ಪಂಜಾಬ್ ಪೊಲೀಸ್ ಇಲಾಖೆಗೆ ಕೌರ್ ಸೇರ್ಪಡೆ

ಚಂಡೀಗಡ, ಮಾ.1: ಭಾರತದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪಂಜಾಬ್ ಪೊಲೀಸ್ ಇಲಾಖೆಗೆ ಪೊಲೀಸ್ ಉಪಾಧೀಕ್ಷಕರಾಗಿ(ಡಿವೈಎಸ್ಪಿ) ಸೇರ್ಪಡೆಗೊಂಡಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಪೊಲೀಸ್ ಪ್ರಧಾನ ನಿರ್ದೇಶಕ(ಡಿಜಿಪಿ)ಸುರೇಶ್ ಅರೋರ ಅವರು ಕೌರ್ ಸಮವಸ್ತ್ರಕ್ಕೆ ಸ್ಟಾರ್ಸ್ ಗಳನ್ನು ಪೋಣಿಸಿ ಪೊಲೀಸ್ ಇಲಾಖೆಗೆ ಸ್ವಾಗತಿಸಿದರು. ಈ ಹಿಂದೆ 3 ವರ್ಷ ಇಂಡಿಯನ್ ರೈಲ್ವೇಸ್‌ನಲ್ಲಿ ಕಚೇರಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಹರ್ಮನ್‌ಪ್ರೀತ್ ಪಂಜಾಬ್ ಪೊಲೀಸ್ ಇಲಾಖೆಗೆ ಸೇರುವ ಉದ್ದೇಶದಿಂದ 5 ವರ್ಷಗಳ ಒಪ್ಪಂದದ ಅವಧಿ ಮುಗಿಯುವ ಮೊದಲೇ ರೈಲ್ವೇಸ್ ಹುದ್ದೆ ತ್ಯಜಿಸಲು ನಿರ್ಧರಿಸಿದ್ದರು. ಪಂಜಾಬ್ ಮುಖ್ಯಮಂತ್ರಿ ಸಿಂಗ್ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದು ಕೌರ್ ತವರು ರಾಜ್ಯ ಪಂಜಾಬ್‌ನ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕಾಗಿ ಮನವಿ ಮಾಡಿದ ಬಳಿಕ ಕೌರ್‌ರನ್ನು ರೈಲ್ವೇಸ್ ಹುದ್ದೆಯಿಂದ ಮುಕ್ತಗೊಳಿಸಲಾಗಿತ್ತು. 2017ರ ವನಿತೆಯರ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣ ಪಂಜಾಬ್ ಮುಖ್ಯಮಂತ್ರಿ ಸಿಂಗ್ ಕಳೆದ ವರ್ಷ ಜುಲೈನಲ್ಲಿ ಕೌರ್‌ಗೆ ಡಿವೈಎಸ್ಪಿ ಹುದ್ದೆಯ ಕೊಡುಗೆ ನೀಡಿದ್ದರು.





