ಮಾಸ್ ಪ್ರಿಯರ ನಾಯಕನಾಗಿ ರಜಿನಿ: ‘ಕಾಲಾ’ ಟೀಸರ್ ನಲ್ಲಿ ಮಿಂಚಿದ 'ಸ್ಟೈಲ್ ಕಿಂಗ್'
ಬಿಡುಗಡೆಯಾದ 20 ಗಂಟೆಗಳಲ್ಲೇ ದಾಖಲೆ ವೀವ್ಸ್

ಚೆನ್ನೈ, ಮಾ.2: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ 2018ರ ಬಹುನಿರೀಕ್ಷಿತ ಚಿತ್ರ ‘ಕಾಲಾ’ದ ಟೀಸರ್ ಮಾ.1ರ ಮಧ್ಯರಾತ್ರಿ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಜಿನಿಕಾಂತ್ ಅಳಿಯ ನಟ ಧನುಷ್ ಈ ಚಿತ್ರದ ನಿರ್ಮಾಪಕರಾಗಿದ್ದು, ‘ಕಬಾಲಿ’ಯ ಪಾ ರಂಜಿತ್ ನಿರ್ದೇಶಕರಾಗಿದ್ದಾರೆ. ರಜಿನಿ-ರಂಜಿತ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಎರಡನೆ ಚಿತ್ರ ಇದಾಗಿದೆ.
ಕಾರ್ಮಿಕರ ಪರ ಹೋರಾಡುವ ನಾಯಕನ ಕಥೆ ಇರುವ ಸಿನೆಮಾ ಇದಾಗಿರಬಹುದು ಎಂದು ಟೀಸರ್ ವೀಕ್ಷಿಸಿದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಸರ್ ನಲ್ಲಿ ಸಿನೆಮಾಟೋಗ್ರಫಿ, ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಹಾಗು ರಜಿನಿಯ ಡೈಲಾಗ್ ಗಳನ್ನು ಅಭಿಮಾನಿಗಳು ಮೆಚ್ಚಿದ್ದಾರೆ.
ಚಿತ್ರದ ಇನ್ನೊಂದು ವಿಶೇಷತೆಯೆಂದರೆ ರಜಿನಿ ಎದುರಾಗಿ ನಟಿಸಿರುವುದು ಪ್ರತಿಭಾವಂತ ನಟ ನಾನಾ ಪಾಟೇಕರ್. ರಜಿನಿಕಾಂತ್ ಎದುರಾಳಿ ಪ್ರಬಲವಾಗಿ ಇಲ್ಲದೇ ಇರುವುದು ‘ಕಬಾಲಿ’ಯ ಅತೀ ದೊಡ್ಡ ಮೈನಸ್ ಪಾಯಿಂಟ್ ಎಂದು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ನೋಡುವುದಾದರೆ ‘ಕಾಲಾ’ದಲ್ಲಿ ನಾನಾ ಪಾಟೇಕರ್ ರಜಿನಿಯ ಎದುರಾಳಿಯಾಗಿರುವುದು ಚಿತ್ರದ ಪ್ಲಸ್ ಪಾಯಿಂಟ್ ಆಗಿರಬಹುದು ಎನ್ನಲಾಗುತ್ತಿದೆ.
ಬಿಡುಗಡೆಯಾದ 20 ಗಂಟೆಗಳಲ್ಲಿ 7.6 ಮಿಲಿಯನ್ ವೀವ್ಸ್ ಗಳಾಗಿದ್ದು, ಕಬಾಲಿ ಟೀಸರ್ ದಾಖಲೆಯನ್ನು ಮುರಿಯುವ ಹಂತದಲ್ಲಿ ‘ಕಾಲಾ’ ಇದೆ.







