ಚಿತ್ರರಸಿಕರ ಹೃದಯ ಸಾಮ್ರಾಜ್ಞಿ ಶ್ರೀದೇವಿ

ಸ್ಟಾರ್ ನಟಿಯಾಗಿ ಶ್ರೀದೇವಿ ಎಲ್ಲರಿಗೂ ಕಲಿಸಿದ ಒಂದು ಬಹುಮುಖ್ಯ ಗುಣವೆಂದರೆ ಹೊಂದಾಣಿಕೆ. ಭಾರತೀಯ ಸಿನೆಮಾರಂಗದಲ್ಲಿ ಆಕೆ ಇಂದಿಗೂ ಅತ್ಯಂತ ಯಶಸ್ವಿ ಬಹು ಭಾಷಾ ನಟಿ ಎಂಬ ದಾಖಲೆಯನ್ನು ಉಳಿಸಿಕೊಳ್ಳಲು ಕಾರಣ ಪಾತ್ರಗಳಿಗುಣವಾಗಿ ಆಕೆ ಮಾಡುತ್ತಿದ್ದ ಹೊಂದಾಣಿಕೆ. ಆಕೆಯ ಈ ಗುಣವೇ ಆಕೆ ಎಲ್ಲಿ ಹೋದರೂ ಹೊಳೆಯುವಂತೆ ಮಾಡುತ್ತಿತ್ತು.
ಶ್ರೀದೇವಿಯ ಬಗ್ಗೆ ಹೇಳಬೇಕೆಂದರೆ ಒಂದು ಪುಸ್ತಕವನ್ನೇ ಬರೆಯಬೇಕಾದೀತು. ಪಂಚ ಭಾಷೆಗಳಲ್ಲಿ ನಟಿಸಿರುವ ಶ್ರೀದೇವಿಯ ಪ್ರತಿಭೆ, ನಟನಾ ಕೌಶಲ್ಯ, ಸ್ಫುರದ್ರೂಪ ಮತ್ತು ಸೆಳೆತಕ್ಕೆ ಆಕೆಯೇ ಸರಿಸಾಟಿ. ಚಿತ್ರರಂಗದಲ್ಲಿ ಇಂದಿನ ಯಾವ ನಾಯಕ/ನಾಯಕಿ ಕೂಡಾ ಏರಲಾರದಷ್ಟು ಎತ್ತರಕ್ಕೆ ಏರಿದ ಹೆಗ್ಗಳಿಕೆ ಶ್ರೀದೇವಿಯದ್ದು.
ತೆಲುಗಿನ ಕಾರ್ತಿಕ ದೀಪಂ ಆಗಲಿ ಅಥವಾ ಜಗದೇಕ ವೀರುಡು ಅತಿಲೋಕ ಸುಂದರಿಯಾಗಲಿ ಅಥವಾ ಕ್ಷಣಂಕ್ಷಣಂ ಆಗಲಿ ಶ್ರೀದೇವಿಯ ಹೊರತಾಗಿ ಈ ಸಿನೆಮಾಗಳನ್ನು ಯೋಚಿಸುವುದು ಕೂಡಾ ಸಾಧ್ಯವಿಲ್ಲ. ಇನ್ನು ಹಿಂದಿ ಮತ್ತು ತಮಿಳಿನಲ್ಲಿ ಆಕೆ ನಟಿಸಿರುವ ಸಿನೆಮಾಗಳಲ್ಲಿ ಅತ್ಯುತ್ತಮವಾದು ದನ್ನು ಆರಿಸುವುದು ಯಾವ ಸಿನಿಪಂಡಿತನಿಂದಲೂ ಸಾಧ್ಯವಿಲ್ಲ.
ಶ್ರೀದೇವಿ ಖುದ್ದು ಸಾಂಸ್ಕೃತಿಕ ಸೌಂದರ್ಯದ ಗಣಿಯಾಗಿ ದ್ದರು. ಹಿಂದಿ ಸಿನೆಮಾ ಮಹಿಳೆಯರ ಪಾಲಿಗೆ ಅಷ್ಟೊಂದು ದಯಾಳುವಾಗಿರದ ಕಾಲದಲ್ಲಿ ಒಂದಿಡೀ ಯುಗ ಮತ್ತು ಸಿನೆಮಾಗಳು ನಟಿಯೊಬ್ಬಳಿಂದ ಗುರುತಿಸಲ್ಪಡುತ್ತದೆ ಎಂದಾದರೆ ಶ್ರೀದೇವಿಯ ಅಗಾಧ ನಟನಾ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಬೇರೆ ಸಾಕ್ಷಿಯ ಅಗತ್ಯವಿದೆಯೇ? ಅವರ ಚಿತ್ರ ಜೀವನ ಅದೆಷ್ಟು ಅಗಾಧವಾಗಿತ್ತೆಂದರೆ ಅದನ್ನು ಸಂಪೂರ್ಣವಾಗಿ ಅರಿತಿರುವವರು ಕೇವಲ ಬೆರಳೆಣಿಕೆಯ ಜನರು ಮಾತ್ರ.
ಶ್ರೀದೇವಿಯ ನಿಧನದ ಹಿನ್ನೆಲೆಯಲ್ಲಿ ಬರೆಯಲಾಗುತ್ತಿರುವ ಲೇಖನ ಗಳ ಬಗ್ಗೆಯೂ ಆಕೆಯ ಅಭಿಮಾನಿಗಳು ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ. ಒಂದು ಭಾಷೆಯ ಅಭಿಮಾನಿಗಳು ಶ್ರೀದೇವಿ ನಟಿಸಿರುವ ಇನ್ನೊಂದು ಭಾಷೆಯ ಸಿನೆಮಾಗಳ ಬಗ್ಗೆ ನಿರ್ಲಕ್ಷ ತೋರಿದ್ದಾರೆ ಎಂಬ ಆಪಾದನೆಗಳನ್ನು ಪರಸ್ಪರ ಮಾಡುತ್ತಿದ್ದಾರೆ. ಆಕೆಯ ತಮಿಳು ಅಭಿಮಾನಿಗಳು ಆಕೆಯ ಹಿಂದಿ ಸಿನೆಮಾಗಳನ್ನು ನೋಡಿರಲಿಕ್ಕಿಲ್ಲ ಮತ್ತು ಆಕೆಯ ಹಿಂದಿ ಅಭಿಮಾನಿಗಳಿಗೆ ಆಕೆಯ ತಮಿಳು ಸಿನೆಮಾಗಳ ಬಗ್ಗೆ ಮಾಹಿತಿ ಯಿರದಿರಬಹುದು.
ಶ್ರೀದೇವಿಯ ಅಭಿಮಾನಿಗಳ ಪಾಲಿಗೆ ಹಲವು ಶ್ರೀದೇವಿಗಳಿದ್ದರು. ತಮಿಳುನಾಡಿನಲ್ಲಿ ಮೂಂಡ್ರಾಮ್ ಪಿರೈ ಮತ್ತು ಪದಿನಾರ್ ವಯದಿನಿಲೆಯ ಶ್ರೀದೇವಿಯಿದ್ದರೆ ಮತ್ತೊಂದೆಡೆ ಜಾನಿ, ಪ್ರಿಯಾ ಮತ್ತು ಗುರು ಸಿನೆಮಾದ ಶ್ರೀದೇವಿಯನ್ನು ಇಷ್ಟಪಡುವ ಗುಂಪೂ ಇದೆ. ಇನ್ನು ವಾಳ್ವೆ ಮಾಯಮ್ ಮತ್ತು ವರುಮಯಿನ್ ನಿರಮ್ ಸಿವಪ್ಪು ಮಧ್ಯೆ ಆರಿಸುವುದಾದರೂ ಯಾವುದನ್ನು. ಸಿಗಪ್ಪು ರೋಜಾಕ್ಕಳ್ ಮತ್ತು ಮೀಂಡುಮ್ ಕೋಕಿಲಾ ಕೂಡಾ ಶ್ರೀದೇವಿಯ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿದ ಸಿನೆಮಾಗಳಾಗಿವೆ. ಆದರೆ ಹಾಗೆಯೇ ಉತ್ತರಕ್ಕೆ ಸಾಗಿದಾಗ ಆಯ್ಕೆ ಮತ್ತಷ್ಟು ಕಷ್ಟವಾಗುತ್ತದೆ. ಮಿ. ಇಂಡಿಯಾವೋ ಅಥವಾ ಚಾಲ್‌ಬಾಝ್? ಲಮ್ಹೆ ಅಥವಾ ಚಾಂದಿನಿ? ಯಾವುದನ್ನು ಆರಿಸುವುದು. ರೂಪ್ ಕಿ ರಾಣಿ ಚೋರೋಂಕಾ ರಾಜಾ ಚಿತ್ರವನ್ನು ಇಷ್ಟಪಟ್ಟವರೂ ಇದ್ದಾರೆ.
ಶ್ರೀದೇವಿ ಕುರಿತು ಪುಸ್ತಕ ಬರೆದರೆ ಅದಕ್ಕೆ ಮುನ್ನೂರು ಶ್ರೀದೇವಿಗಳು ಎಂದೇ ಹೆಸರಿಡ ಬೇಕಾಗುತ್ತದೆ. ಆಗಲೂ ಆಕೆಯ ವಿವಿಧ ಭಾಷೆಯ ಅಭಿಮಾನಿಗಳು ಪರಸ್ಪರ ಜಗಳವಾಡುತ್ತಲೇ ಇರುತ್ತಾರೆ. ಸ್ಟಾರ್ ನಟಿಯಾಗಿ ಶ್ರೀದೇವಿ ಎಲ್ಲರಿಗೂ ಕಲಿಸಿದ ಒಂದು ಬಹುಮುಖ್ಯ ಗುಣವೆಂದರೆ ಹೊಂದಾಣಿಕೆ. ಭಾರತೀಯ ಸಿನೆಮಾರಂಗದಲ್ಲಿ ಆಕೆ ಇಂದಿಗೂ ಅತ್ಯಂತ ಯಶಸ್ವಿ ಬಹು ಭಾಷಾ ನಟಿ ಎಂಬ ದಾಖಲೆಯನ್ನು ಉಳಿಸಿಕೊಳ್ಳಲು ಕಾರಣ ಪಾತ್ರಗಳಿಗುಣವಾಗಿ ಆಕೆ ಮಾಡುತ್ತಿದ್ದ ಹೊಂದಾಣಿಕೆ. ಆಕೆಯ ಈ ಗುಣವೇ ಆಕೆ ಎಲ್ಲಿ ಹೋದರೂ ಹೊಳೆಯುವಂತೆ ಮಾಡುತ್ತಿತ್ತು. ಭಾಷೆಗಳು ಆಕೆಗೆ ತಡೆಯಾಗಲಿಲ್ಲ, ಸಾಂಸ್ಕೃತಿಕ ಪರಿಸರ ಸವಾಲಾಗಲಿಲ್ಲ, ಸಿನೆಮಾಗಳ ಶೈಲಿ ಮತ್ತು ಗುಣಮಟ್ಟ ಗಣನೆಗೆ ಬರಲಿಲ್ಲ. ರಜನಿಕಾಂತ್ ಮತ್ತು ಕಮಲ್ ಹಾಸನ್ ಚಿತ್ರರಂಗವನ್ನು ಆಳಲು ಸಿದ್ಧಗೊಳ್ಳುತ್ತಿದ್ದ ಕಾಲದಲ್ಲಿ ಶ್ರೀದೇವಿ ಸಿನಿರಸಿಕರ ಹೃದಯಕ್ಕೆ ಕನ್ನ ಹಾಕಿದರು. ಅದೇ ಸಮಯದಲ್ಲಿ ಮಹೇಂದ್ರನ್, ಬಾಲು ಮಹೇಂದ್ರ, ಕೆ. ಬಾಲಚಂದರ್ ಹಾಗೂ ಭಾರತಿರಾಜ ಮುಂತಾದವರೂ ತಮಿಳು ಸಿನೆಮಾದಲ್ಲಿ ಬೇರೂರಲು ಅಣಿಯಾಗುತ್ತಿದ್ದರು. ಹಾಗಾಗಿ ಶ್ರೀದೇವಿ ಹಲವು ಅತ್ಯುತ್ತಮ ಕತೆಗಳನ್ನು ಹೊಂದಿರುವ ಸಿನೆಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಇದರಿಂದ ಆಕೆಯ ಚಿತ್ರಜೀವನಕ್ಕೆ ಗಟ್ಟಿ ಬುನಾದಿ ದೊರಕಿತು.
ಆಕೆ ಉನ್ನತಿಯ ಶಿಖರವನ್ನೇರುವುದು ಶತಃಸಿದ್ಧವಾಗಿತ್ತು. ಆದರೆ ಅದಕ್ಕೆ ಆಕೆ ಕೆಲವು ಸವಾಲುಗಳನ್ನೂ ಎದುರಿಸಬೇಕಾಗಿತ್ತು. ಶ್ರೀದೇವಿ ಚಿತ್ರರಂಗದ ಅತ್ಯಂತ ಪ್ರಬಲ ಯುಗದಿಂದ ಬದಲಾವಣೆಯ ಹಾದಿಯಲ್ಲಿರುವ ಚಿತ್ರರಂಗದ ಯುಗಕ್ಕೆ ತಲುಪಿದರು. ಬೌದ್ಧಿಕ ದಿವಾಳಿತನದ ಅವಧಿ ಯಲ್ಲಿ ಸಿನೆಮಾರಂಗವು ಬಲಿಷ್ಠ ಪ್ಯಾರಲಲ್ ಸಿನೆಮಾ (ಕಲಾತ್ಮಕ ಚಿತ್ರಗಳು) ಮತ್ತು ಮುಖ್ಯ ವಾಹಿನಿಯ ಸಿನೆಮಾಗಳು ಎಂದು ಎರಡು ಭಾಗವಾಯಿತು. ಗಂಭೀರ ಸಿನೆಮಾಗಳಲ್ಲಿ ನಟಿಸಿದ್ದ ಶ್ರೀದೇವಿ ಮುಖ್ಯವಾಹಿನಿ ಸಿನೆಮಾದತ್ತ ಮುಖ ಮಾಡಿದಾಗ ಹಲವರು ಆಕೆಯ ನಿರ್ಧಾರಕ್ಕೆ ನಕ್ಕರು. ಮೂಂಡ್ರಾಮ್ ಪಿರೈಯಂಥ ಸಿನೆಮಾದಲ್ಲಿ ನಟಿಸಿ ಈಗ ಹಿಮ್ಮತ್‌ವಾಲಾದಂಥ ಸಿನೆಮಾವನ್ನು ಒಪ್ಪಲು ಹೇಗೆ ಸಾಧ್ಯ ಎಂಬುವುದು ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಶ್ರೀದೇವಿ ಹಿಂಜರಿಯಲಿಲ್ಲ. ಅಂತಿಮವಾಗಿ ಆಕೆಯೊಳಗಿದ್ದ ಹಾಸ್ಯ ಪ್ರತಿಭೆಯನ್ನು ಅನ್ವೇಷಿಸಲು ಈ ಚಿತ್ರಗಳು ಆಕೆಗೆ ನೆರವಾದವು. ನಾ ಜಾನೆ ಕಹಾ ಸೆ ಆಯಿ ಹೇ, ನಾ ಜಾನೆ ಕಹಾ ಕೊ ಜಾಯೆಗಿ ಹಾಡು ಶ್ರೀದೇವಿ ಪಾಲಿಗೆ ಅಕ್ಷರಶಃ ನಿಜವಾಗಿದೆ. ಇಂದಿನ ಮಸಾಲಾ ಸಿನೆಮಾಗಳಲ್ಲಿ ಕಾಣಿಸುವ ಗ್ಲಾಮರ್ ಡಾಲ್ ಬಬ್ಲಿ ಹುಡುಗಿ ಪಾತ್ರದ ಮೂಲಜನಕ ಶ್ರೀದೇವಿಯಾಗಿದ್ದಾರೆ. ನಾಯಕ ಪ್ರಧಾನವಾಗಿರುವ ಈ ಸಿನೆಮಾಗಳಲ್ಲೂ ಶ್ರೀದೇವಿ ಸಿಕ್ಕ ಪಾತ್ರಗಳಲ್ಲಿ ಮಿಂಚುವ ಮೂಲಕ ಎಲ್ಲರ ಮನಗೆದ್ದಾಕೆ. ಸಾವಿರಾರು ನಟಿಯರು ಶ್ರೀದೇವಿಯ ನಟನೆಯನ್ನು ನಕಲು ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇದರಲ್ಲಿ ಸಫಲರಾದವರು ಕೇವಲ ಬೆರಳೆಣಿಕೆಯಷ್ಟು ಮಾತ್ರ. ವಂಶಪ್ರಭುತ್ವ ಮತ್ತು ಪುರುಷ ಪ್ರಧಾನವಾಗಿರುವ ಸಿನೆಮಾರಂಗದಲ್ಲಿ ಶ್ರೀದೇವಿ ಕ್ರಮಿಸಿದ ಹಾದಿಯನ್ನು ಕ್ರಮಿಸುವುದು ಸುಲಭದ ಮಾತಲ್ಲ. ಆಕೆಯೊಂದಿಗೆ ಯಶಸ್ಸಿನ ಏಣಿಯನ್ನು ಏರಿದ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಈ ಇಬ್ಬರು ಸೂಪರ್‌ಸ್ಟಾರ್‌ಗಳಿಂದಲೂ ಇತರ ಭಾಷೆಗಳಲ್ಲಿ ಶ್ರೀದೇವಿ ಗಳಿಸಿದಷ್ಟು ಖ್ಯಾತಿಯನ್ನು ಗಳಿಸಲು ಸಾಧ್ಯವಾಗಿಲ್ಲ. ಹದಿನೈದು ವರ್ಷಗಳ ವಿರಾಮದ ನಂತರ ಇಂಗ್ಲಿಷ್ ವಿಂಗ್ಲಿಷ್ ಸಿನೆಮಾದಲ್ಲಿ ಮತ್ತೆ ಬಣ್ಣ ಹಚ್ಚಿದ ಶ್ರೀದೇವಿ ಮತ್ತೊಮ್ಮೆ ತಾನ್ಯಾಕೆ ದಶಕಗಳ ಕಾಲ ಇಡೀ ಭಾರತೀಯ ಚಿತ್ರರಂಗದಲ್ಲಿ ಅನಭಿಷಿಕ್ತ ರಾಣಿಯಾಗಿ ಮೆರೆದಿದ್ದೆ ಎಂಬುದಕ್ಕೆ ಸಬೂತು ನೀಡಿದ್ದರು. ಒಂದೂವರೆ ದಶಕದ ಅಂತರದ ನಂತರವೂ ಆಕೆಯೊಳಗಿನ ನಟಿ ಇನ್ನೂ ಚುರುಕಾಗಿದ್ದಳು. ಶ್ರೀದೇವಿ ಬದುಕಿದ್ದಿದ್ದರೆ ಬಹುಶಃ ಆಕೆಯ ಇನ್ನಷ್ಟು ಸಿನೆಮಾಗಳನ್ನು ನಾವು ಆಸ್ವಾದಿಸಬಹುದಿತ್ತೇನೋ. ಆದರೆ ಕಾಲವು ಅದಕ್ಕೆ ಅನುಮತಿ ನೀಡಲಿಲ್ಲ. ತನ್ನ ಹಿಂದೆ ಅಪಾರ ಅಭಿಮಾನಿ ಬಳಗ ಮತ್ತು ನಟನೆಯ ಒಂದು ಗ್ರಂಥಾಲಯವನ್ನೇ ಬಿಟ್ಟು ಹೋಗಿದ್ದಾರೆ ಶ್ರೀದೇವಿ. ಆ ಗ್ರಂಥಾಲಯವನ್ನು ಜೋಪಾನ ಮಾಡುವ ಜವಾಬ್ದಾರಿ ಚಿತ್ರರಂಗದ ಮತ್ತು ಸಿನಿರಸಿಕರ ಮೇಲಿದೆ
ಕೃಪೆ: ಎಕ್ಸ್‌ಪ್ರೆಸ್ ನ್ಯೂಸ್







