ದೇಶದ ಜನರಲ್ಲಿ ನೈರ್ಮಲ್ಯದ ಅರಿವು ಹೆಚ್ಚುತ್ತಿದೆ: ಶಾಸಕ ಸಿ.ಟಿ ರವಿ

ಚಿಕ್ಕಮಗಳೂರು, ಮಾ.2: ಜನರ ಮನಸ್ಥಿತಿ ಬದಲಾದರೆ ಮಾತ್ರ ದೇಶದ ಪರಿಸ್ಥಿತಿ ಬದಲಾಗುತ್ತದೆ ಎಂದು ಶಾಸಕ ಸಿ.ಟಿ ರವಿ ಅಭಿಪ್ರಾಯಿಸಿದ್ದಾರೆ.
ತಾಲೂಕಿನ ಅಲ್ಲಂಪುರದಲ್ಲಿ ಜಿಪಂ, ತಾಪಂ, ಗ್ರಾಪಂ, ಸ್ವಚ್ಚ ಭಾರತ ಮಿಷನ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಶುಕ್ರವಾರ ಆಯೋಜಿಸಿದ್ದ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಯೋಜನೆಯಡಿಯಲ್ಲಿ ಸುಸ್ಥಿರ ನೈರ್ಮಲ್ಯದೆಡೆಗೆ ನಮ್ಮ ನಡಿಗೆ, ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇನ್ನೂ ದೇಶದ ಜನರಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡದಿರುವುದು ವಿಪರ್ಯಾಸ ಎಂದರು.
ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಶೌಚಕ್ಕೆ ಬಯಲಿಗೆ ಹೋಗಲು ಜನರಲ್ಲಿ ನಾಚಿಕೆ ಕಂಡುಬರುತ್ತಿದೆ. ಜನರ ಈ ಮನೋಭಾವನೆ ಮುಂದುವರಿದರೆ ಪರಿಸ್ಥಿತಿ ಬದಲಾಗುತ್ತದೆ. ಇಂದಿನ ಮಕ್ಕಳು ಕಸವನ್ನು ತೊಟ್ಟಿಗೆ ಹಾಕುತ್ತಾರೆ. ಆದರೆ ದೊಡ್ಡವರು ಬೀದಿಗೆ ಎಸೆಯುತ್ತಾರೆ ಎಂದ ಅವರು, ಈ ಮನೋಭಾವನೆ ಬದಲಾದಾಗ ಮಾತ್ರ ದೇಶ ಬದಲಾಗುತ್ತದೆ ಎಂದರು.
ನಾವು ಸ್ವಚ್ಚವಾಗಿರುತ್ತೇವೆ, ಪರಿಸರವನ್ನೂ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆ ಎಂದು ಎಲ್ಲರೂ ಸಂಕಲ್ಪ ಮಾಡಿದರೆ ಪ್ರಪಂಚದ ಯಾವ ಶಕ್ತಿಯೂ ಭಾರತವನ್ನು ಮುಟ್ಟಲು ಸಾಧ್ಯವಿಲ್ಲ ಎಂದ ಅವರು, ಬದಲಾಗಬೇಕಾಗಿರುವುದು ದೇಶವಲ್ಲ, ನಾವು. ನಾವು ಬದಲಾದರೆ ದೇಶ ಬದಲಾಗುತ್ತದೆ, ಶೌಚಾಲಯ ನಿರ್ಮಾಣವಾದರೆ ಸಾಲದು ಅದರ ಬಳಕೆಯಾಗಬೇಕು. ಬಯಲಿಗೆ ಹೋಗುವವರಲ್ಲಿ ನಾಚಿಕೆ ಬರಬೇಕು. ಆಗ ಶೌಚಾಲಯಗಳ ಸದ್ಬಳಕೆಯಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಸಿಇಒ ಸತ್ಯಭಾಮ, ಶೌಚಾಲಯದ ಸುಸ್ಥಿರ ಬಳಕೆ, ಮತದಾನ, ಗ್ರಾಮ ನೈರ್ಮಲ್ಯದ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿದ್ದು, ಇದನ್ನು ಜಿಲ್ಲಾದ್ಯಂತ ನಡೆಸಲಾಗುವುದು. ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದ್ದು, ಜಿಲ್ಲೆಯಲ್ಲಿ 65 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳ ಸದ್ಬಳಕೆಯಾಗಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ನಡೆದ ಜಾಗೃತಿ ಜಾಥಾಗೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ ಚಾಲನೆ ನೀಡಿದರು, ನಂತರ ವೀರಗಾಸೆ ತಂಡಗಳೊಂದಿಗೆ ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಶೌಚಾಲಯ ಬಳಸಿ ಆರೋಗ್ಯ ಉಳಿಸಿ, ಮತದಾನ ಮಾಡಿ ದೇಶ ಉಳಿಸಿ, ಗ್ರಾಮದ ನೈರ್ಮಲ್ಯ ಕಾಪಾಡಿ ಘೋಷಣೆಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಜಿಪಂ ಸದಸ್ಯರಾದ ರಾಮಸ್ವಾಮಿ ಶೆಟ್ಟಿಗದ್ದೆ, ಜೆಸಿಂತಾ ಅನಿಲ್‍ಕುಮಾರ್, ಸೋಮಶೇಖರ್, ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವ್ಯಾ ನಟೇಶ್ ಮತ್ತಿತರರು ಉಪಸ್ಥಿತರಿದ್ದರು.







