ಬಾಬಾಬುಡಾನ್‍ಗಿರಿ: ಗುಹೆ ಪ್ರವೇಶಕ್ಕೆ ಅವಕಾಶ ನೀಡದ ಜಿಲ್ಲಾಡಳಿತ; ನಡೆಯದ ಉರೂಸ್

ಚಿಕ್ಕಮಗಳೂರು, ಮಾ.2: ಹಿಂದೂ-ಮುಸಲ್ಮಾನರ ಧಾರ್ಮಿಕ ಸಾಮರಸ್ಯದ ಕೇಂದ್ರವಾಗಿರುವ ಬಾಬಾಬುಡಾನ್‍ಗಿರಿಯಲ್ಲಿ ಪ್ರತೀ ವರ್ಷ ಮೂರು ದಿನಗಳ ಕಾಲ ನಡೆಯುತ್ತಿದ್ದ ಉರೂಸ್ ಈ ಬಾರಿ ಗೊಂದಲಕ್ಕೆ ಕಾರಣವಾಗಿದೆ. ಗುಹೆಯ ಒಳಗೆ ಶಾಖಾದ್ರಿ ಪ್ರವೇಶ ಹಾಗೂ ಗೋರಿಗಳ ಬಳಿ ತೆರಳಲು ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಉಲ್ಲೇಖಿಸಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಮುಸ್ಲಿಮರು ಬಾಬಾಬುಡಾನ್‍ಗಿರಿ ದರ್ಗಾದಲ್ಲಿ ಉರೂಸ್ ನಡೆಸದೇ ಹಿಂತಿರುಗಿದ ಘಟನೆ ಶುಕ್ರವಾರ ನಡೆದಿದೆ
ಬಾಬಾಬುಡನ್‍ಗಿರಿಯಲ್ಲಿ ಪ್ರತೀ ವರ್ಷ ಹೋಳಿ ಹುಣ್ಣಿಮೆಯ ತರುವಾಯ ಉರೂಸ್ ನಡೆಯುವುದು ವಾಡಿಕೆಯಾಗಿದ್ದು, ಮಾ.2ರಿಂದ 4ರವೆಗೆ ನ್ಯಾಯಾಲಯದ ಆದೇಶದಂತೆ ಉರೂಸ್ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಮತ್ತೊಂದೆಡೆ ಈ ಬಾರಿಯ ಉರೂಸ್ ಅನ್ನು ಬಾಬಾಬುಡನ್ ಗಿರಿಯ ಶಾಖಾದ್ರಿ ಸೈಯದ್ ಗೌಸ್ ಮೊಹಿದ್ದೀನ್ ಷಾ ಅವರ ನೇತೃತ್ವದಲ್ಲಿ ನಡೆಸಬೇಕು. ಅಲ್ಲದೇ ಗುಹೆಯೊಳಗೆ ಹೋಗಲು ಅವಕಾಶ ನೀಡಬೇಕಂದು ನಗರದ ಹಝ್ರತ್ ದಾದಾ ಹಯಾತ್ ಮೀರ್ ಕಮಿಟಿ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಅವಕಾಶ ನೀಡದಿದ್ದಲ್ಲಿ ಉರೂಸ್ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಉರೂಸ್ ಅಂಗವಾಗಿ ಅತ್ತಿಗುಂಡಿಯಿಂದ ಶಾಖಾದ್ರಿ ಸೈಯದ್ ಗೌಸ್ ಮೊಹಿದ್ದೀನ್ ನೇತೃತ್ವದಲ್ಲಿ ಗುಹೆಯ ಮುಖ್ಯದ್ವಾರಕ್ಕೆ ಉರೂಸ್ ಗೆ ಬಂದಿದ್ದವರು ತೆರಳಿದರು. ಶಾಖಾದ್ರಿ ಗಿರಿಯ ಮುಖ್ಯದ್ವಾರಕ್ಕೆ ಬರುವ ಮುಂಚೆಯೇ ಶಾಖಾದ್ರಿಯ ಕಡೆಯವರು ಬಾಬಾ ಬುಡನ್‍ಗಿರಿ ಪೀಠದ ಮುಜರಾಯಿ ಇಲಾಖೆ ಕಚೇರಿಗೆ ಬಂದು ಶಾಖಾದ್ರಿಯವರು ಗುಹೆಯಲ್ಲಿ ಉರೂಸ್ ನಡೆಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, 'ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಉರೂಸ್ ನಡೆಸಲು ಅವಕಾಶ ನೀಡಲಾಗುವುದು. ನ್ಯಾಯಾಲಯವು ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಅದರಂತೆ ಮುಜಾವರ್ ಅವರಿಗೆ ಮಾತ್ರ ಗುಹೆಯೊಳಗೆ ಉರೂಸ್ ನಡೆಸಲು ಅವಕಾಶವಿದೆ. ಇದನ್ನು ಹೊರತುಪಡಿಸಿ ಬೇರೆ ರೀತಿಯ ವಿಧಿ, ವಿಧಾನಗಳಿಗೆ ಅವಕಾಶವಿಲ್ಲ' ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮೆರವಣಿಗೆಯಲ್ಲಿ ಗುಹೆಯ ಮುಖ್ಯದ್ವಾರಕ್ಕೆ ಬಂದ ಶಾಖಾದ್ರಿ, ಗುಹೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಗುಹೆಯ ಮುಂಭಾಗದಲ್ಲಿಯೇ ಕೆಲಕಾಲ ಧರಣಿ ನಡೆಸಿದರು. ಆದರೆ ಜಿಲ್ಲಾಡಳಿತ ನ್ಯಾಯಾಲಯದ ಯಥಾಸ್ಥಿತಿ ಆದೇಶ ಉಲ್ಲೇಖಿಸಿ ಶಾಖಾದ್ರಿಗೆ ಗುಹೆ ಪ್ರವೇಶ ನಿರಾಕರಿಸಿದ್ದರಿಂದ ಶಾಖಾದ್ರಿ ಸೇರಿದಂತೆ ಫಕೀರರು ಜಿಲ್ಲಾಡಳಿತದ ಉರೂಸ್‍ನಲ್ಲಿ ಭಾಗವಹಿಸದೇ ಫಕೀರ್ ಚೌಕಿಗೆ ಹಿಂದಿರುಗಿದರು.
ಉರೂಸ್ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಫಕೀರರು ವಿವಿಧ ಜಾನಪದ ಶೈಲಿಯ ಕಲೆ, ಸಾಹಸ ಪ್ರದರ್ಶನ ನೀಡಿದರು. ಶಾಖಾದ್ರಿ ಮತ್ತು ಫಕೀರರು ತೆರಳಿದ ನಂತರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ರಕ್ಷಣಾಧಿಕಾರಿ ಕೆ.ಅಣ್ಣಾಮಲೈ ಖುದ್ದಾಗಿ ನಿಂತು ಮುಜಾವರ್ ಅವರ ಮೂಲಕ ಉರೂಸ್ ಆಚರಣೆಯ ವಿಧಿ ನೆರವೇರಿಸಿದರು. ಮುಜರಾಯಿ ತಹಶೀಲ್ದಾರ್ ಭಾಗೀರಥಮ್ಮ ಈ ವೇಳೆ ಉಪಸ್ಥಿತರಿದ್ದರು. ಉರೂಸ್ ಹಿನ್ನೆಲೆಯಲ್ಲಿ ಬಾಬಾಬುಡನ್ ಗಿರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
2005ರಲ್ಲಿ ನಡೆದ ಉರೂಸ್ ತರುವಾಯ ಏರ್ಪಟ್ಟಿದ್ದ ಧಾರ್ಮಿಕ ಆಚರಣೆಗಳ ಕುರಿತಾದ ಗೊಂದಲದಿಂದಾಗಿ ಜಿಲ್ಲಾಡಳಿತ ಶಾಖಾದ್ರಿ ಅವರಿಗೆ ಉರೂಸ್ ನಡೆಸಲು ಅವಕಾಶ ನಿರಾಕರಿಸಿತ್ತು. ಇದರಿಂದಾಗಿ ಅಂದಿನಿಂದ ಇಂದಿನವರೆಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಡಾಕಲ್ ಸಮಿತಿಯೊಂದನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆಯ ನೇತೃತ್ವದಲ್ಲಿಯೇ ಸಂದಲ್ ಉರೂಸ್ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಜಿಲ್ಲಾಡಳಿತ ನ್ಯಾಯಾಲಯದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಉಲ್ಲೇಖಿಸಿ ಶಾಖಾದ್ರಿಗೆ ಗುಹೆ ಪ್ರವೇಶ ನಿರಾಕರಿಸಿದೆ. ಈ ಗೊಂದಲಗಳಿಂದಾಗಿ ಉರೂಸ್‍ಗೆ ಬರುವ ಭಕ್ತರ ಸಂಖ್ಯೆಯಲ್ಲಿ ಪ್ರತೀ ವರ್ಷವೂ ಇಳಿಮುಖವಾಗುತ್ತಿದೆ.







