ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿಯಾಗಲಿ: ವಿಜಯ ಕುಮಾರ್
ಉಡುಪಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಉಡುಪಿ, ಮಾ.4: ಸಂವಿಧಾನದಲ್ಲಿ ತಿದ್ದುಪಡಿ ತಂದು 100 ಕೋಟಿ ಹಿಂದು ಗಳಿರುವ ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ ವಿಜಯ ಕುಮಾರ್ ಹೇಳಿದ್ದಾರೆ.
ಉಡುಪಿ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ರವಿವಾರ ಉಡುಪಿಯ ಅನುಗ್ರಹ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶ್ವದಲ್ಲಿ ಕ್ರಿಶ್ಚಿಯನ್ನರಿಗೆ 157, ಮುಸ್ಲಿಮರಿಗೆ 52, ಬೌದ್ಧರಿಗೆ 12, ಕೆಲವೇ ಕೆಲವು ಜನಸಂಖ್ಯೆಯ ಇರುವ ಯಹೂದಿಗಳಿಗೂ ಒಂದು ದೇಶ ಇದೆ. ಆದರೆ 100 ಕೋಟಿ ಜನಸಂಖ್ಯೆ ಇರುವ ಹಿಂದೂಗಳಿಗೆ ಪ್ರತ್ಯೇಕ ಒಂದೇ ಒಂದು ದೇಶ ಇಲ್ಲ. ನಾವು ಇರುವ ಭಾರತವು ಜಾತ್ಯತೀತ ರಾಷ್ಟ್ರ.ಆದರೆ ಇಲ್ಲಿ ಹಿಂದುತ್ವದ ಬಗ್ಗೆ ಮಾತನಾಡುವಂತಿಲ್ಲ. ಮಾತನಾಡಿದರೆ ಕೋಮುವಾದದ ಪಟ್ಟ ಕಟ್ಟಿ ಕೇಸು ಹಾಕಲಾಗುತ್ತದೆ. ಅದಕ್ಕಾಗಿ ನಾವು ಈ ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ ಎಂದರು.
1976ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ 42ನೆ ತಿದ್ದುಪಡಿ ತಂದು ಸಂವಿಧಾನದಲ್ಲಿ ಭಾರತ ಹಿಂದು ರಾಷ್ಟ್ರ ಎಂಬುದರ ಬದಲು ಜಾತ್ಯತೀತ ರಾಷ್ಟ್ರ ಎಂಬ ಶಬ್ದವನ್ನು ಸೇರಿಸಿದರು. ಅದರ ನಂತರ 103 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಯಿತು. ಇದೀಗ ನಾವು 104ನೆ ಬಾರಿ ಸಂವಿಧಾನದಲ್ಲಿ ತಿದ್ದುಪಡಿ ತಂದು ಭಾರತವನ್ನು 100 ಕೋಟಿ ಹಿಂದುಗಳಿಗೆ ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ. ಸಂವಿಧಾನಾತ್ಮಕವಾಗಿ ಬೇಡಿಕೆ ಮುಂದಿಟ್ಟು ಕಾನೂನು ರೀತಿಯ ಹೋರಾಟ ಮಾಡಿದರೆ ಭಾರತ ಹಿಂದು ರಾಷ್ಟ್ರ ಆಗಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಇಂದು ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ಅತ್ಯಾಚಾರ, ಅನಾಚಾರ, ಮತಾಂತರ, ಲವ್ ಜಿಹಾದ್, ದೇವಸ್ಥಾನಗಳ ಸರಕಾರೀಕರಣದ ಹೆಸರಿನಲ್ಲಿ ಹಣ ಲೂಟಿ, ಸಾಧು ಸಂತರ ಮೇಲೆ ಕೇಸು, ಹಿಂದುಗಳ ಮೇಲಿನ ದಬ್ಬಾಳಿಕೆ ವಿರುದ್ಧ ಶಿವಾಜಿ ಮಹಾರಾಜರ ಆದರ್ಶದೊಂದಿಗೆ ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ನಾವು ಇಲ್ಲಿ ಬದುಕಿ ಉಳಿಯುವುದು ಕಷ್ಟವಾಗುತ್ತದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಸಿ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮರಾಠ ಧ್ವನಿ ಪತ್ರಿಕೆಯ ಸಂಪಾದಕ ವಿ.ಕೆ.ಪವರ್, ನಗರಸಭೆ ಸದಸ್ಯ ದಿನಕರ ಶೆಟ್ಟಿ ಹೆರ್ಗ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಫೆಡರೇಶನ್‌ನ ನಿರ್ದೇಶಕ ಮಂಜುನಾಥ್ ಎಸ್.ಕೆ., ತಾಪಂ ಸದಸ್ಯ ಸುಭಾಷ್ ನಾಯ್ಕಿ, ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ಆರ್.ಸಿ. ನಾಯ್ಕಿ, ಉಡುಪಿ ಮರಾಠ ಸ್ವಾಭಿಮಾನಿ ಜಾಗೃತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ನಾಯ್ಕಾ ಉಪಸ್ಥಿತರಿದ್ದರು.







