ಥಿಯೇಟರ್ ಒಲಿಂಪಿಕ್ಸ್‌ಗೆ ಮಣಿಪಾಲದ ಸಂಗಮ ಕಲಾವಿದೆರ್

ಉಡುಪಿ, ಮಾ.2: ಮಣಿಪಾಲದ ಸಂಗಮ ಕಲಾವಿದೆರ್ ತಂಡ, ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಆಶ್ರಯದಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಮಟ್ಟದ ಎಂಟನೇ ಥಿಯೇಟರ್ ಒಲಿಂಪಿಕ್ಸ್‌ನಲ್ಲಿ ‘ವಾಲಿ ವಧೆ’ ಎಂಬ ತುಳು ನಾಟಕವನ್ನು ಪ್ರದರ್ಶಿಸಲು ಆಯ್ಕೆಯಾಗಿದೆ ಎಂದು ಸಂಗಮ ಕಲಾವಿದೆರ್ ಉಪಾಧ್ಯಕ್ಷ ಶ್ರೀಪತಿ ಪೆರಂಪಳ್ಳಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಥಿಯೇಟರ್ ಒಲಿಂಪಿಕ್ಸ್ 1993ರಲ್ಲಿ ಗ್ರೀಸ್ ದೇಶದ ಡೆಲ್ಫಿಯಲ್ಲಿ ಪ್ರಾರಂಭಗೊಂಡಿದ್ದು, ಇದೊಂದು ಅಂತಾರಾಷ್ಟ್ರೀಯ ರಂಗ ಉತ್ಸವವಾಗಿದೆ. ವಿಶ್ವದ ಬೇರೆ ಬೇರೆ ದೇಶಗಳ ವಿಭಿನ್ನ ರಂಗಭೂಮಿ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಒಗ್ಗೂಡಿಸುವ ವೇದಿಕೆಯಾಗಿ ಇದು ಕೆಲಸ ಮಾಡುತ್ತಿದೆ ಎಂದರು.
1993ರಲ್ಲಿ ಗ್ರೀಸ್‌ನಲ್ಲಿ ಮೊದಲ ಥಿಯೇಟರ್ ಒಲಿಂಪಿಕ್ಸ್ ನಡೆದಿದ್ದು, ಆ ಬಳಿಕ ವಿಶ್ವದ 7 ಬೇರೆ ಬೇರೆ ದೇಶಗಳಲ್ಲಿ ನಡೆದು ಈ ಬಾರಿ ಭಾರತದಲ್ಲಿ ಎಂಟನೇ ಥಿಯೇಟರ್ ಒಲಿಂಪಿಕ್ಸ್ ನಡೆಯುತ್ತಿದೆ. ಭಾರತದಲ್ಲಿ ಫೆ.17ರಿಂದ ಎ.8ರವರೆಗೆ ಮೂರು ತಿಂಗಳ ಕಾಲ ದೇಶದ ವಿವಿಧ ನಗರಗಳಲ್ಲಿ ವಿಶ್ವದ ವಿಭಿನ್ನ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ ಎಂದವರು ನುಡಿದರು.
ಥಿಯೇಟರ್ ಒಲಿಂಪಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲು ತುಳು ನಾಟಕ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದು, ಮಾ.9ರಂದು ಹೊಸದಿಲ್ಲಿಯ ಶ್ರೀರಾಮ್ ಸೆಂಟರ್‌ನಲ್ಲಿ ಸಂಜೆ 5:30ರಿಂದ ‘ವಾಲಿ ವದೆ’ ಪ್ರದರ್ಶನಗೊಳ್ಳಲಿದೆ ಎಂದರು.
ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಆಧರಿಸಿದ ‘ವಾಲಿ ವಧೆ’ಯನ್ನು ತುಳುವಿಗೆ ಅನುವಾದಿಸಿ ದವರು ದಿನೇಶ್ ಆಚಾರ್ಯ. ನಾಟಕದ ರಂಗಪಠ್ಯ, ವಿನ್ಯಾಸ, ಸಂಗೀತ ಹಾಗೂ ನಿರ್ದೇಶನ ನೀನಾಸಂ ಪದವೀಧರರಾದ ಕೊಕ್ಕರ್ಣೆಯ ಗಣೇಶ್ ಎಂ. ಈ ನಾಟಕ ಯಕ್ಷಗಾನ ಶೈಲಿಯಲ್ಲಿದೆ ಎಂದು ಶ್ರೀಪತಿ ಪೆರಂಪಳ್ಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಲಕ್ಷ್ಮಣ್ ಪೆರಂಪಳ್ಳಿ, ಕಾರ್ಯದರ್ಶಿ ಅಶೋಕ್ ಕಬ್ಯಾಡಿ, ಖಜಾಂಚಿ ಪ್ರಶಾಂತ್ ಉದ್ಯಾವರ ಉಪಸ್ಥಿತರಿದ್ದರು.







