ಆಳ್ವಾಸ್‌ನಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನ

ಮೂಡುಬಿದಿರೆ, ಮಾ. 2: ಆಳ್ವಾಸ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗ ಮಂಗಳೂರಿನ ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿತ್ತು. ಕಾಲೇಜಿನ ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ "ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆ ಹಾಗೂ ಜೈವಿಕ ವಿಜ್ಞಾನದಲ್ಲಿ ಅದರ ಪ್ರಸ್ತುತತೆ" ಎಂಬ ಪರಿಕಲ್ಪನೆಯಡಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಹಳೇ ವಿದ್ಯಾರ್ಥಿ, ಸದ್ಯ ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿಯಾಗಿರುವ ಡಾ. ನಂದಿನಿ ಮಾತನಾಡಿ "ನನ್ನ ಎಲ್ಲಾ ಕನಸುಗಳಿಗೆ ಮೂರ್ತರೂಪ ನೀಡುವಲ್ಲಿ ಆಳ್ವಾಸ್ ಕಾಲೇಜಿನ ಪಾತ್ರ ಅಧಿಕವಾಗಿದೆ. ಕಾಲೇಜಿನಿಂದ ನಾನು ಸಾಕಷ್ಟು ಪಡೆದಿದ್ದೇನೆ" ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ "ಯಾವುದೇ ಒಂದು ಕಾರ್ಯವನ್ನು ಆರಂಬಿಸುವುದು ಸುಲಭ ಆದರೆ ಅದನ್ನು ದೀರ್ಘಕಾಲದವರೆಗೆ ಸರಿದೂಗಿಸಿಕೊಂಡು ಹೋಗುವುದು ಕಷ್ಟ. ಅದೇ ರೀತಿ ಹಲವರ ಬೇಡಿಕೆಯಿಂದ ಪದವಿಯಲ್ಲಿ ಆರಂಭವಾದ ಈ ವಿಭಾಗ ಇಂದು ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಕೋರ್ಸ್‌ಗಳನ್ನು ನೀಡುತ್ತಿದೆ. ಈ ಮೂಲಕ ವಿಭಾಗ ಸಮರ್ಥವಾಗಿ ಮುನ್ನಡೆ ಯುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
"ವಿಜ್ಞಾನ ಮತ್ತು ತಂತ್ರಜ್ಞಾನದ ಇಂದಿನ ಬೆಳವಣಿಗೆಗಳಲ್ಲಿ ಪರಿಣಾಮಕಾರಿ ಸಂಶೋಧನೆಗಳು ನಡೆಯಬೇಕಾಗಿದೆ. ಇಂದು ವಿಜ್ಞಾನಕ್ಷೇತ್ರದಲ್ಲಿ ಭಾರತ ಮೈಲಿಗಲ್ಲುಗಳನ್ನು ಸಾಧಿಸಿದ್ದರೂ, ಕೆಲವು ಮೂಲಭೂತ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಶುದ್ಧ ನೀರಿನ ಲಭ್ಯತೆ, ಮಾಲಿನ್ಯರಹಿತ ಶುದ್ಧ ಗಾಳಿ, ವಿಷರಹಿತ ಆಹಾರ, ಪರಿಣಾಮಕಾರಿ ಔಷಧಿ, ಪ್ಲಾಸ್ಟಿಕ್ ರಹಿತ ಸ್ವಚ್ಛ ಪರಿಸರ ಎಲ್ಲರಿಗೂ ದೊರಕುವಂತಾಗಬೇಕು. ಈ ಅವಶ್ಯಕ ವಿಚಾರಗಳ ಬಗೆಗೆ ವಿಜ್ಞಾನಿಗಳು ಹೆಚ್ಚೆಚ್ಚು ಸಂಶೋಧನೆ ನಡೆಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ" ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆಯೋಜನೆಯಲ್ಲಿ ಸಮಭಾಗಿಗಳಾದ ಹಳೇ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು "ಎಲ್ಲಾ ಹಳೇ ವಿದ್ಯಾರ್ಥಿಗಳನ್ನು ಒಂದೆಡೆ ನೋಡಿ ಸಂತೋಷವಾಗುತ್ತಿದೆ. ಅವರೆಲ್ಲಾ ಸೇರಿ ತಾವು ಓದಿದ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಇಂದಿನ ಮಕ್ಕಳಿಗೆ ಪ್ರೇರಣೆಯಾಗಬೇಕು. ವಿದ್ಯಾರ್ಥಿಗಳು ವೈಯಕ್ತಿಕವಾಗಿ ಆಸಕ್ತಿ ವಹಿಸಿ ಮುಂದೆ ಬರಬೇಕು" ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳು ನಡೆಸಿದ ಸಂಶೋಧನೆಯ ಅಮೂರ್ತ ವರದಿಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿ "ಆಪ್ಲಿಕೇಶನ್ ಆಫ್ ಸ್ಪೇಸ್ ಟೆಕ್ನಾಲಜಿ ಟೂಲ್ಸ್ ಇನ್ ಬಯೋಲಾಜಿಕಲ್ ರೀಸರ್ಚ್: ಫ್ರಮ್ ಸ್ಪೇಸ್‌ಟು ಸ್ಪೀಸೀಸ್" ಎಂಬ ವಿಷಯವನ್ನು ಪ್ರಸ್ತುತಪಡಿಸಿ ಉಪಗ್ರಹಗಳ ಬಳಕೆ, ವಿನ್ಯಾಸ, ಅವಶ್ಯಕತೆ, ಜೈವಿಕ ಜಗತ್ತಿನಲ್ಲಿ ರಿಮೋಟ್ ಸೆನ್ಸಿಂಗ್‌ನ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್ ಭಟ್, ಪ್ರಾಧ್ಯಾಪಕ ಡಾ. ರಾಘವೇಂದ್ರರಾವ್ ಮತ್ತಿತ್ತರ ಗಣ್ಯರು ಉಪಸ್ಥಿತರಿ ದ್ದರು. ದ್ವಿತೀಯ ಎಂಎಸ್ಸಿ ವಿದ್ಯಾರ್ಥಿನಿ ಬಿಂದುಪ್ರಿಯ ಕಾರ್ಯಕ್ರಮ ನಿರೂಪಿಸಿದರು.







