ಪ್ರಸಾರ ಭಾರತಿ ಅನುದಾನಕ್ಕೆ ತಡೆ ವರದಿ ಬಗ್ಗೆ ಕೇಂದ್ರ ಸರಕಾರ ಹೇಳಿದ್ದೇನು?

ಹೊಸದಿಲ್ಲಿ, ಮಾ.2: ಭಿನ್ನಾಭಿಪ್ರಾಯಗಳ ಕಾರಣ ಪ್ರಸಾರ ಭಾರತಿಯ ಉದ್ಯೋಗಿಗಳಿಗೆ ನೀಡಬೇಕಾದ ವೇತನದ ನಿಧಿಯನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಯು ತಡೆಹಿಡಿದಿದೆ ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸರಕಾರ, ಇದು ಅವಮಾನಕಾರಿ ಮತ್ತು ಸಿನಿಕತನದಿಂದ ಕೂಡಿದ ವರದಿ ಎಂದು ಕಿಡಿಕಾರಿದೆ.
ಪ್ರಸಾರ ಭಾರತಿಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊವನ್ನು ನಿಭಾಯಿಸುತ್ತದೆ. ಆದರೆ ಅದು ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ಅನುದಾನವನ್ನು ಪಡೆಯುತ್ತದೆ. ಈ ವರದಿಯು ತಪ್ಪಾಗಿದ್ದು ಅಪೂರ್ಣ ಮಾಹಿತಿಯನ್ನು ಹೊಂದಿದೆ. ಈ ಮಾಹಿತಿಯು ಸಾರ್ವಜನಿಕರ ದೃಷ್ಟಿಯಲ್ಲಿ ಸರಕಾರದ ಘನತೆಗೆ ಕುಂದುಂಟು ಮಾಡುವುದಕ್ಕೆ ಸಮವಾಗಿದೆ. ಮುಖ್ಯವಾಗಿ ಅದು ಅವಮಾನಕಾರಿಯಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯು ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಇಲಾಖೆಯು ಪ್ರಸಾರ ಭಾರತಿಗೆ ನೀಡಬೇಕಾದ ಅನುದಾನವನ್ನು ಬಿಡುಗಡೆ ಮಾಡದಿರುವ ಕಾರಣ ಉದ್ಯೋಗಿಗಳಿಗೆ ಜನವರಿ ಮತ್ತು ಫೆಬ್ರವರಿ ತಿಂಗಳ ವೇತನವನ್ನು ತನ್ನ ತುರ್ತು ನಿಧಿಯಿಂದ ನೀಡಬೇಕಾಗಿದೆ. ಇಲಾಖೆ ಮತ್ತು ಪ್ರಸಾರ ಭಾರತಿಯ ಮಧ್ಯೆ ಈ ಸಂಘರ್ಷ ಹೀಗೆಯೇ ಮುಂದುವರಿದರೆ ಎಪ್ರಿಲ್ ವೇಳೆಗೆ ಪ್ರಸಾರ ಸಂಸ್ಥೆಗೆ ಹಣದ ಕೊರತೆ ಕಾಡಲಿದೆ ಎಂದು ಪ್ರಸಾರ ಭಾರತಿ ಮುಖ್ಯಸ್ಥ ಎ. ಸೂರ್ಯ ಪ್ರಕಾಶ್ ತಿಳಿಸಿರುವುದಾಗಿ ಸುದ್ದಿ ಜಾಲತಾಣವೊಂದು ವರದಿ ಮಾಡಿತ್ತು. ಇತ್ತೀಚೆಗೆ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಪ್ರಸಾರ ಮಾಡಲು ಗುತ್ತಿಗೆ ನೀಡಿದ್ದ ಖಾಸಗಿ ಸಂಸ್ಥೆಯೊಂದಕ್ಕೆ ಮೂರು ಕೋಟಿ ರೂ. ಪಾವತಿಸಬೇಕೆಂಬ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸೂಚನೆಯನ್ನು ಪ್ರಸಾರ ಭಾರತಿ ನಿರಾಕರಿಸುವುದೇ ಈ ಘರ್ಷಣೆಗೆ ಕಾರಣ ಎಂದು ಸುದ್ದಿ ಜಾಲ ವರದಿ ಮಾಡಿತ್ತು.





