ಈ ಶಿವಾಜಿ ಪ್ರತಿಮೆಯ ವೆಚ್ಚ ಎಷ್ಟು ಸಾವಿರ ಕೋಟಿ ಗೊತ್ತೇ ?
ಮುಂಬೈ ಅರಬ್ಬಿ ಸಮುದ್ರದ ಕಿನಾರೆಯಲ್ಲಿ ನಿರ್ಮಿಸುವ ಯೋಜನೆ
ಮುಂಬೈ, ಮಾ.2: ಅರಬ್ಬಿ ಸಮುದ್ರದ ಕಿನಾರೆಯಲ್ಲಿ 210 ಮೀಟರ್ ಎತ್ತರದ ಶಿವಾಜಿ ಪ್ರತಿಮೆಯನ್ನು ನಿರ್ಮಿಸುವ ಯೋಜನೆಯ ಗುತ್ತಿಗೆಯನ್ನು ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್ & ಟಿ) ಪಡೆದಿದೆ. ಪ್ರತಿಮೆ ಸ್ಥಾಪನೆ ಹೆಸರಿನಲ್ಲಿ ಎರಡು ಹಂತಗಳಲ್ಲಿ ಒಟ್ಟು 3,600 ಕೋಟಿ ರೂಪಾಯಿ ಸಾರ್ವಜನಿಕ ಹಣ ವ್ಯಯವಾಗಲಿದೆ.
ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ ಮಾದರಿಯಲ್ಲಿ 2,500 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ಬೃಹತ್ ಪ್ರತಿಮೆ ನಿರ್ಮಿಸುವ ಯೋಜನೆಯ ಬಿಡ್ ಸ್ವೀಕರಿಸುವ ಪತ್ರವನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ 'ಎನ್ ಆ್ಯಂಡ್ ಟಿ'ಗೆ ನೀಡಿದರು. ಇದರಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ಸಿಕ್ಕಿದಂತಾಗಿದೆ.
ರಾಜ್ಯ ಸರ್ಕಾರ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್, ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಹಾಗೂ ಎಲ್ ಆ್ಯಂಡ್ ಟಿ ಹೀಗೆ ಮೂರು ಕಂಪನಿಗಳಿಂದ ಬಿಡ್ ಸ್ವೀಕರಿಸಿದೆ. ಎರಡು ವರ್ಷದ ಹಿಂದೆ ಈ ಯೋಜನೆಗೆ ಎಲ್ ಆ್ಯಂಡ್ ಟಿ 3,826 ಕೋಟಿ ರೂಪಾಯಿಯ ಬಿಡ್ ಸಲ್ಲಿಸಿತ್ತು. ಒಟ್ಟು 3,600 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯ ಎರಡನೇ ಹಂತದಲ್ಲಿ 1,100 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಯೋಜನೆಗೆ ಸಾರ್ವಜನಿಕ ಹಣವನ್ನೇ ಪೂರ್ಣವಾಗಿ ಬಳಸಲಾಗುತ್ತದೆ.
ತಾಂತ್ರಿಕ ಹಾಗೂ ಹಣಕಾಸು ಆಯಾಮ ಎಲ್ಲದರಲ್ಲೂ ಅರ್ಹತೆ ಪಡೆದ ಎಲ್ ಆ್ಯಂಡ್ ಟಿ 3,826 ಕೋಟಿ ರೂಪಾಯಿ ಸಲ್ಲಿಸಿತ್ತು. ಸಾಕಷ್ಟು ಮಾತುಕತೆ ಬಳಿಕ 2500 ಕೋಟಿ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ತಾಂತ್ರಿಕ ಸ್ಪರ್ಧಾತ್ಮಕ ಸುತ್ತಿನಲ್ಲಿ ರಿಲಯನ್ಸ್ ಹೊರಬಿದ್ದರೆ, ಅಫ್ಕಾನ್ 4,779 ಕೋಟಿ ರೂಪಾಯಿ ಬಿಡ್ ಸಲ್ಲಿಸಿತ್ತು.
ಮುಂಬೈ ಮಲಬಾರ್ ಹಿಲ್ ಸಮೀಪ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ನಿರ್ಮಿಸಿದ 6.8 ಎಕರೆ ಸ್ಥಳದಲ್ಲಿ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಎಂಟು ವರ್ಷಗಳ ಹಿಂದೆ 260 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸುವ ಯೋಜನೆ ಇತ್ತು. ಇದರ ವೆಚ್ಚ ಇದೀಗ 3,600 ಕೋಟಿಗೆ ಹೆಚ್ಚಿರುವುದು ವಿವಾದಕ್ಕೆ ಕಾರಣವಾಗಿದೆ.
ವಿಶ್ವದ ಅತಿ ಎತ್ತರದ ಸ್ಮಾರಕ ಎಂಬ ಖ್ಯಾತಿಗೆ ಪಾತ್ರವಾಗುವ ಸಲುವಾಗಿ 192 ಮೀಟರ್ನಿಂದ ಪ್ರತಿಮೆಯ ಎತ್ತರವನ್ನು 210 ಮೀಟರ್ಗೆ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಒಪ್ಪಿಗೆ ಪಡೆದಿತ್ತು.