ಮಾ.4: ಕಲ್ಲೇಗ ಜಮಾಅತ್ ಸಂಗಮ
► ಮಸೀದಿ ಆಡಳಿತ ಕಮಿಟಿ-ಎನ್‌ಆರ್‌ಐ ಸಹಭಾಗಿ ► ಪರಸ್ಪರ ಸಂವಹನಕ್ಕೆ ವಾಟ್ಸ್‌ಆ್ಯಪ್ ಗ್ರೂಪ್ ರಚನೆ
ಮಂಗಳೂರು, ಮಾ.1: ಪುತ್ತೂರು ತಾಲೂಕಿನ ಕಲ್ಲೇಗ ಜುಮಾ ಮಸೀದಿಯ ಆಡಳಿತ ಕಮಿಟಿ ಹಾಗೂ ಎನ್‌ಆರ್‌ಐ ಸಮಿತಿಗಳ ನೇತೃತ್ವದಲ್ಲಿ ಮಾ. 4 ರಂದು ಮಸೀದಿಯ ವಠಾರದಲ್ಲಿ ಜಮಾಅತ್ ಸಂಗಮ-2018 ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.
ಜಮಾಅತ್ ಅಧ್ಯಕ್ಷ ಶುಕೂರ್ ಹಾಜಿಯ ನೇತೃತ್ವದಲ್ಲಿ ಕಳೆದ ವರ್ಷ ಜಮಾಅತ್‌ನ 370 ಕುಟುಂಬಗಳ ಸ್ಥಿತಿಗತಿ ಅಧ್ಯಯನ ನಡೆಸಲಾಗಿತ್ತು. ಆವಾಗ ಸಿಕ್ಕಿದ ಮಾಹಿತಿಯ ಆಧಾರದ ಮೇಲೆ ಜಮಾಅತ್ ವ್ಯಾಪ್ತಿಯ ಮುಸ್ಲಿಮರ ಸಮಗ್ರ ಕಲ್ಯಾಣಕ್ಕೆ ಮಾದರಿ ಯೋಜನೆಗಳನ್ನೂ ರೂಪಿಸಲಾಗಿದೆ. ಅಂದರೆ ಸಮೀಕ್ಷೆಯಲ್ಲಿ ಸಿಕ್ಕಿದ ಸಂಸಾರದಲ್ಲಿರುವ ಎನ್‌ಆರ್‌ಐಗಳನ್ನು ಪರಸ್ಪರ ಸಂಪರ್ಕದಲ್ಲಿರಿಸುವ ವಾಟ್ಸ್‌ಆ್ಯಪ್ ಗ್ರೂಪನ್ನು ರಚಿಸಿ ಅದರಲ್ಲಿರುವ 150 ಸದಸ್ಯರ ಮೂಲಕ ಸಂವಹನ ನಡೆಸಿ ಜಮಾಅತ್‌ವ್ಯಾಪ್ತಿಯ ಮುಸ್ಲಿಮರ ಕಲ್ಯಾಣಕ್ಕೆ ಆಡಳಿತ ಕಮಿಟಿಯು ಪಣತೊಟ್ಟಿತು.
ಜಮಾಅತ್‌ನ ಅಭಿವೃದ್ದಿಯ ಈ ಪ್ರಯತ್ನಕ್ಕೆ ವಿದೇಶದಲ್ಲಿರುವ ಯುವಕರು ಕೂಡ ಕೈಜೋಡಿಸಿದರು. ಜಮಾಅತ್ ವ್ಯಾಪ್ತಿಯಲ್ಲಿರುವ ವೈದ್ಯರು, ವಕೀಲರು, ಇಂಜಿನಿಯರ್, ಶಿಕ್ಷಕ ವರ್ಗವನ್ನು ಗುರುತಿಸಿ ಗೌರವಿಸಲಾಯಿತಲ್ಲದೆ ಅವರನ್ನು ಒಳಗೊಂಡಂತೆ ಎಲ್ಲರನ್ನೂ ಸಂಘಟಿಸಿ ಜಮಾಅತ್‌ನ ಜೊತೆ ನಿರಂತರ ಸಂಪರ್ಕದಲ್ಲಿರಲು ಪ್ರೆರೇಪಿಸಲಾಯಿತು. ಜಮಾಅತ್ ವ್ಯಾಪ್ತಿಯಲ್ಲಿರುವ ಮದ್ರಸ ಮತ್ತು ಸಂಘ ಸಂಸ್ಥೆಯ ಪ್ರಮುಖರ ಸಭೆ ನಡೆಸಿ ಸಮುದಾಯದ ಕಲ್ಯಾಣ ಯೋಜನೆಯ ಗುರಿ ಹಾಗೂ ಅದಕ್ಕೆ ತಯಾರಿ ಕುರಿತಂತೆ ಕಾರ್ಯಾಗಾರ ನಡೆಸಲಾಯಿತು.
ಯುವಕರಿಗೆ ಸಮುದಾಯದ ಉನ್ನತಿಗಾಗಿ ಶ್ರಮಿಸುವ ಪ್ರಯತ್ನದ ಉದ್ದೇಶ ಹಾಗೂ ಆದರ್ಶ ನಾಯಕತ್ವದ ಕುರಿತು ತರಬೇತಿ ನೀಡಲಾಯಿತು. ಮಹಿಳೆಯರನ್ನು ಸಂಘಟಿಸಲು ಪುಡ್ ಫೆಸ್ಟಿವಲ್ ಕಾರ್ಯಕ್ರಮ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾದ ಕಲ್ಲೇಗ ಮಸೀದಿಯ ಆಡಳಿತ ಕಮಿಟಿಯು ಜಮಾಅತ್ ಸಂಗಮ ಕಾರ್ಯಕ್ರಮ ಆಯೋಜಿಸಿದೆ.
ಅಂದು ಜಮಾಅತ್ ವ್ಯಾಪ್ತಿಯ ಮಹಿಳೆಯರ ಸಹಿತ ಎಲ್ಲರೂ ಕೂಡ ಮಸೀದಿಯ ವಠಾರ ಸೇರಲು ಸೂಚಿಸಿರುವ ಕಮಿಟಿಯು ಬೆಳಗ್ಗಿನ ಉಪಹಾರ-ಮಧ್ಯಾಹ್ನದ ಊಟದೊಂದಿಗೆ ಮೂರು ಸಮಯದ ನಮಾಝನ್ನು ಅಲ್ಲೇ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಮಕ್ಕಳಿಗೆ ಆಟ, ಯುವಕರಿಗೆ ಮಾರ್ಗದರ್ಶನ, ಮಹಿಳೆಯರಿಗೆ ಕೌನ್ಸಿಲಿಂಗ್, ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಸಂಸಾರಸ್ಥರಿಗೆ ಕುಟುಂಬ ಜೀವನದ ಮಹತ್ವ, ಹೆತ್ತವರ ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







