ಮಾ.8ರಂದು ವಿಶ್ವ ಮಹಿಳಾ ದಿನ: ಕೇರಳ ಪೊಲೀಸ್ ಠಾಣೆಗಳಲ್ಲಿ ಹೀಗೊಂದು ವಿಶೇಷತೆ

ತಿರುವನಂತಪುರಂ,ಮಾ.2: ವಿಶ್ವ ಮಹಿಳಾ ದಿನವಾದ ಮಾರ್ಚ್ 8ರಂದು ಕೇರಳದ ಪೊಲೀಸ್ ಠಾಣೆಗಳ ನಿಯಂತ್ರಣವನ್ನು ಮಹಿಳಾ ಪೊಲೀಸರು ವಹಿಸಿಕೊಳ್ಳಲಿದ್ದಾರೆ. ಮಹಿಳಾ ಸುರಕ್ಷೆ, ಸಂರಕ್ಷಣೆಗೆ ಗರಿಷ್ಠ ಪ್ರಾಮುಖ್ಯತೆ ಕಲ್ಪಿಸುವ ಸರಕಾರದ ನೀತಿಯನ್ನು ಸಕಾರಾತ್ಮಕವಾಗಿ ಚಿತ್ರಿಸುವ ಹೊಸ ಆಶಯದಲ್ಲಿ ರಾಜ್ಯ ಪೊಲೀಸರು ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೂ, ರೇಂಜ್ ಐಜಿಗಳಿಗೂ, ರಾಜ್ಯ ಪೊಲೀಸ್ ಮುಖ್ಯಸ್ಥರು ಸೂಚನೆ ನೀಡಿದ್ದಾರೆ.ಜಿಲ್ಲೆಯ ಮಹಿಳಾ ಸಿಐ, ಎಸ್ಸೈಗಳ ಸಂಖ್ಯೆ, ಅವರನ್ನು ನೇಮಕಗೊಳಿಸಲು ಸಾಧ್ಯವಿರುವ ಪೊಲೀಸ್ ಠಾಣೆಗಳ ವಿವರಗಳನ್ನು ಡಿಜಿಪಿ ಕೇಳಿದ್ದಾರೆ. ಕೇರಳದ55,000 ಪೊಲೀಸರಲ್ಲಿ ಒಬ್ಬ ಮಹಿಳಾ ಡಿವೈಎಸ್ಪಿ, 22 ಮಹಿಳಾ ಸಿಐ, 167 ಮಹಿಳಾ ಎಸ್ಸೈಗಳು ಮಾತ್ರ ಇದ್ದಾರೆ.
ಇವರನ್ನು ಕೇರಳದ 471 ಪೊಲೀಸ್ ಠಾಣೆಗಳಿಗೆ ಒಂದು ದಿವಸದ ಮಟ್ಟಿಗೆ ಸ್ಟೇಶನ್ ಹೌಸ್ ಆಫಿಸರ್(ಎಸ್‍ಎಚ್‍ಒ) ಮಾಡಬೇಕಾಗುತ್ತದೆ. ಪೊಲೀಸರ ಲಭ್ಯತೆ ಪ್ರಕಾರ ಎಲ್ಲ ಪೊಲೀಸ್ ಠಾಣೆಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಕಗೊಳಿಸಲು ಸಾಧ್ಯವಿಲ್ಲದ್ದಿದ್ದರೂ ಸಾಧ್ಯವಿರುವಷ್ಟು ಜಾಗಗಳಲ್ಲಿ ಅವರನ್ನು ಎಸ್‍ಎಚ್‍ಒ ಆಗಿ ನೇಮಕಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆದೇಶ ಶೀಘ್ರದಲ್ಲಿಯೇ ಹೊರಬರಲಿದೆ.





