ಬಾಬರಿ ಮಸೀದಿ ಪ್ರಕರಣದಲ್ಲಿ ಚರ್ಚೆ ಬೇಕಾಗಿಲ್ಲ, ನ್ಯಾಯಾಲಯ ತೀರ್ಪು ನೀಡಲಿ: ಎ.ಪಿ. ಉಸ್ತಾದ್

ಹೊಸದಿಲ್ಲಿ,ಮಾ.2: ಬಾಬರಿ ಮಸೀದಿ ಪ್ರಕರಣದಲ್ಲಿ ಚರ್ಚಿಸುವ ಅಗತ್ಯವಿಲ್ಲ. ಕೋರ್ಟು ತೀರ್ಪು ನೀಡಲಿ ಎಂದು ಅಖಿಲಭಾರತ ಸುನ್ನಿ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಹೊಸದಿಲ್ಲಿ ವಿಜ್ಞಾನ ಭವನದಲ್ಲಿ ಜೋರ್ಡಾನ್ ದೊರೆ ಅಬ್ದುಲ್ಲಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಜೋರ್ಡಾನ್ ದೊರೆಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಎ.ಪಿ. ಉಸ್ತಾದ್ ನಿಝಾಮುದ್ದೀನ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಾಬರಿ ಮಸೀದಿ ವಿಷಯದಲ್ಲಿ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಶ್ರೀಶ್ರೀ ರವಿಶಂಕರ್ ನೇತೃತ್ವದಲ್ಲಿ ಮೌಲಾನ ಸಲ್ಮಾನ್ ನದ್ವಿ ಮೊದಲಾದವರ ಸಹಕಾರದಲ್ಲಿ ಬಾಬರಿ ಮಸೀದಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸುವ ಯತ್ನದ ಕುರಿತು ಪ್ರಶ್ನಿಸಿದಾಗ ಕಾಂತಪುರಂ ಹೀಗೆ ಹೇಳಿದರು.
ಚರ್ಚಿಸಿ ತೀರ್ಮಾನಕ್ಕೆ ಬರುವುದು ಉತ್ತಮವಾದರೂ ಚರ್ಚೆಗೆ ಮೂರನೆ ವ್ಯಕ್ತಿ ಬರುವ ಸಾಧ್ಯತೆ ಸೃಷ್ಟಿಯಾಗಬಹುದು. ಆದ್ದರಿಂದ ನ್ಯಾಯೋಚಿತವಾದ ತೀರ್ಮಾನವನ್ನು ಕೋರ್ಟು ತಳೆಯಬೇಕಿದೆ. ಬಾಬರಿ ಮಸೀದಿಯ ಸ್ಥಳಹಂಚಿಕೊಳ್ಳುವ ಬಗ್ಗೆ ತನಗೆ ಸಹಮತವಿಲ್ಲ. ಮಸೀದಿ ಮುಸ್ಲಿಮರದ್ದಾಗಿರುತ್ತದೆ. ಅಲ್ಲಿ ಮಸೀದಿ ಇತ್ತೆನ್ನುವುದು ಸ್ಪಷ್ಟ ವಿಚಾರವಾಗಿದೆ. ಮಸೀದಿ ಕೆಡವಿದ್ದು ಸರಿಯಲ್ಲ ಎನ್ನುವ ವಾದ ಸದಾ ಅಸ್ತಿತ್ವದಲ್ಲಿ ಉಳಿಯಲಿದೆ ಎಂದರು.
ಸಿರಿಯದ ನರಹತ್ಯೆಯ ವಿರುದ್ಧ ಕಲ್ಲಿಕೋಟೆಯ ಮರ್ಕಝ್ ಮತ್ತು ಸುನ್ನಿ ವಿದ್ಯಾಭ್ಯಾಸ ಮಂಡಳಿಯ ಅಧೀನದಲ್ಲಿ ದೇಶಾದ್ಯಂತ ಇರುವ ಸಾವಿರಾರು ಮಸೀದಿಗಳಲ್ಲಿ ಜುಮ್ಮಾ ನಮಾಝ್ ಬಳಿಕ ಪ್ರಾರ್ಥನಾ ಸಭೆ ನಡೆಸಲಾಗುವುದು ಎಂದು ಉಸ್ತಾದ್ ತಿಳಿಸಿದ್ದಾರೆ. ಕಲ್ಲಿಕೋಟೆ ಮರ್ಕಝ್ ಉಪ ಪ್ರಾಂಶುಪಾಲ ಡಾ. ಹುಸೈನ್ ಸಖಾಫಿ ಚುಳ್ಳಿಕ್ಕೋಡ್, ಇಂಡೊ ಅರಬ್ ಕಲ್ಚರಲ್ ಮಿಶನ್ ಕಾರ್ಯದರ್ಶಿ ಅಮೀನ್ ಮುಹಮ್ಮದ್ ಹಸನ್ ಸಖಾಪಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







