ಮಂಗಳೂರು: ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಅನುಮೋದನೆ
ಮಂಗಳೂರು, ಮಾ. 2: ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ 49 ಕೋಟಿ ರೂ. ವೆಚ್ಚದ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಶುಕ್ರವಾರ ಬೆಂಗಳೂರಿನಲ್ಲಿ ಜರುಗಿದ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹೇಮಲತಾ ಅಧ್ಯಕ್ಷತೆ ವಹಿಸಿದ್ದ ಈ ಸಂಭೆಯಲ್ಲಿ ಮಂಗಳೂರು ಪುರಭವನ ಮುಂಭಾಗ 4.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಡರ್‌ಪಾಸ್ ಹಾಗೂ 90 ಲಕ್ಷ ರೂ. ವೆಚ್ಚದ ಕ್ಲಾಕ್ ಟವರ್ ನಿರ್ಮಾಣ ಯೋಜನೆಗಳಿಗೆ ಕೂಡ ಸಭೆ ಅನುಮೋದನೆ ಪಡೆಯಲಾಯಿತು.
ನಗರದ ನೆಹರೂ ಮೈದಾನ ಬಳಿಯ ಎ.ಬಿ.ಶೆಟ್ಟಿ ವೃತ್ತದಿಂದ ಕ್ಲಾಕ್ ಟವರ್‌ವರೆಗಿನ ರಸ್ತೆಯನ್ನು ಈಗಾಗಲೇ ಸ್ಮಾರ್ಟ್ ಸಿಟಿ ರಸ್ತೆಯನ್ನಾಗಿ ರೂಪಿಸಲು ಒಪ್ಪಿಗೆ ದೊರಕಿದ್ದು, ಇದಕ್ಕೆ ಪೂರಕವಾಗಿ ಪುರಭವನದ ಮುಂಭಾಗದಿಂದ ರೈಲ್ವೇ ನಿಲ್ದಾಣ ರಸ್ತೆಗೆ ಪ್ರವೇಶ ಪಡೆಯಲು ಅತ್ಯಾಕರ್ಷಕ ಅಂಡರ್‌ಪಾಸ್ ನಿರ್ಮಾಣವಾಗಲಿದೆ.
ಏನಿದು ಕಮಾಂಡ್ ಕಂಟ್ರೋಲ್ ಸೆಂಟರ್ ?
ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಗೆ ಅಳವಡಿಸಿದ ಸಿಸಿ ಟಿ.ವಿ., ಕಸ ಸಂಗ್ರಹಣೆ, ಬೀದಿ ದೀಪ , ನೀರು ಪೂರೈಕೆ ಮುಂತಾದ ವ್ಯವಸ್ಥೆಗಳಿಗೆ ಅಳವಡಿಸುವ ಜಿಪಿಎಸ್ ಸಿಸ್ಟಂನ ವೀಕ್ಷಣೆ ಮತ್ತು ನಿರ್ವಹಣೆ ಈ ಕಮಾಂಡ್ ಕಂಟ್ರೋಲ್ ಸೆಂಟರ್ ಮೂಲಕ ನಡೆಯಲಿದೆ. ಇದೇ ಸಂದರ್ಭದಲ್ಲಿ ಮಂಡಳಿಯ ಪೂರ್ವ ಅನುಮತಿ ಪಡೆಯದೆ ಕ್ಲಾಕ್ ಟವರ್ ಕಾಮಗಾರಿ ಆರಂಭಿಸಿದ ಪಾಲಿಕೆ ಕ್ರಮಕ್ಕೆ ಮಂಡಳಿಯ ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಬಳಿಕ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಆಯುಕ್ತ ಮುಹಮ್ಮದ್ ನಝೀರ್, ನಿರ್ದೇಶಕ ಪ್ರೇಮಾನಂದ ಶೆಟ್ಟಿ ಮತ್ತು ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.







