ಬೆಂಗಳೂರು: ಕಳವು ಪ್ರಕರಣ; ನಾಲ್ವರ ಬಂಧನ

ಬೆಂಗಳೂರು, ಮಾ.2: ಚಿನ್ನಾಭರಣ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಕಳ್ಳವು ಮಾಡಿದ ಆರೋಪ ಪ್ರಕರಣ ಸಂಬಂಧ ಜೆಸಿನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ನೇಪಾಳದ ಕಂಚನಪುರ ಮೂಲದ ಪ್ರಕಾಶ್ ಯಾನೆ ಧನರಾಜ್‌ಗಿರಿ(39), ಚೈನ್‌ಪುರದ ಸುಮನ್ ಬಹದ್ದೂರ್(27), ರುಬೇನ್ ಕಡ್ಕ(19), ಕಿಶನ್ ಗಿರಿ(29) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಫೆ.2 ರಂದು ನಗರದ ಮಿಲ್ಲರ್ಸ್ ರಸ್ತೆಯ ಯೋಗೇಶ್ ಶರ್ಮಾ ಹಾಗೂ ಹಿತೇಶ್ ಶರ್ಮಾ ಮನೆಗೆ ನುಗ್ಗಿ ಅವರಿಬ್ಬರನ್ನು ಕೈ-ಕಾಲು ಕಟ್ಟಿ ಬೆಳ್ಳಿ ಆಭರಣಗಳು ಕಳವು ಮಾಡಿ ಅವರದೇ ಕಾರಿನಲ್ಲಿ ಪರಾರಿಯಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ಅವರು ರಚಿಸಿದ್ದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಐದು ದಿನಗಳೊಳಗಾಗಿ ನಾಲ್ವರನ್ನು ಬಂಧಿಸಿ 7 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಗಳು ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿದ್ದು, ತಂಡದ ಪ್ರಮುಖ ಆರೋಪಿ ಸುಮನ್ ಬಹದ್ದೂರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿ ಮೂವರನ್ನು ಮೊದಲು ಬಂಧಿಸಲಾಗಿತ್ತು. ನಂತರ ಉಳಿದವರನ್ನು ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ತಿಳಿಸಿದರು.





