ಕೃಷಿ ಭಾಗ್ಯ ಯೋಜನೆಯಿಂದ ರೈತರ ಅಭಿವೃದ್ದಿ: ಸಚಿವ ಡಿ.ಕೆ.ಶಿವಕುಮಾರ್

ತುಮಕೂರು,ಮಾ.3: ರೈತರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೃಷಿ ಭಾಗ್ಯ, ಹೆಚ್‍ವಿಡಿಎಸ್ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕುಣಿಗಲ್ ತಾಲೂಕು ಅಮೃತೂರಿನಲ್ಲಿಂದು ನಡೆದ ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಕುಣಿಗಲ್ ತಾಲೂಕಿನ ಅಭಿವೃದ್ಧಿಗೆ ಸರಕಾರ ವೇಗ ನೀಡಿದ್ದು, ವಿವಿಧ ಇಲಾಖೆಯಿಂದ ಒಂದು ಸಾವಿರ ಕೋಟಿ ರೂ ಅನುದಾನದಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅನುಷ್ಠಾನಗೊಳಿಸಲಾಗುತ್ತಿದೆ. ಹೆಚ್‍ವಿಡಿಎಸ್ ಯೋಜನೆಯು ರೈತರಿಗೆ ಗುಣಮಟ್ಟದ ವಿದ್ಯುತ್ ದೊರಕುವುದಕ್ಕೆ ಸಹಕಾರಿಯಾಗಲಿದೆ ಎಂದರು.
ಸುಮಾರು 1500 ಕೋಟಿ ರೂ ವೆಚ್ಚದಲ್ಲಿ ಹೆಚ್‍ವಿಡಿಎಸ್ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ರೈತರ ಬದುಕನ್ನು ಹಸನು ಮಾಡುವುದಕ್ಕಾಗಿ 110 ತಾಲೂಕುಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿ, ರೈತರಿಗೆ ವಿದ್ಯುತ್ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಅಂತರ್ಜಲ ಹೆಚ್ಚಳ ಸೇರಿದಂತೆ ಆರೋಗ್ಯ ಕರ್ನಾಟಕ ಯೋಜನೆ ಜನರಿಗೆ ಸಹಕಾರಿಯಾಗಲಿದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಈ ಯೋಜನೆಯಿಂದ ಜನರಿಗೆ ಅನುಕೂಲವಾಗಲಿದೆ. ತಾಲೂಕಿನಲ್ಲಿ ಕೈಗಾರಿಕೆ ಹೆಚ್ಚಳವಾಗಲು ಬೇಕಾದ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು, ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಂಸದ ಮುದ್ದಹನುಮೇಗೌಡ ಮಾತನಾಡಿ, ಕುಣಿಗಲ್ ತಾಲೂಕಿನ ರೈತರ ಹಿತ ಕಾಯುವ ಹೆಚ್‍ವಿಡಿಎಸ್ ಯೋಜನೆಗಾಗಿ 160 ಕೋಟಿ ರೂ ಅನುದಾನ ವೆಚ್ಚ ಮಾಡಲಾಗುತ್ತಿದ್ದು, ಕೃಷಿಕರೇ ಹೆಚ್ಚಾಗಿರುವ ಈ ತಾಲೂಕಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕುಣಿಗಲ್ ತಾಲೂಕಿನ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 4 ವಿದ್ಯುತ್ ಉಪ ಸ್ಥಾವರಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಪ್ರಸರಣದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಸರಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರು ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಾಗಿದ್ದಾರೆ. 20,000 ರೈತರಿಗೆ ಉಪಯುಕ್ತವಾಗುವ ಯೋಜನೆಗಳಿಗೆ ಇಂಧನ ಇಲಾಖೆಯಿಂದ ಇದುವರೆಗೂ 300 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್,ಮುಖ್ಯ ಎಂಜನಿಯರ್ ಸದಾಶಿವ, ಸಿ.ಆದಿನಾರಾಯಣ್,ಅಧೀಕ್ಷಕ ಎಂಜನಿಯರ್ ಗೋವಿಂದಪ್ಪ,ಶಿವಕುಮಾರ್ ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದರು.







