್ಯವಿರುವ ಸಿರಿಧಾನ್ಯ ಅಥವಾ ಆಹಾರ ಪದಾರ್ಥಗಳನ್ನು ಖರೀದಿಸಲು ಹಣ ನೀಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಗುರುವಾರ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಿರುವ ಚಿಕ್ಕಮಕ್ಕಳ ತೀವ್ರ ನಿಗಾ ಘಟಕ, ಅಮೃತ ಎಂಬ ಮಾನವ ಹಾಲು ಭಂಡಾರ ಹಾಗೂ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಜನಸೇವೆಗೆ ಅರ್ಪಿಸಿ ಅವರು ಮಾತನಾಡಿದರು.
ಈಗಾಗಲೇ ಆಸ್ಸಾಂ ರಾಜ್ಯದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಆಧಾರ್ ಸಂಖ್ಯೆಯನ್ನಾಧರಿಸಿ ಅಂಗನವಾಡಿ ಮಕ್ಕಳಿಗೆ ಹಣವನ್ನು ನೀಡಲಾಗುತ್ತಿದೆ. ಆಹಾರ ಧಾನ್ಯಗಳು ಪೋಲಾಗುವುದನ್ನು ತಡೆಗಟ್ಟಲು ಈ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಅಸ್ಸಾಂ ರಾಜ್ಯವೊಂದರಲ್ಲಿಯೆ 3 ಲಕ್ಷ ಮಕ್ಕಳ ಸುಳ್ಳು ಹಾಜರಾತಿಯನ್ನು ತೋರಿಸಿ ಆಹಾರಧಾನ್ಯ ಪಡೆಯಲಾಗುತ್ತಿತ್ತು. ಅದರಂತೆ ಮಹಾರಾಷ್ಟ್ರದಲ್ಲಿ 11 ಲಕ್ಷ ಮಕ್ಕಳ ಸುಳ್ಳು ಮಾಹಿತಿಯನ್ನು ನೀಡಲಾಗಿದೆ. ಅದನ್ನು ತಡೆಗಟ್ಟಲು ನೇರವಾಗಿ ಹಣ ಅಥವಾ 30 ದಿನಗಳ ಆಹಾರ ಪೊಟ್ಟಣವನ್ನು ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮನೇಕಾ ಗಾಂಧಿ ವಿವರಿಸಿದರು.
ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಸಿರಿಧಾನ್ಯಗಳ ಆಹಾರವನ್ನು ಪೂರೈಸಬೇಕು. ಶಿಕ್ಷಣದ ಮೂಲಕ ಸರಾಗವಾಗಿ ಸಾಗಬೇಕು. ಪ್ರತಿಯೊಂದು ಮಗು ಸದೃಢವಾಗಿರಬೇಕೆ ವಿನಃ ಅಪೌಷ್ಠಿಕಾಂಶದಿಂದ ಬಳಲಬಾರದು. ಅದರಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಯಾವ ಆಹಾರ ಯಾವ ವ್ಯಕ್ತಿಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಸಂಶೋಧನೆ ಮಾಡಿ, ಆ ವ್ಯಕ್ತಿ ಆರೋಗ್ಯದಿಂದ ಇರಲು ಸಹಾಯ ಮಾಡಿ. ಇಂದು ವೈದ್ಯಕೀಯ ಕ್ಷೇತ್ರ ಬಹಳ ವಿಶಾಲವಾಗಿದೆ. ಅದಕ್ಕೆ ತಕ್ಕಂತೆ ವೈದ್ಯಕೀಯ ಮಹಾವಿದ್ಯಾಲಯ ನೂತನ ಸಂಶೋಧನೆಯಲ್ಲಿ ತೊಡಗಿ, ಸಮಾಜದ ಅನಾರೋಗ್ಯವನ್ನು ಹೋಗಲಾಡಿಸಲು ಕ್ರಮ ಕೈಕೊಳ್ಳಬೇಕು ಎಂದು ಅವರು ಹೇಳಿದರು.
ಈ ದಿಸೆಯಲ್ಲಿ ಕೆಎಲ್‌ಇ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಡಾ.ಪ್ರಭಾಕರ ಕೋರೆ ಆಸ್ಪತ್ರೆ ಸೇವಾ ಕಾರ್ಯಚಟುವಟಿಕೆಗಳಲ್ಲಿ ತೊಡಗಿರುವುದು ಶ್ಲಾಘನೀಯ. ದೇಶದ ಅನೇಕ ಆಸ್ಪತ್ರೆಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ಆಸ್ಪತ್ರೆಯಾಗಿದೆ. ಸಾಮಾನ್ಯವಾಗಿ ಆರೋಗ್ಯವಾಗಿರಬೇಕಾದರೆ ಸಸ್ಯಾಹಾರ ಅತ್ಯವಶ್ಯ ಎಂದು ಮನೇಕಾ ಗಾಂಧಿ ಹೇಳಿದರು.
ಬೇಟಿ ಬಚಾವ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಅನೇಕ ಯೋಜನೆಯನ್ನು ತಯಾರಿಸಲಾಗುತ್ತಿದೆ. ಪ್ರಾಣಿಗಳ ವಧೆಯನ್ನು ತಡೆಯಬೇಕಾಗಿದೆ. ಹಣದ ಆಸೆಗಾಗಿ ಅಧಿಕ ಹಾಲು ಪಡೆಯಲು ಪ್ರಾಣಿಗಳಿಗೆ ರಸಾಯನಿಕ ಇಂಜೆಕ್ಷನ್ ನೀಡಲಾಗುತ್ತದೆ. ಇದರಿಂದ ಮನುಷ್ಯರಿಗೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದುದರಿಂದ, ಹಾಲು ಮತ್ತು ಹಾಲಿನ ಉತ್ಪನ್ನ ಉಪಯೋಗಿಸಬೇಕಾದರೆ ಎಚ್ಚರಿಕೆವಹಿಸಿ ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಡಾ.ಶಿವಪ್ರಸಾದ್ ಗೌಡರ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರಾದ ಮಹಾಂತೇಶ ಕವಟಗಿಮಠ, ಡಾ.ಎಸ್.ಸಾಧುನವರ, ಶಂಕರಣ್ಣ ಮುನವಳ್ಳಿ, ಎಸ್.ಸಿ.ಮೆಟಗುಡ್, ಎಂ.ಸಿ.ಕೊಳ್ಳಿ, ಅಶೋಕಣ್ಣಾ ಬಾಗೇವಾಡಿ, ಜಯಣ್ಣ ಮುನವಳ್ಳಿ, ಅಮಿತ ಕೋರೆ, ಕುಲಪತಿ ಡಾ.ವಿವೇಕ ಸಾವೋಜಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಡಾ.ಎನ್.ಎಸ್.ಮಹಾಂತಶೆಟ್ಟಿ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.







