ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಬೆಳ್ಳಿ ಜಯಿಸಿದ ವಿನೇಶ್ ಪೋಗಟ್

ಬಿಶ್‌ಕೆಕ್(ಕಿರ್ಗಿಸ್ತಾನ್),ಮಾ.1: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ವೀರೋಚಿತ ಸೋಲುಂಡಿರುವ ಭಾರತದ ವಿನೇಶ್ ಪೋಗಟ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
2014ರ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪೋಗಟ್ ಗುರುವಾರ ನಡೆದ 50 ಕೆ.ಜಿ. ತೂಕ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಚೀನಾದ ಚುನ್ ಲೀ ವಿರುದ್ಧ 2-3 ಅಂತರದಿಂದ ಸೋತಿದ್ದಾರೆ.
ವಿನೇಶ್ ಆರಂಭದಲ್ಲಿ 0-1 ಹಿನ್ನಡೆ ಅನುಭವಿಸಿದರು. ಆ ಬಳಿಕ ಎರಡು ಅಂಕ ಗಳಿಸಿದ ವಿನೇಶ್ ಪ್ರಬಲ ಪ್ರತಿರೋಧ ಒಡ್ಡಿದರು. ಕೊನೆಯ ಕ್ಷಣದಲ್ಲಿ ಎರಡು ನಿರ್ಣಾಯಕ ಅಂಕ ಗಳಿಸಿದ ಚೀನಾದ ಕುಸ್ತಿತಾರೆ ಮತ್ತೊಮ್ಮೆ ಮುನ್ನಡೆ ಸಾಧಿಸಿದರು. ಕೊನೆಯ ತನಕ ಲೀಡ್ ಕಾಯ್ದುಕೊಂಡ ಲೀ ಪ್ರಶಸ್ತಿ ತನ್ನದಾಗಿಸಿಕೊಂಡರು.
ವಿನೇಶ್ ಸೆಮಿ ಫೈನಲ್‌ನಲ್ಲಿ ಜಪಾನ್‌ನ ಯೂಕಿ ಇರೀ ವಿರುದ್ಧ ಜಯ ಸಾಧಿಸಿ ಫೈನಲ್‌ಗೆ ತಲುಪಿದ್ದಾರೆ.
ಭಾರತದ ಇನ್ನೋರ್ವ ಕುಸ್ತಿ ತಾರೆ ಸಂಗೀತಾ 59 ಕೆ.ಜಿ. ಫ್ರೀಸ್ಟೈಲ್ ತೂಕ ವಿಭಾಗದಲ್ಲಿ ಕೊರಿಯಾದ ಜಿಯೆನ್ ಯುಮ್ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಸಂಗೀತಾ ಕ್ವಾರ್ಟರ್ ಫೈನಲ್‌ನಲ್ಲಿ ಉಝ್ಬೇಕಿ ಸ್ತಾನದ ನಬಿರಾ ಎಸೆನ್‌ಬಾಯೆವಾ ವಿುದ್ಧ 5-15 ರಿಂದ ಸೋತಿದ್ದಾರೆ.
ವಿನೇಶ್ ಹಾಗೂ ಸಂಗೀತಾ ಇಂದು ತಲಾ ಒಂದು ಪದಕ ಗೆದ್ದ ಕಾರಣ ಭಾರತ ಕೂಟದಲ್ಲಿ ಒಟ್ಟು 4 ಪದಕ ಜಯಿಸಿದೆ. ಇದೇ ವೇಳೆ ಭಾರತದ ಇಬ್ಬರು ಗ್ರಿಕೋ-ರೋಮನ್ ಕುಸ್ತಿಪಟುಗಳು ಈಗಾಗಲೇ ಕಂಚಿನ ಪದಕ ಜಯಿಸಿದ್ದಾರೆ. ಹರ್‌ಪ್ರೀತ್ ಸಿಂಗ್ 82 ಕೆಜಿ ತೂಕ ವಿಭಾಗದಲ್ಲಿ ಉಝ್ಬೇಕಿಸ್ತಾನದ ಖಶಿಂಬೆಕೊವ್‌ರನ್ನು 11-3 ಅಂತರದಿಂದ ಸೋಲಿಸುವ ಮೂಲಕ ಕಂಚಿಗೆ ತೃಪ್ತಿಪಟ್ಟುಕೊಂಡರು. ರಾಜೇಂದ್ರ ಕುಮಾರ್ 55 ಕೆಜಿ ತೂಕ ವಿಭಾಗದಲ್ಲಿ ಉಝ್ಬೇಕಿಸ್ತಾನದ ಮಿರಾಖಮೆಡೊವ್‌ರನ್ನು ಸೋಲಿಸುವುದರೊಂದಿಗೆ ಕಂಚು ಜಯಿಸಿದರು.
ಜಪಾನ್‌ನ ಇನೊಯು ಟೊಮೊಹಿರೊ ವಿರುದ್ಧ ಶರಣಾಗಿರುವ ಕುಲ್‌ದೀಪ್ ಮಲಿಕ್(72ಕೆಜಿ), ಚೀನಾದ ಕ್ಸಿಯಾಮಿಂಗ್ ನೀ ವಿರುದ್ಧ 1-3 ರಿಂದ ಸೋತಿರುವ ನವೀನ್ ಕಂಚು ಪದಕ ವಂಚಿತರಾದರು.
ವಿಕ್ರಮ್(63ಕೆಜಿ), ಸುನೀಲ್ ಕುಮಾರ್(87ಕೆ.ಜಿ.) ಹಾಗೂ ಹರ್ದೀಪ್ ಸಿಂಗ್(97ಕೆ.ಜಿ.) ಆರಂಭಿಕ ಹಂತದಲ್ಲೇ ಸೋತು ಕೂಟದಿಂದ ಹೊರ ನಡೆದಿದ್ದಾರೆ.







