ಸರಣಿ ಶೂಟೌಟ್ ಪ್ರಕರಣ: ಕಲಿ ಯೋಗೀಶನ ಇನ್ನೋರ್ವ ಸಹಚರನ ಸೆರೆ

ಮಂಗಳೂರು, ಮಾ. 2: ಮಂಗಳೂರು ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಂದ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಸಿಸಿಬಿ ಪೊಲೀಸರು ಇನ್ನೋರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಹಳೆಯಂಗಡಿ ಕೊಯ್ಕುಡೆ ಗ್ರಾಮ ದಿನೇಶ್ (35) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನ ವಶದಿಂದ 2 ಮೊಬೈಲ್ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಯು ಕಲಿ ಯೋಗೀಶನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿಯನ್ನು ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಮಂಗಳೂರು ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶ ಎಂಬಾತನು ತನ್ನ ಸಹಚರರಿಂದ ನಡೆಸಿದ ಸರಣಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕ ಶಾಂತರಾಮ್ ಅವರ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಮನೋಜ್ ಕುಮಾರ್, ಚಂದ್ರಶೇಖರ ಎಂಬವರನ್ನು ಕಳೆದ ಡಿ. 28ರಂದು ವಶಕ್ಕೆ ಪಡೆದುಕೊಂಡು 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಅಲ್ಲದೇ ನಗರದ ಉದ್ಯಮಿಗಳ ಮಾಹಿತಿಯನ್ನು ಕಲಿ ಯೋಗೀಶನಿಗೆ ಒದಗಿಸುತ್ತಿದ್ದ ತೇಜ್‌ಪಾಲ್ ಎಂಬಾತನನ್ನು ಫೆ. 14ರಂದು ಪೊಲೀಸರು ದಸ್ತಗಿರಿ ಮಾಡಿದ್ದರು.
ಕಲಿ ಯೋಗೀಶನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕಿದ ಸಿಸಿಬಿ ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದರು. ಪತ್ತೆ ಕಾರ್ಯದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತಾರಾಮ್, ಪಿಎಸ್‌ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.







