ಸೈನಿಕರ ಪತ್ನಿಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪರಿಚಾರಕ್ ಅಮಾನತು ರದ್ದು
ಬಿಜೆಪಿ ವಿರುದ್ಧ ಶಿವಸೇನೆ ಆಕ್ರೋಶ
ಪ್ರಶಾಂತ್ ಪರಿಚಾರಕ್
ಮುಂಬೈ, ಮಾ.3: ಕಳೆದ ವರ್ಷ ಸೈನಿಕರ ಪತ್ನಿಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಪ್ರಶಾಂತ್ ಪರಿಚಾರಕ್ರ ಅಮಾನತು ನಿರ್ಧಾರವನ್ನು ವಾಪಸ್ ಪಡೆದ ಬಿಜೆಪಿಯ ನಡೆಗೆ ಮಿತ್ರಪಕ್ಷ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಸೈನಿಕರು ಮತ್ತು ಅವರ ಕುಟುಂಬದ ಮೇಲೆ ಸರಕಾರವು ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಎಂದು ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಕುಹಕವಾಡಿದ್ದಾರೆ.
ಸದ್ಯದ ಬಿಜೆಪಿ ಆಡಳಿತದಲ್ಲಿ ‘ಜೈ ಜವಾನ್ ಜೈ ಕಿಸಾನ್’ ಘೋಷಣೆಗೆ ಅವಮಾನ ಮಾಡಲಾಗುತ್ತಿದೆ. ಅವರು ಪ್ರಶಾಂತ್ ಪರಿಚಾರಕ್ಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದ್ದಾರೆ. ಪರಿಚಾರಕ್ರನ್ನು ಅಮಾನತು ಮಾಡಬೇಕೆಂದು ಎಲ್ಲ ಶಾಸಕರು ಮಾಡಿದ್ದ ಆಗ್ರಹದಂತೆ ಈಗ ಅವರ ಅಮಾನತನ್ನು ವಾಪಸ್ ಪಡೆಯುವ ನಿರ್ಧಾರವನ್ನೂ ಒಕ್ಕೊರಲಿನಿಂದ ವಿರೋಧಿಸಬೇಕಿತ್ತು ಎಂದು ಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ. ಪರಿಚಾರಕ್ರನ್ನು ಕಳೆದ ವರ್ಷ ಮಾರ್ಚ್ 9ರಂದು ಅಮಾನತುಗೊಳಿಸಲಾಗಿತ್ತು. ಆದರೆ ಈ ವಾರದ ಆರಂಭದಲ್ಲಿ ಮಹಾರಾಷ್ಟ್ರ ಸರಕಾರ ಅವರ ಅಮಾನತನ್ನು ವಾಪಸ್ ಪಡೆದುಕೊಂಡಿತ್ತು.
ಸೈನಿಕರನ್ನು ಅವಮಾನಿಸುವುದೆಂದರೆ ಶಿವಾಜಿ ಮಹಾರಾಜರನ್ನು ಅವಮಾನಿಸಿದಂತೆ. ಆದರೆ ಅಧಿಕಾರದ ನಶೆಯಲ್ಲಿರುವ ಬಿಜೆಪಿಗೆ ಇದು ಅರ್ಥವಾಗುವುದಿಲ್ಲ. ಗಡಿಯಲ್ಲಿ ಸೈನಿಕರು ಶತ್ರುಗಳ ಜೊತೆ ಹೋರಾಡುತ್ತಾ ಸಾವನ್ನಪ್ಪುತ್ತಿದ್ದರೆ ಇತ್ತ ಸರಕಾರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುತ್ತೇನೆ ಎಂದು ಕೇವಲ ಬಾಯಲ್ಲಿ ಹೇಳುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ಸೇನೆ ಆರೋಪಿಸಿದೆ. ಪೊಲೀಸ್ ಪೇದೆ ರಮೇಶ್ ಶಿಂಡೆ ಪ್ರಧಾನಿ ಮೋದಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬರೆದ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ಈಗಲೂ ಅವರು ಅಮಾನತಿನಲ್ಲಿದ್ದಾರೆ. ಆದರೆ ಸೈನಿಕರ ಕುಟುಂಬಗಳನ್ನು ಅವಮಾನ ಮಾಡಿರುವ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಇದು ನಿಜವಾಗಿಯೂ ನಾಚಿಕೆಗೇಡು. ಇಂಥವರಿಗೆ ಶಿವಾಜಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸೇನೆ ಪ್ರತಿಕ್ರಿಯಿಸಿದೆ.