ಅವೈಜ್ಞಾನಿಕ ಕಸ ಸಂಸ್ಕರಣೆಯಿಂದ ಸರಕಾರಕ್ಕೆ ನಷ್ಟ: ಶಾಸಕ ಅಶ್ವತ್ಥ್ ನಾರಾಯಣ್

ಬೆಂಗಳೂರು, ಮಾ. 2: ಅವೈಜ್ಞಾನಿಕ ಕಸ ಸಂಸ್ಕರಣೆಯಿಂದ ಪ್ರತಿವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸಾವಿರಾರು ಕೋಟಿ ರೂ.ನಷ್ಟವಾಗುತ್ತಿದೆ. ಆದರೂ, ರಾಜ್ಯ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಾಸಕ ಡಾ.ಅಶ್ವತ್ಥ್ ನಾರಾಯಣ್ ದೂರಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಮೂರುವರೆ ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಮಾಲಿನ್ಯ ಉಂಟಾಗುತ್ತಿದೆ ಎಂದು ಟೀಕಿಸಿದರು.
ಬಿಬಿಎಂಪಿ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ವೈಫಲ್ಯದಿಂದ ಬೆಂಗಳೂರು ನಗರದಲ್ಲಿನ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಪರಿಸರ ಮಾಲಿನ್ಯದ ಜೊತೆಗೆ ಸಾವಿರಾರು ಕೋಟಿ ರೂ.ಗಳು ಸರಕಾರಕ್ಕೆ ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು.
ಬಿಬಿಎಂಪಿಯ 8 ವಲಯಗಳ ಪೈಕಿ 5 ವಲಯಗಳಲ್ಲಿ ಶೇ.40ರಷ್ಟು, ಉಳಿದ ಮೂರು ವಲಯಗಳಲ್ಲಿ ಶೇ.60ರಷ್ಟು ಕಸ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳುವ ಮೂಲಕ ಬೆಂಗಳೂರು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಅವರು ಆಪಾದಿಸಿದರು.
ಕೆಸಿಡಿಸಿ ಕೂಡ್ಲುವಿನಲ್ಲಿ 800 ಟನ್ ಕಸ ಸಂಸ್ಕರಣೆ ಸಾಮರ್ಥ್ಯ ಹೊಂದಿದ್ದರೂ, ಕೇವಲ 200 ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಕನ್ನಹಳ್ಳಿಯಲ್ಲಿ 500 ಟನ್ ಸಾಮರ್ಥ್ಯವಿದ್ದರೂ ಯಾವುದೇ ಕೆಲಸವಾಗುತ್ತಿಲ್ಲ. ಸೀಗೇಹಳ್ಳಿ, ಚಿಕ್ಕನಾಗಮಂಗಲ, ಸುಬ್ರಮಣ್ಯಪಾಳ್ಯ, ಲಿಂಗಧರನಹಳ್ಳಿ, ದೊಡ್ಡ ಬಿದರಕಲ್ಲು, ಮಾವಳ್ಳಿಪುರ ಘಟಕಗಳು ಸಂಪೂರ್ಣ ಮುಚ್ಚಿವೆ. ಪ್ರತಿದಿನ ಉತ್ಪತ್ತಿಯಾಗುವ ಮೂರುವರೆ ಸಾವಿರ ಟನ್ ಕಸದಲ್ಲಿ 350ರಿಂದ 450ಟನ್ ಕಸವಷ್ಟೇ ಸಂಸ್ಕರಣೆಯಾಗುತ್ತಿದೆ. ಹಸಿ ಕಸ ಮತ್ತು ಒಣ ಕಸ ವಿಂಗಡಣೆಯಲ್ಲೂ ಪಾಲಿಕೆ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ. ಇದರಿಂದಾಗಿ ಕಸವನ್ನು ಬೇಕಾಬಿಟ್ಟಿ ಎಸೆಯುವುದರಿಂದ ಮಾಲಿನ್ಯ ಸಮಸ್ಯೆಗೂ ಕಾರಣವಾಗಿದೆ ಎಂದು ಅಂಕಿ ಅಂಶ ನೀಡಿದರು.







