ಬೀಟ್ರೂಟ್ನ ಅಡ್ಡ ಪರಿಣಾಮಗಳು ಗೊತ್ತೇ....?
ಬೀಟ್ರೂಟ್ ಕಬ್ಬಿಣದ ಸಮೃದ್ಧ ಮೂಲವಾಗಿದ್ದು, ಇದು ಜನರು ಈ ತರಕಾರಿ ಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಮುಖ್ಯ ಕಾರಣವಾಗಿದೆ. ಅದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಾಮಿನ್ಗಳು, ಖನಿಜಗಳು ಮತ್ತು ನಾರು ಹೆಚ್ಚಿನ ಪ್ರಮಾಣದಲ್ಲಿವೆ. ಪ್ರಾಚೀನ ಕಾಲದಲ್ಲಿ ಬೀಟ್ರೂಟ್ ಔಷಧಿಯಾಗಿಯೂ ಬಳಕೆಯಾಗುತ್ತಿತ್ತು.
ವಿಟಾಮಿನ್ ಸಿ, ಮ್ಯಾಗ್ನೀಷಿಯಂ, ಬೀಟಾ-ಕ್ಯಾರೊಟಿನ್, ಬಯೊಫ್ಲಾವನಾಯ್ಡಾಗಳು, ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಕೂಡ ಬೀಟ್ರೂಟ್ನಲ್ಲಿ ಹೇರಳವಾಗಿವೆ. ಅದರ ರಸವು ಕಣ್ಣುಗಳು ಮತ್ತು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತವೆ. ಬೀಟ್ರೂಟ್ನಿಂದ ಪಡೆಯಲಾಗುವ ಬಿಟೇಯ್ನಿ ಯಕೃತ್ತನ್ನು ನಿರ್ವಿಷಗೊಳಿಸುವ ಜೊತೆಗೆ ಶರೀರದಲ್ಲಿ ಹಾರ್ಮೋನ್ಗಳ ಸಹಜ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಹಾಗೂ ಮೂತ್ರದಲ್ಲಿಯ ಹೆಚ್ಚುವರಿ ಹೋಮೊಸಿಸ್ಟೀನ್ನ್ನು ತೆಗೆದುಹಾಕುತ್ತದೆ. ಬೀಟ್ರೂಟ್ ಅಧಿಕ ರಕ್ತದೊತ್ತಡ ಮತ್ತು ರಕ್ತದಲ್ಲಿಯ ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡುತ್ತದೆ. ಆದರೆ ಈ ಎಲ್ಲ ಆರೋಗ್ಯಲಾಭಗಳನ್ನು ನೀಡುವ ಜೊತೆಗೆ ಅದು ಕೆಲವು ಅಡ್ಡ ಪರಿಣಾಮಗಳನ್ನೂ ಉಂಟು ಮಾಡುತ್ತದೆ.
ಇಲ್ಲಿದೆ ಅಂತಹ ಅಡ್ಡ ಪರಿಣಾಮಗಳ ಮಾಹಿತಿ....
► ಬೀಟುರಿಯಾಕ್ಕೆ ಕಾರಣವಾಗಬಹುದು
ಅತಿಯಾಗಿ ಬೀಟ್ರೂಟ್ ತಿನ್ನುವುದರಿಂದ ಮೂತ್ರವು ಗುಲಾಬಿ ಬಣ್ಣಕ್ಕೆ ತಿರುಗಬಹುದು. ಕಬ್ಬಿಣದ ಕೊರತೆಯಿರುವವರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಆದರೆ ಇದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ.
► ಮೂತ್ರಪಿಂಡ ಕಲ್ಲುಗಳು
ಬೀಟ್ರೂಟ್ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಲೇಟ್ನ್ನು ಒಳಗೊಂಡಿದ್ದು, ಇದು ಅತಿಯಾಗಿ ತಿಂದಾಗ ಮೂತ್ರಪಿಂಡದಲ್ಲಿ ಕಲ್ಲುಗಳುಂಟಾಗಲು ಕಾರಣವಾಗಬಹುದು. ಈ ತರಕಾರಿಯಲ್ಲಿ ಹೇರಳವಾಗಿರುವ ಬಿಟೇಯ್ನಿ ಈಗಾಗಲೇ ಇರುವ ಮೂತ್ರಪಿಂಡ ಸಮಸ್ಯೆಗಳನ್ನು ಇನ್ನಷ್ಟು ತೀವ್ರಗೊಳಿಸಬಹುದು. ಮೂತ್ರಪಿಂಡ ಕಲ್ಲುಗಳ ಇತಿಹಾಸ ಹೊಂದಿರುವವರು ಬೀಟ್ರೂಟ್ನಿಂದ ದೂರವಿರುವುದು ಒಳ್ಳೆಯದು.
► ಕಡಿಮೆ ರಕ್ತದೊತ್ತಡ
ಬೀಟ್ರೂಟ್ ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ. ಆದರೆ ಈಗಾಗಲೇ ರಕ್ತದೊತ್ತಡ ಕಡಿಮೆಯಿದ್ದರೆ ಅಥವಾ ರಕ್ತದೊತ್ತಡದಲ್ಲಿ ಏರಿಳಿತಗಳಿದ್ದರೆ ಅಂತಹವರಿಗೆ ಇದು ಸೂಕ್ತ ಆಹಾರವಲ್ಲ.
► ದದ್ದುಗಳು
ದದ್ದು ಅಪರೂಪದ ಅಡ್ಡ ಪರಿಣಾಮವಾಗಿದ್ದು, ಬೀಟ್ರೂಟ್ ಸೇವನೆಯಿಂದ ಕೆಲವು ವ್ಯಕ್ತಿಗಳಲ್ಲಿ ಇದು ಕಾಣಿಸಿಕೊಳ್ಳಬಹುದು. ಅತಿಯಾದ ಬೀಟ್ರೂಟ್ ಸೇವನೆಯಿಂದ ದದ್ದುಗಳು, ತುರಿಸುವಿಕೆ, ಚುಚ್ಚುವಿಕೆ, ಜ್ವರ...ಅಷ್ಟೇ ಏಕೆ, ಚಳಿಯಂತಹ ಅಲರ್ಜಿಯ ಪ್ರತಿಕೂಲ ಪರಿಣಾಮಗಳೂ ಕಾಣಿಸಿಕೊಳ್ಳಬಹುದು. ಹೀಗಾಗಿ ನೀವು ಬೀಟ್ರೂಟ್ಗೆ ಅಲರ್ಜಿಕ್ ಆಗಿದ್ದರೆ ಅದನ್ನು ಮಿತಿಯಲ್ಲಿ ತಿನ್ನಿ.
► ಹೊಟ್ಟೆಯಲ್ಲಿ ತೊಂದರೆ
ವಾಯುಸಂಬಂಧಿ ತೊಂದರೆಗಳಿಂದ ಬಳಲುತ್ತಿರುವರು ಬೀಟ್ರೂಟ್ ತಿನ್ನುವುದ ರಿಂದ ಅವರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸುತ್ತವೆ. ಅದು ಹೊಟ್ಟೆಯಲ್ಲಿನ ಸ್ನಾಯು ಗಳ ಸೆಳೆತ, ಉಬ್ಬರಿಸುವಿಕೆ ಮತ್ತು ಅತಿಸಾರ ಹಾಗು ಮಲಬದ್ಧತೆೆಗೂ ಕಾರಣವಾಗಬ ಹುದು.
► ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆ
ರಕ್ತದಲ್ಲಿಯ ಸಕ್ಕರೆಯ ಮಟ್ಟ ಏರಿಕೆ ಬೀಟ್ರೂಟ್ನ ಪ್ರಮುಖ ಅಡ್ಡ ಪರಿಣಾಮಗಳಲ್ಲೊಂದಾಗಿದೆ. ಇದು ಮಧುಮೇಹ ಸಮಸ್ಯೆಯಿರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಅದರ ಗ್ಲೈಸೆಮಿಕ್ ಸೂಚ್ಯಂಕವು ಹೆಚ್ಚಿರುವುದರಿಂದ ಮಧುಮೇಹಿಗಳು ಬೀಟ್ರೂಟ್ನ್ನು ದೂರವೇ ಇರಿಸುವುದು ಒಳ್ಳೆಯದು.
► ಸಂಧಿವಾತಕ್ಕೆ ಕಾರಣವಾಗಬಹುದು
ಸಂದುಗಳಲ್ಲಿ ತೀವ್ರ ನೋವು, ಅತಿಯಾದ ಜ್ವರ ಮತ್ತು ಸಂದುಗಳು ಕೆಂಪುಬಣ್ಣಕ್ಕೆ ತಿರುಗುವುದು ಸಂಧಿವಾತದ ಲಕ್ಷಣಗಳಾಗಿವೆ. ಬೀಟ್ರೂಟ್ನಂತಹ ಆಹಾರಗಳು ಸಂಧಿವಾತವನ್ನು ಉತ್ತೇಜಿಸುವ ಆಕ್ಸಾಲೇಟ್ನ್ನು ಒಳಗೊಂಡಿರುತ್ತವೆ. ಹೀಗಾಗಿ ಇಂತಹ ತರಕಾರಿಗಳನ್ನು ಮಿತವಾಗಿ ತಿನ್ನಬೇಕು.
► ಗರ್ಭಾವಸ್ಥೆಯಲ್ಲಿ ತೊಂದರೆಗಳು
ಬೀಟ್ರೂಟ್ನಲ್ಲಿರುವ ನೈಟ್ರೈಾಟ್ ಗರ್ಭಿಣಿ ಮಹಿಳೆಯರಲ್ಲಿ ಭ್ರೂಣಕ್ಕೆ ಹಾನಿಕರ ವಾಗಬಹುದು. ಹೀಗಾಗಿ ಗರ್ಭಿಣಿಯರು ಬೀಟ್ರೂಟ್ ತಿನ್ನುವುದನ್ನು ಸಂಪೂರ್ಣವಾಗಿ ವರ್ಜಿಸಬೇಕು.
► ಯಕೃತ್ತಿಗೆ ಹಾನಿಯಾಗಬಹುದು
ಬೀಟ್ರೂಟ್ನಲ್ಲಿ ತಾಮ್ರ, ರಂಜಕ, ಮ್ಯಾಗ್ನೀಷಿಯಂ ಮತ್ತು ಕಬ್ಬಿಣ ಹೇರಳವಾ ಗಿರುವುದು ಒಳ್ಳೆಯದೇ, ಆದರೆ ಕೆಟ್ಟ ಅಂಶವೆಂದರೆ ರಂಜಕವನ್ನು ಹೊರತುಪಡಿಸಿದರೆ ಉಳಿದವೆಲ್ಲ ಲೋಹಗಳಾಗಿವೆ. ಅತಿಯಾದ ಬೀಟ್ರೂಟ್ ಸೇವನೆಯಿಂದ ಈ ಲೋಹಗಳು ಯಕೃತ್ತಿನಲ್ಲಿ ಶೇಖರಗೊಳ್ಳುತ್ತವೆ. ಇದು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಗಳಿಗೆ ಹಾನಿಕಾರಕವಾಗುತ್ತದೆ.
► ಬಣ್ಣದಿಂದ ಕೂಡಿದ ಮಲ
ಹೆಚ್ಚಿನ ಆಹಾರಗಳು ರಾಸಾಯನಿಕವಾಗಿ ರೂಪಾಂತರಗೊಂಡಿರುತ್ತವೆ ಮತ್ತು ಜೀರ್ಣಗೊಳ್ಳುವಾಗ ತಮ್ಮ ಬಣ್ಣವನ್ನು ಕಳೆದುಕೊಳ್ಳುತ್ತವೆ. ಇದು ನಾವು ಆಹಾರ ಸೇವಿಸಿದಾಗ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಅತಿಯಾದ ಬೀಟ್ರೂಟ್ ಸೇವನೆಯು ಮೆಲೀನಾ ಎಂಬ ಸ್ಥಿತಿಗೆ ಕಾರಣವಾಗುತ್ತದೆ ಮತ್ತು ಮಲವು ಕಪ್ಪುಬಣ್ಣಕ್ಕೆ ತಿರುಗಬಹುದು.