ಮುಂಡಗೋಡ: ವೈದ್ಯರ ವರ್ಗಾವಣೆ ತಡೆಗೆ ಒತ್ತಾಯಿಸಿ ಮನವಿ
.jpg)
ಮುಂಡಗೋಡ,ಮಾ.02: ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಸುನೀಲ ರವರ ವರ್ಗಾವಣೆ ಖಂಡಿಸಿ, ಈ ವರ್ಗಾವಣೆ ರದ್ದುಗೊಳಿಸಬೇಕು ಹಾಗೂ ಕರ್ತವ್ಯದಿಂದ ಬಿಡುಗಡೆ ಮಾಡದಂತೆ ತಾಲೂಕಿನ ಸಾರ್ವಕನಿಕರು ಮತ್ತು ಕ.ರ.ವೇ ಕಾರ್ಯಕರ್ತರು ಪ್ರತ್ಯೇಕವಾಗಿ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಆರೋಗ್ಯಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಒಂದುವರೆ ವರ್ಷಗಳಿಂದ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಡಾ.ಸುನೀಲರವರು ಎಲುಬು-ಕೀಲು ತಜ್ಞ ವೈದ್ಯರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತಾಲೂಕಿನ ಜನತೆ ಹೆಚ್ಚಿನ ಖರ್ಚು ವೆಚ್ಚಗಳಿಲ್ಲದೆ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಈ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ತಜ್ಞರ ಕೊರತೆ ಇದ್ದು, ಕೇವಲ ಮೂವರು ವೈದ್ಯರು ಇಡೀ ಆಸ್ಪತ್ರೆಯ ಮೇಲ್ವಿಚಾರಣೆ ನೋಡುತ್ತಾ, ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಮಯದಲ್ಲಿ ವೈದ್ಯರನ್ನು ವರ್ಗಾವಣೆ ಮಾಡಿರುವುದು ಖಂಡನೀಯ ಮಾತ್ರವಲ್ಲದೇ ಸರ್ಕಾರದ ಜನವಿರೋಧಿ ಆದೇಶವಾಗಿದೆ. ಡಾ.ಸುನೀಲ ರ ಸೇವೆ ತಾಲೂಕಿಗೆ ಅಗತ್ಯವಿದ್ದು, ಅವರನ್ನು ಇಲ್ಲಿಯೇ ಮುಂದುವರೆಸಬೇಕು. ಇಲ್ಲದಿದ್ದರೆ ತಾಲೂಕು ಆಸ್ಪತ್ರೆಯ ಎದುರು ಧರಣಿ ಸತ್ಯಾಗ್ರಹ ಪ್ರಾರಂಭಿಸುವುದು ಅನಿವಾರ್ಯವಾಗುವುದೆಂದು ಮನವಿ ಎಚ್ಚರಿಸಿದ್ದಾರೆ.
ಈ ವೇಳೆ ತಾಲೂಕಿನ ಎ.ಎಸ್. ವಾದಿರಾಜ, ಮಲ್ಲಿಕಾರ್ಜುನ ಕುಟ್ರಿ, ಜಗದೀಶ ಗೌಳಿ, ಕ.ರ.ವೇ ತಾಲೂಕ ಅಧ್ಯಕ್ಷ ಅರುಣ ಭಜಂತ್ರಿ, ಮಲ್ಲಿಕಾರ್ಜುನ ಗೌಳಿ, ಗಣೇಶ ಶಿರಾಲಿ, ಆನಂದ ಗೌಳಿ, ಶ್ರೀನಾಥ ಲಾಡನವರ, ಶಶಿಕುಮಾರ ನಾಯಕ, ವಿಠಲ್ ಹರಿಜನ ಮುಂತಾದವರಿದ್ದರು.





