ಸುರತ್ಕಲ್ ಮಾರುಕಟ್ಟೆಯ ಹೆಸರಲ್ಲಿ ಜನತೆಯ ಹಣ ಲೂಟಿ: ಮುನೀರ್ ಕಾಟಿಪಳ್ಳ
ಡಿವೈಎಫ್ಐ ಪ್ರತಿಭಟನೆ

ಮಂಗಳೂರು, ಮಾ. 2: ಸುರತ್ಕಲ್ ತಾತ್ಕಾಲಿಕ ಮಾರುಕಟ್ಟೆಯ ಅಂಗಡಿ ಹಂಚಿಕೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಮಾರುಕಟ್ಟೆ ಲಾಬಿಗಳು ಹೊಸ ಅಂಗಡಿ ಕಟ್ಟಡಗಳನ್ನು ಒಡೆದು ಹಾಕಿ ಸಾರ್ವಜನಿಕ ಸಂಪತ್ತಿಗೆ ಹಾನಿ ಉಂಟು ಮಾಡುತ್ತಿರುವವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಸುರತ್ಕಲ್ ಮಾರುಕಟ್ಟೆ ಮುಂಭಾಗ ಡಿವೈಎಫ್ಐ ಸುರತ್ಕಲ್ ಘಟಕ ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸುರತ್ಕಲ್ ನಂತಹ ಉಪನಗರಕ್ಕೆ ನೂರು ಕೋಟಿ ಮೌಲ್ಯದ ಮಾರುಕಟ್ಟೆ ತರುವ ಲಾಬಿಯ ಹಿಂದೆ ಜನತೆಯ ಹಣ ಲೂಟಿ ಹೊಡೆಯುವ ಹುನ್ನಾರ ಅಡಗಿದೆ. ಎಡಿಬಿ ಸಾಲದ ಕುಡ್ಸೆಂಪ್ ಒಳಚರಂಡಿ ಯೋಜನೆಯಲ್ಲಿ 360 ಕೋಟಿ ರೂ. ಕಂಡವರ ಪಾಲಾಗಿತ್ತು. ಈಗ ಮಾರುಕಟ್ಟೆ ಹೆಸರಿನಲ್ಲಿ ಭ್ರಷ್ಟಾಚಾರಕ್ಕೆ ವೇದಿಕೆ ಸಿದ್ಧಗೊಂಡಿದೆ. ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ನಿಯಮಗಳನ್ನು ಉಲ್ಲಂಘಿಸಿ 5 ಕೋಟಿ ರೂ. ಖರ್ಚು ಮಾಡಿರುವುದು, ತಾತ್ಕಾಲಿಕ ಮಾರುಕಟ್ಟೆ ವಿತರಣೆಯಲ್ಲಿ ಶಾಸಕರ ಆಪ್ತರು ತಮಗೆ ಬೇಕಾದಂತೆ ಅಂಗಡಿ ಕೋಣೆ ಹಂಚಿಕೊಂಡು, ಕಟ್ಟಡಗಳನ್ನು ಬೇಕಾಬಿಟ್ಟಿ ನಿರ್ಮಿಸುತ್ತಿರುವುದು ಭ್ರಷ್ಟಾಚಾರದ ಅನುಮಾನಗಳಿಗೆ ಸ್ಪಷ್ಟ ನಿದರ್ಶನವಾಗಿದೆ. ಈ ಎಲ್ಲಾ ಅಂದಾದುಂದಿ, ಗೋಲ್ ಮಾಲ್ ಗಳ ಹಿಂದೆ ಶಾಸಕ ಮೊಯ್ದಿನ್ ಬಾವ ಅವರ ನೇರ ಕೈವಾಡ ಇದೆ ಎಂದು ಹೇಳಿದರು.
ಸುರತ್ಕಲ್ ಮಾರುಕಟ್ಟೆ ನಿರ್ಮಾಣದ ವಿಚಾರದಲ್ಲಿ ಶಾಸಕರು ನಿಯಮಗಳಿಗೆ ಬೆಲೆ ನೀಡುತ್ತಿಲ್ಲ. ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಐದು ಕೋಟಿಯಷ್ಟು ದೊಡ್ಡ ಮೊತ್ತ ವ್ಯಯಿಸಿದ್ದು, ಶಾಶ್ವತ ಸ್ವರೂಪದ ಕಟ್ಟಡ ಕಟ್ಟಿರುವುದರಲ್ಲಿ ಅವ್ಯವಹಾರ ನಡೆಸಲಾಗಿದೆ. ಶಾಸಕರ ದಬ್ಬಾಳಿಕೆಗೆ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ತೆರಿಗೆಯ ದುಡ್ಡು ಭ್ರಷ್ಟರ ಪಾಲಾಗುವಂತಾಗಿದೆ. ಅಂಗಡಿ ಕಟ್ಟಡ ವಿತರಣೆಯಲ್ಲಿ ಯಾವುದೇ ನಿಯಮ ಪಾಲಿಸದೆ, ಶಾಸಕರ ಸ್ವಂತ ಆಸ್ತಿಯಂತೆ ಹಂಚಲಾಗಿದೆ. ಈ ಕುರಿತು ಪಾಲಿಕೆ ಕಮೀಷನರ್ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನವಾಗಿಲ್ಲ, ಡಿವೈಎಫ್ಐ ಈ ಅನ್ಯಾಯವನ್ನು ಸಹಿಸುವುದಿಲ್ಲ. ನ್ಯಾಯಪಾಲನೆ ಆಗುವವರೆಗೂ ಹೋರಾಟ ನಡೆಸಲಿದೆ ಎಂದರು.
ಆರಂಭದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್ ಪ್ರಾಸ್ತಾವಿಕವಾಗಿ ಮಾತಾಡಿದರು. ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ಐ ಮುಖಂಡರಾದ ಅಜ್ಮಲ್ ಅಹ್ಮದ್, ಬಿ ಕೆ ಮಕ್ಸೂದ್, ಐ ಮುಹಮ್ಮದ್, ಶ್ರೀನಿವಾಸ ಹೊಸಬೆಟ್ಟು, ಅಬುಸಾಲಿ ಕೃಷ್ಣಾಪುರ, ಮಾರುಕಟ್ಟೆ ವ್ಯಾಪರಸ್ಥರಾದ ಯಾದವ ಶೆಟ್ಟಿಗಾರ್, ಅಶ್ರಫ್ ಜನತಾ ಕಾಲನಿ, ಚೆರಿಯೋನು ಸುರತ್ಕಲ್, ಅಬೂಬಕರ್ ಬಾವ, ಮುಹಿಯದ್ದಿ, ಮೀನು ವ್ಯಾಪಾರಸ್ಥರ ಸಮಿತಿಯ ಯಶೋಧಕ್ಕ ಮತ್ತಿತರರು ವಹಿಸಿದ್ದರು.







