ಜೂನಿಯರ್ ಆಯ್ಕೆ ಸಮಿತಿ ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ರಾಜೀನಾಮೆ

ಹೊಸದಿಲ್ಲಿ,ಮಾ.2: ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಶುಕ್ರವಾರ ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾರತ ಅಂಡರ್-19 ವಿಶ್ವಕಪ್ ಜಯಿಸಿದ ಕೆಲವೇ ತಿಂಗಳ ಬಳಿಕ ಪ್ರಸಾದ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 30 ತಿಂಗಳಿಂದ ಜೂನಿಯರ್ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದ್ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
‘‘ಪ್ರಸಾದ್ ಐಪಿಎಲ್ ಫ್ರಾಂಚೈಸಿ ಯೊಂದನ್ನು ಸೇರ್ಪಡೆಯಾಗುವ ಸಾಧ್ಯತೆ ಯಿದೆ. ಎರಡು ಲಾಭದಾಯಕ ಹುದ್ದೆಯ ವಿವಾದದಿಂದ ಪಾರಾಗಲು ಈ ನಿರ್ಧಾರಕ್ಕೆ ಬಂದಿರಬಹುದು’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘‘ನಾನು ಅವರ ಮನವೊಲಿಸಲು ಯತ್ನಿಸುತ್ತೇನೆ. ಅವರೊಬ್ಬ ಪ್ರತಿಭಾವಂತ ಕ್ರಿಕೆಟಿಗ. ವಿಶ್ವ ಚಾಂಪಿಯನ್ ಜೂನಿಯರ್ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿರುವ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಹೇಳಿದ್ದಾರೆ.
ಇತ್ತೀಚೆಗೆ ಭಾರತ ಅಂಡರ್-19 ವಿಶ್ವಕಪ್ ಗೆದ್ದ ಸಂದರ್ಭ ಆಯ್ಕೆ ಸಮಿತಿಗೆ ಯಾವುದೇ ಬಹುಮಾನ ನೀಡಲಾಗಿಲ್ಲ.





