ಗೋಣಿಕೊಪ್ಪಲು: ಕಾಮಗಾರಿ ನಡೆಯದೆ ಹಣ ಡ್ರಾ ಆರೋಪಿಸಿ ಗ್ರಾ.ಪಂ ಸದಸ್ಯರ ಪ್ರತಿಭಟನೆ

ಗೋಣಿಕೊಪ್ಪಲು,ಮಾ.2: ಪೊನ್ನಂಪೇಟೆ ಗ್ರಾಮ ಪಂಚಾಯತ್ ನ ಮುಂಭಾಗದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸುವ ಮೂಲಕ ಪಂಚಾಯತ್ ಆಡಳಿತ ವಿರುದ್ದ ಆಸಮದಾನ ವ್ಯಕ್ತಪಡಿಸಿದ್ದಾರೆ.
ಪಂಚಾಯತ್ ಮುಂಭಾಗ ಬಿಜೆಪಿ ಬೆಂಬಲಿತ ಸದಸ್ಯರಾದ ಅಮ್ಮತ್ತಿರ ಸುರೇಶ್ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ಪಂಚಾಯತ್ ನಲ್ಲಿ ಸದಸ್ಯರ ಗಮನಕ್ಕೆ ಬಾರದೇ ಕಾಮಗಾರಿಗಳು ನಡೆಯುತ್ತಿವೆ. ಪ್ರಭಾರ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುರೇಶ್‍ರವರು ಕೆಲವು ಕಾಣದ ಕೈಗಳ ಹಿಡಿತಕ್ಕೆ ಒಳಗಾಗಿ ಕಾಮಗಾರಿ ಆರಂಭಕ್ಕೂ ಮುನ್ನವೇ ಪಂಚಾಯತ್ ನ ಹಣ ಡ್ರಾ ಮಾಡಿಕೊಂಡು 14ನೇ ಹಣಕಾಸು ಯೋಜನೆಯಲ್ಲಿ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿದರು.
14ನೇ ಹಣಕಾಸಿನ ಯೋಜನೆಯಲ್ಲಿ 6ನೇ ವಾರ್ಡಿನ ಪೊನ್ನಂಪೇಟೆಯ ಮುಖ್ಯ ರಸ್ತೆಯ ಬಲಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ 68,937 ಹಣವನ್ನು ಮೀಸಲಿಡಲಾಗಿತ್ತು. ಕಾಮಗಾರಿ ಇನ್ನು ಕೂಡ ಆರಂಭಿಸಿರಲಿಲ್ಲ. ಆದರೆ ಕಾಮಗಾರಿಗೆ ತಗುಲುವ ವೆಚ್ಚವನ್ನು ಗುತ್ತಿಗೆದಾರರಾದ ವಿ.ಎಸ್.ಮಂಜುರವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗಿತ್ತು. ಈ ವಿಷಯ ತಿಳಿದ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯರು ಪಂಚಾಯತ್ ಗೆ ಆಗಮಿಸಿ ಗುತ್ತಿಗೆದಾರ ಮಂಜುರವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಗುತ್ತಿಗೆದಾರ 68,937 ಹಣ ನನ್ನ ಖಾತೆಗೆ ಜಮಾ ಆಗಿದ್ದು, ಈಗಾಗಲೇ 40 ಸಾವಿರ ಹಣವನ್ನು ಪಿ.ಡಿ.ಓ.ಸುರೇಶ್‍ರವರ ಮೌಖಿಕ ಸೂಚನೆ ಮೇರೆ ಸದಸ್ಯರಾದ ಅನಿಶ್‍ರವರಿಗೆ ನೀಡಿದ್ದೇನೆ. ನನ್ನ ಹೆಸರಿನಲ್ಲಿ ಸದಸ್ಯರಾದ ಅನಿಶ್ ರವರು ಕಾಮಗಾರಿ ನಡೆಸುತ್ತಿದ್ದಾರೆ ಎಂಬ ಮಾತನ್ನು ಸದಸ್ಯರ ಮುಂದೆ ಹೇಳಿದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುರೇಶ್ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಸದಸ್ಯರು, ಕಾಮಗಾರಿ ನಡೆಸದೆ ಹಣವನ್ನು ಡ್ರಾ ಮಾಡಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭ ಉತ್ತರಿಸಿದ ಪಿಡಿಓ ಸುರೇಶ್, ಕಣ್‍ತಪ್ಪಿನಿಂದ ಪ್ರಮಾದ ಆಗಿರಬಹುದು. ಇನ್ನೆರಡು ದಿನದಲ್ಲಿ ಕಾಮಗಾರಿ ಪೂರ್ಣ ಗೊಳಿಸುತ್ತೇವೆ ಎಂದು ಸದಸ್ಯರಿಗೆ ಭರವಸೆ ನೀಡಿದರು. ಇದಕ್ಕೆ ತೃಪ್ತರಾಗದ ಸದಸ್ಯರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದರು. ಕೂಡಲೇ ಪಂಚಾಯತ್ ಪಿಡಿಓರವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ಸಂದರ್ಭ ಪಂಚಾಯತ್ ಸದಸ್ಯರಾದ ಮೂಕಳೇರ ಕಾವ್ಯ ಮಧು, ಬೊಟ್ಟಂಗಡ ದಶಮಿ, ಜಯಲಕ್ಷ್ಮಿ, ಮೂಕಳೇರ ಲಕ್ಷ್ಮಣ್, ಬಿಜೆಪಿ ಸ್ಥಾನೀಯ ಅಧ್ಯಕ್ಷ ಮುದ್ದಿಯಡ ಮಂಜು, ಬಿಜೆಪಿ ಮುಖಂಡ ಪಂದ್ಯಂಡ ಹರೀಶ್ ಮುಂತಾದವರು ಹಾಜರಿದ್ದರು.
ಹಲವು ಸಮಯಗಳಿಂದ ಪಂಚಾಯತ್ ಸದಸ್ಯರಾದ ಅನಿಶ್‍ರವರು ನನ್ನ ಹೆಸರಿನಲ್ಲಿ ಕಾಮಗಾರಿ ನಡೆಸುತ್ತಿದ್ದು, ಹಣ ನನ್ನ ಖಾತೆಗೆ ಬಂದ ನಂತರ ಸದಸ್ಯರಿಗೆ ಡ್ರಾ ಮಾಡಿಕೊಡುತ್ತಿದ್ದೇನೆ. ಈ ಕಾಮಗಾರಿಯ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಖಾತೆ ನೋಡಿದಾಗ ಹಣ ಜಮಾವಣೆ ಆಗಿರುವುದು ಕಂಡು ಬಂದಿದೆ. ಸದಸ್ಯರಾದ ಅನೀಶ್ ಹಾಗೂ ಪಿಡಿಓ ಸುರೇಶ್‍ರವರು ಖಾತೆಗೆ ಬಂದಿರುವ ಹಣದಲ್ಲಿ ಈಗಾಗಲೇ 40 ಸಾವಿರ ಪೈಪ್ ಖರೀದಿಗಾಗಿ ಪಡೆದುಕೊಂಡಿದ್ದಾರೆ. ಉಳಿಕೆ ಹಣ ನನ್ನ ಬಳಿ ಇದೆ.
-ವಿ.ಎಸ್.ಮಂಜು,ಗುತ್ತಿಗೆದಾರನನ್ನ 6ನೇ ವಾರ್ಡಿನಲ್ಲಿ ಕಾಮಗಾರಿ ನಡೆಯದೆ ಹಣ ಡ್ರಾ ಮಾಡಿರುವುದು ಸರಿಯಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಪಂಚಾಯತ್ ನ ಕೆಲವು ಸದಸ್ಯರೇ ಬೆನಾಮಿ ಹೆಸರಿನಲ್ಲಿ ಪಂಚಾಯತ್ ನ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಇದರ ಹಿಂದೆ ಹಲವು ಕೈಗಳ ಶಕ್ತಿ ಅಡಗಿದೆ. ಮೂರು ದಿನದೊಳಗೆ ಇದಕ್ಕೆ ನ್ಯಾಯ ಸಿಗಬೇಕು. ತಪ್ಪಿದಲ್ಲಿ ಪಂಚಾಯತ್ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು.
ಬೊಟ್ಟಂಗಡ ದಶಮಿ, ಗ್ರಾಮ ಪಂಚಾಯತ್ ಸದಸ್ಯರು







