ಕಣ್ಣೂರು ವಿವಿ ಕಲೋತ್ಸವ: ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಮತ್ತು ನಾಟಕ ತಂಡಕ್ಕೆ ಪ್ರಶಸ್ತಿ

ಕಾಸರಗೋಡು, ಮಾ.4: ಕಣ್ಣೂರಿನ ಎಸ್‌ಎನ್ ಕಾಲೇಜಿನಲ್ಲಿ ನಡೆದ 2017-18ನೇ ಶೈಕ್ಷಣಿಕ ವರ್ಷದ ಕಣ್ಣೂರು ವಿಶ್ವವಿದ್ಯಾನಿಲಯ ಮಟ್ಟದ ಕಲೋತ್ಸವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಮತ್ತು ನಾಟಕ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮಾತ್ರವಲ್ಲದೆ ದ್ವಿತೀಯ ಸ್ನಾತಕೋತ್ತರ ಪದವಿ ಕನ್ನಡದ ವಿದ್ಯಾರ್ಥಿನಿ ಸುಶ್ಮಿತಾ ಆರ್. ಉತ್ತಮ ನಟಿ ಸ್ಥಾನಕ್ಕೆ ಅರ್ಹರಾಗಿದ್ದಾರೆ.
ಯಕ್ಷಗಾನ: ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ತಂಡವು 'ಎ' ಶ್ರೇಣಿಯೊಂದಿಗೆ ಪ್ರಥಮ ಬಹುಮಾನ ಗಳಿಸಿದ್ದು, ‘ವೀರತರಣಿಸೇನ’ ಎಂಬ ಕಥಾಭಾಗವನ್ನು ಪ್ರದರ್ಶಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಪುಣಿಂಚತ್ತಾಯ ಪೆರ್ಲ, ಚೆಂಡೆಯಲ್ಲಿ ಶ್ರೀಧರ ಎಡಮಲೆ, ಮದ್ದಳೆಯಲ್ಲಿ ಶ್ರೀಸ್ಕಂದ ದಿವಾಣ ಸಹಕರಿಸಿದರು. ವಿದ್ಯಾರ್ಥಿಗಳಾದ ನಿತಿನ್‌ಕುಮಾರ್ (ಶ್ರೀರಾಮ), ವಸಂತಕುಮಾರ್ (ಲಕ್ಷ್ಮಣ), ದಿತಿ ಜಿ.ಬಿ.(ಹನುಮಂತ), ಪವಿತ್ರಾ ಎಡನೀರು(ವಿಭೀಷಣ), ಶ್ರೀಹರಿ ಕೆ ಎಂ.(ತರಣಿಸೇನ), ಶ್ರೀವತ್ಸ (ದೂತ), ಸುನಿತಾ ಬಿ. (ಸರಮೆ), ವೃಂದಾ ಬಿ.ಜಿ. (ರಾವಣ), ನಿವೇದಿತಾ ಎಂ.(ಸುಪಾರ್ಶ್ವಕ) ಪಾತ್ರಗಳಿಗೆ ಜೀವತುಂಬಿದರು.
ನಾಟ್ಯಗುರು ದಿವಾಣ ಶಿವಶಂಕರ ಭಟ್ ಮಾರ್ಗದರ್ಶನದಲ್ಲಿ, ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆಯವರ ಸಹಕಾರದೊಂದಿಗೆ ತಂಡ ಪ್ರದರ್ಶನ ನೀಡಿತ್ತು. ಉಪನ್ಯಾಸಕಿ ಬಬಿತಾ ಎ., ಕಲಾವಿದೆ ರೋಹಿಣಿ ದಿವಾಣ ಹಾಗೂ ಹಳೆ ವಿದ್ಯಾರ್ಥಿಗಳಾದ ಪ್ರಶಾಂತ ಹೊಳ್ಳ ಎನ್., ಕೀರ್ತನ್‌ಕುಮಾರ್ ಸಿ. ಎಚ್., ಅಜಿತ್ ಶೆಟ್ಟಿ ಸಹಕರಿಸಿದರು.
ನಾಟಕ: ಸದಾಶಿವ ಪೊಯ್ಯೆ ನಿರ್ದೆಶನದಲ್ಲಿ ಪ್ರದರ್ಶನಗೊಂಡ ಕಾಸರಗೋಡು ಸರಕಾರಿ ಕಾಲೇಜಿನ ‘ಬಾರ್ಬರಿಕಾ’ ನಾಟಕ 'ಎ' ಶ್ರೇಣಿಯೊಂದಿಗೆ ಪ್ರಥಮ ಬಹುಮಾನ ಗಳಿಸಿದೆ. ಬಾಲಕೃಷ್ಣ ಬೆಳಿಂಜ(ಋಷಿ, ಘಟೋತ್ಕಜ ಮತ್ತುಕಾಡು ಮನುಷ್ಯ), ಅಭಿಷೇಕ್ ಎ.ಬಿ., (ಬಾರ್ಬರಿಕಾ), ಸುಜಿತ್‌ಕುಮಾರ್ ಸಿ.ಎಚ್. (ಗೂರ ಮತ್ತು ಕಾಡುಮನುಷ್ಯ), ಸುಶ್ಮಿತಾ ಆರ್. (ಹಿಡಿಂಬೆ), ರಾಜಾರಾಮ ಪಿ.(ಭೀಮ ಮತ್ತು ಪ್ರೇತ), ಅನುರಾಧಾ ಕೆ. (ಅರ್ಜುನ ಮತ್ತು ಕಾಡುಮನುಷ್ಯ) ಕಾವ್ಯಾ ಪಿ. ಎಂ.(ರೂಪಾಕ್ಷಿ, ಬಾರ್ಬರಿಕಾ ಪ್ರೇಯಸಿ), ನಿಶ್ಮಿತಾ ಕುಮಾರಿ ರೈ (ಶ್ರೀಕೃಷ್ಣ ಮತ್ತು ಕಾಡುಮನುಷ್ಯ), ತಿಲಕಾ ಕೆ. (ಧರ್ಮರಾಯ ಮತ್ತು ಕಾಡು ಮನುಷ್ಯ) ಪಾತ್ರಗಳಿಗೆ ಜೀವ ತುಂಬಿದರು.
ಮೆಲ್ವಿನ್ ಡಿಸೋಜ ಸಂಗೀತ ಸಂಯೋಜನೆ ಮಾಡಿದರು. ವಸಂತ, ಪ್ರಸಾದ್ ರೈ, ಪ್ರವೀಣ, ಬಾಬು ಮತ್ತಿತರರು ಪ್ರಸಾಧನ ಮತ್ತು ಬೆಳಕು ವ್ಯವಸ್ಥೆಯಲ್ಲಿ ಸಹಕರಿಸಿದರು. ರಾಮಕೃಷ್ಣ, ನವೀನ, ಅವಿನಾಶ್, ಶಿವಪ್ರಸಾದ್, ಚೈತ್ರಾ, ಅಕ್ಷತಾ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಬಾಲಕೃಷ್ಣ ಹೊಸಂಗಡಿ, ಶ್ರೀಧರ ಏತಡ್ಕ ಮತ್ತು ಬಬಿತಾ ಎ. ಮತ್ತಿತರರು ಸಹಕರಿಸಿದರು.
ಸುಶ್ಮಿತಾ ಉತ್ತಮ ನಟಿ: ನಾಟಕದಲ್ಲಿ ಹಿಡಿಂಬೆಯ ಪಾತ್ರದಲ್ಲಿ ಅಭಿನಯಿಸಿದ ಸುಶ್ಮಿತಾ ಆರ್. ಉತ್ತಮ ನಟಿಯಾಗಿ ಆಯ್ಕೆಯಾದರು. ಇವರು ಯಕ್ಷಗಾನ ಕಲಾವಿದೆಯೂ ಹೌದು. ಬಿಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ. ಸವಾಕ್ ಕಲಾವಿದರ ವೇದಿಕೆಯ ಕಾಸರಗೋಡು ಘಟಕದ ಕಾರ್ಯದರ್ಶಿ. ಇವರು ಶಾಲಾ ವಿದ್ಯಾರ್ಥಿಯಾಗಿದ್ದಾಗಲೂ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಹಲವು ಬಾರಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ತುಳು ನಾಟಕದಲ್ಲಿಯೂ ಇವರು ಅಭಿನಯಿಸಿದ್ದಾರೆ. ತುಳು ಸಿನಿಮಾದಲ್ಲಿ ನಟಿಸುವ ಅವಕಾಶವೂ ಇವರಿಗೊದಗಿತ್ತು. ಕುಂಬಳೆ ಹೋಲಿ ಪ್ಯಾಮಿಲಿ, ಜಿಎಚ್‌ಎಸ್‌ಎಸ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿನಿ. ರಾಧಾಕೃಷ್ಣ ಮತ್ತು ಆಶಾಲತ ದಂಪತಿಯ ಪುತ್ರಿ.







