ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸುವರ್ಣ ಮಹೋತ್ಸವದ ಸಂಭ್ರಮ
ರಾಜ್ಯದ ಅಭಿವೃದ್ಧಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೊಡುಗೆ ಅಪಾರ: ಸಿದ್ದರಾಮಯ್ಯ

ಬೆಂಗಳೂರು, ಮಾ.4: ದೇಶದಲ್ಲಿಯೇ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಇಂದು ಮೊದಲ ಸ್ಥಾನ ಅಲಂಕರಿಸಿರುವುದರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೊಡುಗೆ ಅಪಾರ, ರಾಜ್ಯದಲ್ಲಿ ಇಲ್ಲಿಯವರೆಗೆ 165 ಕೈಗಾರಿಕಾ ಪ್ರದೇಶಗಳನ್ನು ಈ ಮಂಡಳಿ ಅಭಿವೃದ್ಧಿ ಪಡಿಸಿ ಕೈಗಾರಿಕೆಗಳಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 50 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂದು ಖಾಸಗಿ ಹೊಟೇಲ್‍ನಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮತ್ತು ಪ್ರಧಾನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಉದ್ಯೋಗ ಸೃಷ್ಟಿ ಅತಿ ಮುಖ್ಯವಾದದ್ದು, ಉದ್ಯೋಗದಿಂದ ಮಾತ್ರ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಬೆಳೆಸಲು ಸಾಧ್ಯ. ಹಾಗಾಗಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಸರ್ವರೀತಿಯ ಸವಲತ್ತುಗಳನ್ನು ನೀಡಲು ಉತ್ಸುಕವಾಗಿದೆ ಎಂದರು.
ಕೈಗಾರಿಕೆಗಳ ಪ್ರೋತ್ಸಾಹಕ್ಕಾಗಿ ರಾಜ್ಯ ಹಲವು ನೀತಿಗಳನ್ನು ಜಾರಿಗೆ ತರುವುದರ ಮುಖಾಂತರ ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಗುರುತಿಸಿಕೊಂಡಿದೆ, ಕೈಗಾರಿಕೆಗಳ ಸ್ಥಾಪನೆಗೆ ಒಳ್ಳೆಯ ವಾತಾವರಣ ಸೃಷ್ಟಿಸಿರುವುದರಿಂದ ಅತಿ ಹೆಚ್ಚು ಬಂಡವಾಳ ರಾಜ್ಯದ ಕಡೆ ಹರಿದು ಬರುತ್ತಿದೆ. ಹೆಚ್ಚುತ್ತಿರುವ ಕೈಗಾರಿಕೆಗಳಿಗನುಗುಣವಾಗಿ ಉತ್ತಮ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದ ಅಗತ್ಯತೆಯನ್ನು ಪೂರೈಸಲು ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಹೊಸದಾಗಿ ತೆರೆಯಲಾಗಿದ್ದು ಈ ಮುಖಾಂತರ ಈ ವರ್ಷ 5 ಲಕ್ಷ ಜನರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡುವ ಗುರಿ ಹಾಕಿಕೊಳ್ಳಲಾಗಿದೆ.
ದಲಿತರಿಗೆ, ಮಹಿಳೆಯರಿಗೆ ಹಾಗೂ ಹಿಂದುಳಿದವರಿಗೆ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ನೆರವಾಗುವಂತೆ ರಾಜ್ಯದಲ್ಲಿ ಹೊಸ ನೀತಿಗಳನ್ನು ಜಾರಿ ಮಾಡಲಾಗಿದೆ. ಮಹಿಳೆಯರಿಗಾಗಿ ರಾಜ್ಯದಲ್ಲಿ ಐದು ಮಹಿಳಾ ಕೈಗಾರಿಕಾ ಪಾರ್ಕ್‍ಗಳನ್ನು ಸ್ಥಾಪಿಸಲಾಗಿದೆ.
ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಒಂದು ಸ್ವಂತ ಕಟ್ಟಡವಿರಲಿಲ್ಲ, ಹಾಗಾಗಿ ಇಂದು ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಇನ್‍ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮಾತನಾಡಿ, ತಾವು ಕಳೆದ 2-3 ದಶಕಗಳ ಹಿಂದೆ ಸಂಸ್ಥೆ ಪ್ರಾರಂಭಿಸುವುದಕ್ಕೆ ಹಣ ಮತ್ತು ಜಾಗ ನೀಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಹಾಯವನ್ನು ಸ್ಮರಿಸಿದರು.
ಅಂದು ಚಿಕ್ಕದಾಗಿ ಸಾಲದಲ್ಲಿ ಪ್ರಾರಂಭವಾದ ಇನ್‍ಫೋಸಿಸ್ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವುದರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕೊಡುಗೆ ಅಪಾರ, ಇಂದು ಇನ್‍ಫೋಸಿಸ್ ಸಂಸ್ಥೆ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 800 ಎಕ್ಕರೆ ಜಾಗವನ್ನು ಸರ್ಕಾರದಿಂದ ಪಡೆದಿದೆ.
ಇಂದು ದೇಶದಲ್ಲಿಯೇ ಅತಿಹೆಚ್ಚು ಸಾಫ್ಟ್‍ವೇರ್ ರಫ್ತು ಮಾಡುವ ಸಂಸ್ಥೆ ಎಂಬ ಮನ್ನಣೆ ಪಡೆದಿರುವ ಇನ್‍ಫೋಸಿಸ್ ಕರ್ನಾಟಕ ನೆಲದ ಸಂಸ್ಥೆಯಾಗಿದೆ. ಸಂಸ್ಥೆ ರಾಜ್ಯದಲ್ಲಿ ಒಟ್ಟು 10 ಸಾವಿರ ಕೋಟಿ ರೂ. ಬಂಡವಾಳ ಹೂಡಿದ್ದು, ಕಳೆದ ಸಾಲಿನಲ್ಲಿ ಒಟ್ಟು 20 ಸಾವಿರ ಕೋಟಿ ರಫ್ತು ವ್ಯವಹಾರ ನಡೆಸಿದೆ ಎಂದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಡೆ, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಂಡವಾಳ ಆಕರ್ಷಣೆಗೆ ಸಂಶೋಧನೆ ಅತಿ ಮುಖ್ಯವಾದದ್ದು, ಇದರಿಂದ ಯಾವ್ಯಾವ ಕೈಗಾರಿಕೆಗಳನ್ನು ಎಲ್ಲೆಲ್ಲಿ ಸ್ಥಾಪಿಸಬಹುದು, ಎಷ್ಟು ಜನರಿಗೆ ಉದ್ಯೋಗ ಸೃಷ್ಟಿಸಬಹುದು ಎಂಬ ಮಾಹಿತಿ ಸ್ಪಷ್ಟವಾಗಿರಬೇಕು ಎಂದರು.
ಮೊದಲು ಅಗತ್ಯವಿರುವ ಬೇಡಿಕೆಯ ಅನುಗುಣವಾಗಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಿ, ಅನಾವಶ್ಯಕವಾಗಿ ಭೂಮಿ ವಶಪಡಿಸಿಕೊಂಡಿರುವ ಅಪವಾದದಿಂದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊರಬರಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು ನಮ್ಮ ನಿರ್ಣಯಗಳಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮೊದಲ ಪೀಳಿಗೆಯ ಕೈಗಾರಿಕೋದ್ಯಮಿಗಳಿಗೆ ಹಾಗೂ ಯುವ ಸ್ಟಾರ್ಟ್‍ಪ್‍ಗಳಿಗೆ ಹೆಚ್ಚಿನ ಒತ್ತನ್ನು ಹಾಗೂ ಸೌಲಭ್ಯಗಳನ್ನು ನೀಡುವಲ್ಲಿ ಅವಶ್ಯವಿರುವ ಹೊಸ ಯೋಜನೆ ಮತ್ತು ನೀತಿಗಳನ್ನು ಜಾರಿಗೊಳಿಸಲು ಇನ್ನೂ ಹೆಚ್ಚಿದ ಅಧ್ಯಯನ ಕೈಗೊಳ್ಳಲು ಅಧಿಕಾರಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಳೆದ 50 ವರ್ಷಗಳ ಬೆಳೆದು ಬಂದ ಹಾದಿ ಹಾಗೂ ಸಾಧನೆ ಕರಿತು ತಯಾರಿಸಿರುವ 30 ನಿಮಿಷಗಳ ಕಾಲದ ಕಿರುಚಿತ್ರವನ್ನು ಸಹ ಬಿಡುಗಡೆ ಮಾಡಲಾಯಿತು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಬೆಳವಣಿಗೆಯಲ್ಲಿ ಕೊಡುಗೆ ನೀಡಿದ ಮಂಡಳಿಯ ನಿವೃತ್ತ ಮತ್ತು ಸದ್ಯ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಜಯರಾಮ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ದರ್ಪಣ್ ಜೈನ್ ಸೇರಿದಂತೆ ಕೆಸ್‍ಪಿಸಿಬಿ, ಕೆಎಸ್‍ಎಸ್‍ಐಡಿಸಿ, ಕೆಎಸ್‍ಎಫ್‍ಸಿಯ ಮುಖ್ಯಸ್ಥರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







