ಮಳೆ ತೀವ್ರಗೊಳಿಸುವ ಕಟ್ಟಡಗಳ ಬಗ್ಗೆ ನಿಮಗೆ ಗೊತ್ತೇ?
ಸಾಂದರ್ಭಿಕ ಚಿತ್ರ
ಮುಂಬೈ, ಮಾ.3: ಒಂದೇ ನಗರದ ನೀವು ವಾಸಿಸುವ ಪ್ರದೇಶದಲ್ಲಿ ಭಾರಿ ಮಳೆ ಬಿದ್ದಿರುವ ಸುದ್ದಿಯನ್ನು ಅದೇ ನಗರದ ಬೇರೆ ಪ್ರದೇಶಗಳಲ್ಲಿರುವ ಸ್ನೇಹಿತ ಅಥವಾ ಬಂಧುಗಳ ಜತೆ ಹಂಚಿಕೊಳ್ಳುತ್ತೀರಿ. ಆದರೆ ಆ ಭಾಗದಲ್ಲಿ ಮಳೆಯೇ ಆಗಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ಹೀಗೆ ಒಂದೇ ನಗರದ ವಿವಿಧ ಭಾಗಗಳಲ್ಲಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗಲು ಆ ನಗರದ ಸಂರಚನೆ ಕಾರಣ ಎಂದು ಮುಂಬೈ ಐಐಟಿ ಸಂಶೋಧಕರ ತಂಡ ಅಭಿಪ್ರಾಯಕ್ಕೆ ಬಂದಿದೆ.
ನಗರಗಳ ಕಟ್ಟಡ, ಕೊಳಗೇರಿ, ರಸ್ತೆಗಳು ಮುಂಬೈನ ಕೆಲ ನಿರ್ದಿಷ್ಟ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎನ್ನುವುದು ಭೂವಿಜ್ಞಾನಗಳ ಸಚಿವಾಲಯ ಅನುದಾನಿತ ಸಂಶೋಧನೆಯ ಮುಖ್ಯ ತಿರುಳು.
ಉಪಗ್ರಹ ಮಾಹಿತಿಯನ್ನು ಆಧರಿಸಿ ಈ ಹಿಂದೆ ನಡೆಸಿದ ಅಧ್ಯಯನಗಳಿಂದ ನಗರ ಪ್ರದೇಶಗಳಲ್ಲಿ ಮಳೆ ತೀವ್ರವಾಗುವುದು ತಿಳಿದುಬಂದಿತ್ತು. ಆದರೆ ಇಡೀ ಮುಂಬೈನಲ್ಲಿ ಈ ತೀವ್ರತೆ ಸಮರೂಪದಲ್ಲಿ ಇರಲಿಲ್ಲ. ಆದ್ದರಿಂದ ಆರು ಮಂದಿ ಸಂಶೋಧಕರ ತಂಡ 2014-15ರಲ್ಲಿ ತೀವ್ರ ಮಳೆ ಬಿದ್ದ ಎಂಟು ಪ್ರದೇಶಗಳ ಅಧ್ಯಯನ ನಡೆಸಿ ಈ ನಿರ್ಧಾರಕ್ಕೆ ಬಂದಿದೆ.
ಎಂಟು ಬಹು ಪದರದ ನಗರ ಕ್ಯಾನೊಪಿ ಮಾಡೆಲ್ ಸಿಮ್ಯುಲೇಶನ್, ವಾತಾವರಣದ ಮಾದರಿ ಎಲ್ಲ ಬಗೆಯ ಕಟ್ಟಡಗಳು, ಕೊಳಗೇರಿ ಪ್ರದೇಶ ಹಾಗೂ ರಸ್ತೆಗಳು ಎಂಟು ತೀವ್ರ ಮಳೆಯ ದಿನಗಳಿಗೆ ಕಾರಣವಾಗಿವೆ. ನಗರ ಸಂರಚನೆಯಲ್ಲಿ ನಿರ್ದಿಷ್ಟ ನಿರ್ಮಾಣಗಳಿರುವ ಕೆಲ ನಿರ್ದಿಷ್ಟ ಭಾಗಗಳಲ್ಲಷ್ಟೇ ತೀವ್ರ ಮಳೆಯಾಗಿದೆ ಎನ್ನುವುದನ್ನು ಅಧ್ಯಯನ ದೃಢಪಡಿಸಿದೆ.
ನಗರ ಸಂರಚನೆಯಿಂದಾಗಿ ವಾತಾವರಣದಲ್ಲಿ ಅಸ್ಥಿರತೆ ಉಂಟಾಗಿ, ಇದು ಮಳೆಯ ತೀವ್ರತೆಗೆ ಕಾರಣವಾಗುತ್ತದೆ ಹಾಗೂ ಈ ತೀವ್ರತೆ ನಗರದ ಎಲ್ಲ ಭಾಗಗಳಲ್ಲೂ ಸಮರೂಪದಲ್ಲಿ ಇರುವುದಿಲ್ಲ. ಸಾಲುಸಾಲು ಕಟ್ಟಡಗಳಿದ್ದು, ಮಧ್ಯೆ ರಸ್ತೆ ಹಾದು ಹೋಗುತ್ತಿದ್ದರೆ, ತೇವಾಂಶ ಹೊಂದಿರುವ ಗಾಳಿ ಕೆಳಮಟ್ಟದಲ್ಲೇ ಬೀಸುತ್ತದೆ ಹಾಗೂ ರಸ್ತೆಯ ಭಾಗದಲ್ಲಷ್ಟೇ ಬೀಸುತ್ತದೆ. ಗಾಳಿಯ ಸರಾಗ ಬೀಸುವಿಕೆಗೆ ಕಟ್ಟಡಗಳು ತಡೆಯಾಗುತ್ತವೆ ಹಾಗೂ ಗಾಳಿಯ ಬೀಸುವಿಕೆಗೆ ಅಡ್ಡಿಯಾಗುತ್ತದೆ. ಇದರಿಂದ ವಾತಾವರಣದ ಅಸ್ಥಿರತೆ ಹೆಚ್ಚಿ ನಿರ್ದಿಷ್ಟ ಪ್ರದೇಶದಲ್ಲಿ ಅಧಿಕ ಮಳೆಯಾಗುತ್ತದೆ ಎಂದು ತಂಡದ ಮುಖ್ಯಸ್ಥ ಸುಬಿಮಲ್ ಘೋಷ್ ಅಭಿಪ್ರಾಯಪಟ್ಟಿದ್ದಾರೆ.
ಕಟ್ಟಡಗಳು ಇಲ್ಲದಿದ್ದರೆ ಗಾಳಿ ಸರಾಗವಾಗಿ ಹರಿದು ಇಡೀ ನಗರದಲ್ಲಿ ಮಳೆ ಸಮಪ್ರಮಾಣದಲ್ಲಿ ಬೀಳಲು ಕಾರಣವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.