ಬಿಜೆಪಿಗೆ ಸುಳ್ಳು ಹೇಳುವುದೇ ಚಾಳಿ: ಕೆ.ಜೆ.ಜಾರ್ಜ್

ಬೆಂಗಳೂರು, ಮಾ.2: ಕಾಂಗ್ರೆಸ್ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ಸಮೇತ ಬಹಿರಂಗ ಪಡಿಸಲಿ. ಕೇವಲ ಬಿಜೆಪಿಯ ಊಹಾಪೋಹ ಮಾತುಗಳಿಗೆ ಯಾವುದೆ ಬೆಲೆ ಇರುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಾಗ್ದಾಳಿ ನಡೆಸಿದರು.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜರ್ಮನಿಯ ಹಿಟ್ಲರ್ ಆಡಳಿತದಲ್ಲಿ ಗೋಬೆಲ್ಸ್ ಎಂಬ ಮಾಹಿತಿ ಸಚಿವ ಇದ್ದ. ಆತ ಒಂದು ಸುಳ್ಳನ್ನು ನೂರು ಬಾರಿ ಹೇಳಿ, ಸತ್ಯ ಎಂದು ವಾದಿಸುತ್ತಿದ್ದ. ಇಲ್ಲಿ ಬಿಜೆಪಿಯವರು ಅದೇ ಕೆಲಸ ಮಾಡುತ್ತಿದ್ದಾರೆ. ಮೇಲಿಂದ ಕೆಳಗಿನವರೆಗೂ ಎಲ್ಲ ಹಂತದ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸ್ಟೀಲ್‌ಬ್ರಿಡ್ಜ್ ಯೋಜನೆಯನ್ನು ರದ್ದುಮಾಡಿ ಒಂದು ವರ್ಷವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಸ್ಟೀಲ್‌ಬ್ರಿಡ್ಜ್‌ನಲ್ಲಿ ರಾಜ್ಯ ಸರಕಾರ ಕಮಿಷನ್ ಪಡೆದಿದೆ ಎಂದು ಆರೋಪ ಮಾಡುತ್ತಾರೆ. ಅವರ ಆರೋಪಕ್ಕೆ ದಾಖಲೆಗಳಿದ್ದರೆ ತೋರಿಸಬೇಕು. ಗುಮಾಸ್ತ ಕೂಡ ದಾಖಲೆ ಇಲ್ಲದೆ ಆರೋಪ ಮಾಡುವುದಿಲ್ಲ. ಪ್ರಧಾನಿ ಆದವರು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲವೆಂದು ಅವರು ಹೇಳಿದರು.
ಸ್ಟೀಲ್ ಬ್ರಿಡ್ಜ್ ಯೋಜನೆ ಆರಂಭಿಸಿದ್ದು ಬಿಜೆಪಿ ಸರಕಾರ. ನಮ್ಮ ಸರಕಾರ ಜನರಿಗೆ ಸಂಚಾರ ದಟ್ಟಣೆಯಿಂದಾಗುವ ಸಮಸ್ಯೆ ತಪ್ಪಿಸಲು ಈ ಯೋಜನೆಯನ್ನು ಮುಂದುವರೆಸಿತು. ಅದಕ್ಕೆ ವಿರೋಧ ಮಾಡಿದವರ ಜತೆ ಸಭೆ ನಡೆಸಿದಾಗ 'ಕೇಂದ್ರ ಸರಕಾರದ ಸಂಸ್ಥೆಯಿಂದಲೇ ಈ ಯೋಜನೆ ಕೈಗೆತ್ತಿಕೊಳ್ಳಿ. ನಮ್ಮ ಅಭ್ಯಂತರವಿಲ್ಲ, ಜನರಿಗೆ ಅನುಕೂಲವಾಗಲಿ' ಎಂದು ಹೇಳಿದ್ದೆ. ಆದರೆ, ಅದಕ್ಕೆ ಅವರು ಉತ್ತರಿಸಲಿಲ್ಲ ಎಂದು ಅವರು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಬೆಂಗಳೂರಿಗೆ ಗಾರ್ಬೆಜ್ ಸಿಟಿ ಎಂಬ ಕೆಟ್ಟ ಹೆಸರು ಬಂದಿತ್ತು. ಕಸದ ಸಮಸ್ಯೆ ನಿವಾರಣೆ ಆಗಲಿಲ್ಲ. ಸರಕಾರದ ಆಸ್ತಿ ಅಡಮಾನ ಇಟ್ಟರು. ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು, ಈಗ ಅವರು ಬೆಂಗಳೂರು ರಕ್ಷಿಸಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅಧ್ಯಕ್ಷತೆಯ ಭೂ ಮಂಜೂರಾತಿ ಸಮಿತಿ ಸಾವಿರಾರು ಎಕರೆಯನ್ನು ಮನಸೋಇಚ್ಚೆ ಮಂಜೂರು ಮಾಡಿತ್ತು. ನಮ್ಮ ಸರಕಾರ ಒತ್ತುವರಿ ಭೂಮಿಯನ್ನು ತೆರವು ಮಾಡಿದೆ. ಕಸದ ಸಮಸ್ಯೆ ನಿವಾರಣೆ ಮಾಡಿದೆ. ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿದೆ. ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟು ಏನೂ ಗೊತ್ತಿಲ್ಲ. ಜೈಲಿಗೆ ಹೋಗಿ ಬಂದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಕಿಡಿಕಾರಿದರು.
ಯಡಿಯೂರಪ್ಪನವರ ಡಿನೋಟಿಫಿಕೇಷನ್ ಹಗರಣಗಳು, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯಶೆಟ್ಟಿ ಅವರ ಭೂ ಹಗರಣಗಳು ಈಗಲೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ನಮ್ಮ ಸರಕಾರದ ಅವಧಿಯಲ್ಲಿ ಇಂಥ ಒಂದು ಹಗರಣವನ್ನು ತೋರಿಸಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದು ಅವರು ಅವರು ಹೇಳಿದರು.
ಚುನಾವಣೆಯ ಕಾರಣಕ್ಕೆ ಜನರ ದಾರಿ ತಪ್ಪಿಸಲು ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ಅಪರಾಧಗಳ ಸಂಖ್ಯೆ ನಮ್ಮ ಸರಕಾರದ ಅವಧಿಯಲ್ಲಿ ಇಳಿಮುಖವಾಗಿದೆ. ದೇಶದ ಅಪರಾಧ ನಗರಗಳಲ್ಲಿ ಬೆಂಗಳೂರು ಹೆಸರಿಲ್ಲ. ಬದಲಾಗಿ ಬೆಂಗಳೂರಿಗೆ ಕ್ರಿಯಾಶೀಲ ನಗರ ಹಾಗೂ ನವೋದ್ಯಮಿಗಳ ರಾಜಧಾನಿ ಎಂಬ ಹೆಸರು ಬಂದಿದೆ. ಬಿಜೆಪಿಯವರಿಗೆ ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗಿ ಸುಳ್ಳಿನ ಕತೆ ಕಟ್ಟುತ್ತಿದ್ದಾರೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ







