ಹಿಂದೂಗಳಂತೆ ಮುಸ್ಲಿಮರೂ ನನ್ನ ಜೊತೆ ಇದ್ದಾರೆ: ಬಿಜೆಪಿ ಸಂಭಾವ್ಯ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು
ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಬಿಜೆಪಿಯಿಂದ ಹೊಸ ಮುಖ ಕಣಕ್ಕೆ?
ಕಾಂಗ್ರೆಸ್ ಭದ್ರಕೋಟೆ ಉಳ್ಳಾಲದಲ್ಲಿ 1994ರ ಬಿಜೆಪಿ ಗೆಲುವು ಸಣ್ಣ ಸಾಧನೆಯಲ್ಲ ಬಂಟ್ವಾಳ ತಾಲೂಕಿನ ಪಜೀರು ಗ್ರಾಪಂನಲ್ಲಿ ಮೂರು ಬಾರಿ ಸದಸ್ಯರಾಗಿ, ಒಂದು ಬಾರಿ ದಕ್ಷಿಣ ಕನ್ನಡ ಜಿಪಂ ಸದಸ್ಯರಾಗಿ, ಬಿಜೆಪಿಯ ತಳಮಟ್ಟದ ಕಾರ್ಯಕರ್ತನಾಗಿ, ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ಸದ್ಯ ಮಂಗಳೂರು
(ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿರುವ ಸಂತೋಷ್ ಕುಮಾರ್ ರೈ ಬೋಳಿಯಾರು
ಮಂಗಳೂರು ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪೈಕಿ ಒಬ್ಬರು. ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
► ಬಿಜೆಪಿ-ಎಸ್ಡಿಪಿಐ ಪಕ್ಷದ ಮಧ್ಯೆ ಒಳ ಒಪ್ಪಂದವಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರಲ್ಲಾ?
ಒಳ ಒಪ್ಪಂದದ ಮಾತು ಅತ್ತ ಇರಲಿ. ಈ ಎಸ್ಡಿಪಿಐ ಪಕ್ಷವನ್ನು ಬೆಳೆಸಿದ್ದು ಯಾರು? ಕಾಂಗ್ರೆಸ್ ಅಲ್ಲವೇ?. ಅದನ್ನು ಮತ್ತೆ ಸಾರಿ ಹೇಳಬೇಕೇ? ಎಸ್ಡಿಪಿಐ ತಳಮಟ್ಟದಲ್ಲಿ ಸಕ್ರಿಯಗೊಳ್ಳುತ್ತಲೇ ತಮಗೆ ಮುಳ್ಳಾಗುತ್ತಿದೆ ಎಂದು ಮನವರಿಕೆಯಾದೊಡನೆ ಬಿಜೆಪಿ-ಎಸ್ಡಿಪಿಐ ಪಕ್ಷ ಒಳ ಒಪ್ಪಂದ ಮಾಡಿದೆ ಎಂದು ಅಪಪ್ರಚಾರ ಮಾಡಲಾಗಿದೆ. ಆದರೆ ಸತ್ಯ ಏನೂಂತ ಮತದಾರರಿಗೆ ಚೆನ್ನಾಗಿ ಗೊತ್ತು.
► ಮುಂದಿನ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ನಿಮಗೆ ಟಿಕೆಟ್ ಸಿಗುವ ಖಾತ್ರಿ ಇದೆಯೇ?
ನಾನು ಸ್ಪರ್ಧಾಕಾಂಕ್ಷಿಯಲ್ಲೊಬ್ಬ. ನನಗೆ ಟಿಕೆಟ್ ಸಿಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಕ್ಷೇತ್ರದ ಅಧ್ಯಕ್ಷನಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ನನ್ನ ಗುರಿ. ನನಗೆ ಟಿಕೆಟ್ ಸಿಕ್ಕರೆ ಸಂತೋಷದಿಂದ ಸ್ವೀಕರಿಸಿ ಮುನ್ನುಗ್ಗುವೆ. ಇಲ್ಲದಿದ್ದರೆ ಯಾರಿಗೆ ಟಿಕೆಟ್ ಸಿಕ್ಕಿತೋ ಅವರ ಪರವಾಗಿ ದುಡಿಯುವೆ.
► ಇಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ಬಹಳ ಕಡಿಮೆ ಎಂದೇ ಹೇಳಲಾಗುತ್ತಿದೆಯಲ್ಲ?
1994ರಲ್ಲಿ ಕಾಂಗ್ರೆಸ್ ವಿರುದ್ಧ ಹಲವು ಮಂದಿ ಮುಸ್ಲಿಮ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮುಸ್ಲಿಮ್ ಮತಗಳು ವಿಭಜನೆಗೊಂಡು ಕಾಂಗ್ರೆಸ್ಗೆ ನಿರೀಕ್ಷೆಯಂತೆ ಸೋಲಾಯಿತು. ಬಿಜೆಪಿಯ ಜಯರಾಮ ಶೆಟ್ಟಿ ಗೆದ್ದು ಶಾಸಕರಾದರು. ಕಾಂಗ್ರೆಸ್ನ ಭದ್ರಕೋಟೆಯಂತಿದ್ದ ಉಳ್ಳಾಲವನ್ನು ಭೇದಿಸಿ ಬಿಜೆಪಿ ಗೆಲುವು ಸಾಧಿಸಿದ್ದು ಸಣ್ಣ ಸಾಧನೆಯಲ್ಲ. ಅದೊಂದು ದೊಡ್ಡ ಸಾಧನೆಯೇ ಆಗಿದೆ. ಅದರಂತೆ ಈ ಬಾರಿ ಅಂತಹ ಚಿತ್ರಣ ಮರುಕಳಿಸಬಾರದು ಎಂದೇನಿಲ್ಲ. ಆದರೆ ಅಂದಿನ ವಾತಾವರಣಕ್ಕೂ ಇಂದಿನ ವಾತಾವರಣಕ್ಕೂ ತುಂಬಾ ವ್ಯತ್ಯಾಸವಿದೆ. ಮುಸ್ಲಿಮ್ ಮತಗಳು ಕಾಂಗ್ರೆಸ್ಗೆ ಕಟ್ಟಿಟ್ಟ ಬುತ್ತಿ ಎಂಬ ಸನ್ನಿವೇಶ ಅಂದು ನಿರ್ಮಾಣಗೊಂಡಿತ್ತು. ಇಂದು ಹಾಗೇ ಇಲ್ಲ. ಮುಸ್ಲಿಮರಲ್ಲೂ ವಿದ್ಯಾವಂತರಿದ್ದಾರೆ. ನೀವು ಯಾವುದೇ ಶಿಕ್ಷಣ ಸಂಸ್ಥೆಯನ್ನೊಮ್ಮೆ ನೋಡಿ, ಅಲ್ಲಿ ನೂರಾರು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಕಾಣಬಹುದು. ವಿದ್ಯಾವಂತರಾಗುತ್ತಲೇ ಇವರೆಲ್ಲಾ ಕಾಂಗ್ರೆಸ್ನ ಕುಟಿಲ ರಾಜನೀತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಸರಿ ಯಾವುದು? ತಪ್ಪು ಯಾವುದು? ಕಾಂಗ್ರೆಸ್ ಪಕ್ಷವು ಮುಸ್ಲಿಮ್ ಸಮುದಾಯಕ್ಕೆ ಏನೇನು ಮಾಡಿದೆ
► ಎಂಬುದನ್ನು ಈ ವಿದ್ಯಾವಂತರು ಅರ್ಥ ಮಾಡಿಕೊಂಡಿದ್ದಾರೆ. ದೇಶದ ಅಭಿವೃದ್ಧಿಯನ್ನು ಬಯಸಿದ್ದಾರೆ. ಅದರಂತೆ ಬಿಜೆಪಿ ಪಕ್ಷದತ್ತ ಒಲವು ತೋರಿದ್ದಾರೆ. ಇಲ್ಲಿ ಮುಸ್ಲಿಮ್ ಮತದಾರರು ಹೆಚ್ಚಿದ್ದಾರೆ. ಅವರಿಗೆ ಬಿಜೆಪಿ ಎಂದರೆ ಅಷ್ಟಕ್ಕಷ್ಟೆ. ಹೀಗಿರುವಾಗ ನಿಮ್ಮ ನಿರೀಕ್ಷೆ ಏನು?
ಮುಸ್ಲಿಮರಿಗೆ ಕಾಂಗ್ರೆಸ್ ಅನಿವಾರ್ಯ ಎಂಬ ಭಾವನೆ ಯನ್ನು ಹುಟ್ಟು ಹಾಕಲಾಗಿತ್ತು. ಅದರಲ್ಲಿ ಕಾಂಗ್ರೆಸ್ ಯಶಸ್ಸನ್ನೂ ಕಂಡಿತ್ತು. ಈಗ ಕಾಲ ಬದಲಾಗಿದೆ. ಜೆಡಿಎಸ್, ಎಸ್ಡಿಪಿಐಯೊಂದಿಗೆ ಗುರುತಿಸಿಕೊಂಡಂತೆ ಬಿಜೆಪಿಯಲ್ಲೂ ಮುಸ್ಲಿಮರು ಸಕ್ರಿಯರಾಗಿದ್ದಾರೆ. ಪಕ್ಷದ ಗೆಲುವಿಗಾಗಿ ಶಕ್ತಿಮೀರಿ ದುಡಿಯುತ್ತಿದ್ದಾರೆ. ಬಿಜೆಪಿ ಎಲ್ಲರನ್ನೊಳಗೊಂಡ ಪಕ್ಷ ಎಂಬುದು ಮುಸ್ಲಿಮರಿಗೆ ಮನವರಿಕೆಯಾಗಿದೆ.
► ಸಚಿವ ಖಾದರ್ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ ಎಂದು ಹೇಳುತ್ತಿದ್ದಾರೆ.
ಅವರು ಎಷ್ಟರ ಮಟ್ಟಿಗೆ ಕ್ಷೇತ್ರದ ಜನತೆಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತು. ವೈಯಕ್ತಿಕವಾಗಿ ನಾನು ಅವರ ಬಗ್ಗೆ ಏನೂ ಹೇಳಲಾರೆ. ಆದರೆ, ಅವರು ಸಚಿವರಾದ ಬಳಿಕ ಕ್ಷೇತ್ರದ ಅಭಿವೃದ್ಧಿ ಶೂನ್ಯ. ಜನಸೇವೆ ಮಾಡಬೇಕು ಎಂಬ ತುಡಿತವಿದ್ದಿದ್ದರೆ ಅವರು ಹಕ್ಕುಪತ್ರಗಳನ್ನು ವಿತರಿಸಲು ನಾಲ್ಕೂವರೆ ವರ್ಷ ತೆಗೆದುಕೊಳ್ಳುತ್ತಿರಲಿಲ್ಲ. ಶಾಸಕರ ನಿಧಿಯನ್ನು ಪಡೆಯಲು ಮೀನಮೇಷ ಮಾಡುತ್ತಿರಲಿಲ್ಲ. ಚುನಾವಣೆ ಸಮೀಪಿಸುತ್ತಲೇ ಹಕ್ಕುಪತ್ರದ ಬಗ್ಗೆ ಮಾತನಾಡತೊಡಗಿದ್ದಾರೆ. ಶಾಸಕರ ನಿಧಿಯ ಅನುದಾನವನ್ನು ಕಾಂಗ್ರೆಸ್ಸಿಗರೇ ಅಧಿಕವಿರುವ ಕಡೆ ಸುರಿಯುತ್ತಿದ್ದಾರೆ. ಇದೆಲ್ಲಾ ಚುನಾವಣಾ ಗಿಮಿಕ್ ಎನ್ನದೆ ನಿರ್ವಾಹವಿಲ್ಲ.
► ಈ ಕ್ಷೇತ್ರದಲ್ಲಿ ಬಿಜೆಪಿ ಪ್ರತೀ ಚುನಾವಣೆಗೆ ಅಭ್ಯರ್ಥಿ ಬದಲಾಯಿಸುವುದು ಏಕೆ?
ಹೌದು. ಅದು ಪಕ್ಷದ ನೀತಿ. ಅದನ್ನು ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಸ್ವೀಕರಿಸುವೆ. ಇನ್ನು ಯುವಕ ರಿಗೆ ಆದ್ಯತೆ ನೀಡಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದ ಮಟ್ಟಿಗೆ ಈ ಪ್ರಯೋಗವನ್ನು ಪಕ್ಷ ಮಾಡುತ್ತಿದೆ. ಈ ಬಾರಿ ಅದು ಯಶಸ್ವಿಯಾಗಬಹುದು ಎಂಬ ವಿಶ್ವಾಸ ನನಗೆ ಇದೆ.
► ಅಂದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ವಿಶ್ವಾಸ ನಿಮಗಿದೆಯೇ?
ಹೌದು. ಯಾವುದೂ ಅಸಾಧ್ಯ ಎಂದೇನೂ ಇಲ್ಲ. ಶಕ್ತಿ ಮೀರಿ ದುಡಿದರೆ ಉಳ್ಳಾಲದಲ್ಲಿ ಕಾಂಗ್ರೆಸ್ ಪಕ್ಷವನ್ನೂ ಸೋಲಿಸಬಹುದು. 1994ರಲ್ಲಿ ಕಾಂಗ್ರೆಸ್ಗೆ ಸೋಲಿನ ಕಹಿಯನ್ನು ಕೊಟ್ಟ ಬಿಜೆಪಿ ಈ ಬಾರಿ ಕೂಡ ಸೋಲಿನ ಕಹಿ ನೀಡಲಿದೆ.
ಬಿಜೆಪಿ ಶಾಸಕ ಬಂದರೆ ಮುಸ್ಲಿಮರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂಬ ದೂರಿದೆ.
ಸದ್ಯದ ಮಟ್ಟಿಗೆ ನಾನು ನನ್ನ ಕ್ಷೇತ್ರಕ್ಕೆ ಸೀಮಿತಗೊಳಿಸಿ ಮಾತನಾಡಲು ಬಯಸುವೆ. ಗಲ್ಫ್ನಲ್ಲಿ 4 ವರ್ಷ ದುಡಿದು 1991ರಲ್ಲಿ ಊರಿಗೆ ಮರಳಿದ ನಾನು ಅನಿರೀಕ್ಷಿತವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡೆ. ಪಜೀರ್ ಗ್ರಾಮ ಪಂಚಾಯತ್ ಸದಸ್ಯನೂ ಆದೆ. ಆವಾಗ ನನ್ನನ್ನು ಬೆಂಬಲಿಸಿದ್ದು ಮುಸ್ಲಿಮ್ ಯುವಕರೇ ಆಗಿದ್ದಾರೆ. ನಾನು ಬಿಜೆಪಿಗ ಎಂದು ಅವರೆಂದೂ ನನ್ನನ್ನು ತಿರಸ್ಕರಿಸಿಲ್ಲ. ಯಾಕೆಂದರೆ ನಾನು ಸೌಹಾರ್ದವನ್ನು ಬಯಸುವವ. ಅಭಿವೃದ್ಧಿ ಹೊಂದಬೇಕಾದರೆ ಸೌಹಾರ್ದ ಮುಖ್ಯ. ಹಿಂದೂ-ಮುಸ್ಲಿಮ್ ಅಂತ ಕಚ್ಚಾಡಿಕೊಂಡರೆ ಅಭಿವೃದ್ಧಿ ಅಸಾಧ್ಯ. ಇದನ್ನು ಮನಗಂಡ ನಾನು ಮೊದಲು ಸೌಹಾರ್ದಕ್ಕೆ ಆದ್ಯತೆ ನೀಡಿದೆ. ಎಲ್ಲಾ ಜಾತಿ, ಧರ್ಮೀಯರನ್ನೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಕಂಡೆ. ಇದೆಲ್ಲಾ ನನ್ನ ‘ರಾಜಕೀಯ’ವನ್ನು ಮೀರಿ ತೆಗೆದುಕೊಂಡ ನಿಲುವು ಆಗಿದೆ. ನನ್ನೊಂದಿಗೆ ಇಂದಿಗೂ ಹಿಂದೂಗಳಂತೆ ಮುಸ್ಲಿಮ್, ಕ್ರೈಸ್ತರೂ ಇದ್ದಾರೆ. ಯಾರೂ ಕೂಡ ಕಚ್ಚಾಟ ಬಯಸುತ್ತಿಲ್ಲ. ಸಣ್ಣಪುಟ್ಟ ವೈಮನಸ್ಸು ಸೃಷ್ಟಿಯಾದರೆ ತಕ್ಷಣ ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕುವೆವು. ಅಲ್ಲದೆ ಕ್ಷೇತ್ರ ವ್ಯಾಪ್ತಿಯ ಯಾವ ಜಾತಿ, ಧರ್ಮದವರಿಗೆ ಅನ್ಯಾಯವಾದರೂ ನಾನು ಧ್ವನಿ ಎತ್ತುತ್ತಿರುವೆ.