ದಲೈಲಾಮಾ ಕಾರ್ಯಕ್ರಮದಿಂದ ಅಧಿಕಾರಿಗಳು, ನಾಯಕರು ದೂರವಿರಿ ಎಂದಿತೇ ಕೇಂದ್ರ?
ಈ ಬಗ್ಗೆ ಸರಕಾರ ಹೇಳಿದ್ದೇನು?

ಹೊಸದಿಲ್ಲಿ, ಮಾ.2: ದಲೈ ಲಾಮಾ ಬಗೆಗಿನ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸರಕಾರ ಹೇಳಿದೆ. ಟಿಬೆಟ್ ನ ಆಧ್ಯಾತ್ಮಿಕ ಗುರು ತನ್ನ ದೇಶದಿಂದ ಹೊರಗಿದ್ದು, 60 ವರ್ಷಗಳಾದ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭಗಳಿಂದ ಹಿರಿಯ ನಾಯಕರು ಹಾಗೂ ಸರಕಾರಿ ಅಧಿಕಾರಿಗಳು ದೂರವಿರಬೇಕೆಂದು ಕೇಂದ್ರ ಹೇಳಿದೆಯೆಂದು ಕೆಲ ಮಾಧ್ಯಮಗಳು ವರದಿ ಮಾಡಿದ ನಂತರ ಸರಕಾರ ಮೇಲಿನಂತೆ ಹೇಳಿದೆ.
ಆದರೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿಗಳನ್ನು ಅಲ್ಲಗಳೆದು ಹೀಗೆ ಹೇಳಿದೆ- "ಮಾನ್ಯ ದಲೈಲಾಮಾ ಬಗ್ಗೆ ಭಾರತ ಸರಕಾರದ ನಿಲುವು ಸ್ಪಷ್ಟ ಹಾಗೂ ಸ್ಥಿರವಾಗಿದೆ. ಅವರೊಬ್ಬ ಪೂಜನೀಯ ಧಾರ್ಮಿಕ ನಾಯಕರಾಗಿದ್ದು ಭಾರತೀಯರು ಅವರನ್ನು ತುಂಬಾ ಗೌರವಿಸುತ್ತಾರೆ. ಈ ನಿಟ್ಟಿನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರಿಗೆ ಭಾರತದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ಮುಂದುವರಿಸಲು ಎಲ್ಲಾ ಸ್ವಾತಂತ್ರ್ಯ ನೀಡಲಾಗಿದೆ''.
ಚೀನಾದೊಂದಿಗೆ ಸಂಬಂಧ ಉತ್ತಮ ಪಡಿಸುವ ದೃಷ್ಟಿಯಿಮದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿಕೆ ನೀಡಿ ದಲೈ ಲಾಮಾ ಆವರ ಎಲ್ಲಾ ಕಾರ್ಯಕ್ರಮಗಳನ್ನು ತಪ್ಪಿಸುವಂತೆ ಹೇಳಿದ್ದರೆಂದು ವರದಿಯೊಂದು ತಿಳಿಸಿತ್ತು. ವಿದೇಶಾಂಗ ಕಾರ್ಯದರ್ಶಿಯವರು ಚೀನಾದ ಉಪ ವಿದೇಶಾಂಗ ಸಚಿವ ಕೊಂಗ್ ಕ್ಸುವಾನ್ಯು, ವಿದೇಶಾಂಗ ಸಚಿವ ವ್ಯಾಂಗ್ ಹಾಗೂ ರಾಜ್ಯ ಕೌನ್ಸಿಲರ್ ಯಾಂಗ್ ಜೀಚಿ ಜತೆ ಮಾತುಕತೆಗಳಿಗಾಗಿ ಬೀಜಿಂಗಿಗೆ ಹೊರಡುವ ಮುನ್ನಾದಿನ ಸರಕಾರದ ನಿರ್ದೇಶನ ಬಂದಿತ್ತೆಂದು ಹೇಳಲಾಗಿದೆ.





