ಬಿಜೆಪಿ ಅಧಿಕಾರಕ್ಕೆ ಬಂದರೆ ನೇಕಾರರಿಗೆ ಪ್ರತ್ಯೇಕ ನಿಗಮ: ಯಡಿಯೂರಪ್ಪ

ಬೆಂಗಳೂರು, ಮಾ. 4: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೇಕಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವುದರ ಜತೆಗೆ ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ಮೀಸಲಿಡುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ರಾಜ್ಯ ನೇಕಾರ ಮಹಾಸಭಾದಿಂದ ಏರ್ಪಡಿಸಿದ್ದ ಗುರುವಂದನಾ ಹಾಗೂ ನೇಕರರ ಜಾಗೃತಿ ಸಮವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ನೇಕಾರರ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಹಾಗೂ 5 ಕೋಟಿ ರೂ. ನೆರವು ನೀಡಿ, ನೇಕಾರರ ಇತರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ಕೃಷಿ ನಂತರದ ಸ್ಥಾನ ನೇಕಾರಿಕೆ ಉದ್ಯಮಕ್ಕಿದೆ. ಹೀಗಿದ್ದರೂ, ಶ್ರಮಜೀವಿಗಳಾದ ನೇಕಾರರು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಜವಳಿ ಉದ್ಯಮ ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಉದ್ಯಮವಾಗಿದೆ. ರಾಜ್ಯದ ನೇಕಾರರು ಮಾತ್ರ ನಿರ್ಲಕ್ಷಕ್ಕೊಳಗಾಗಿದ್ದು, ಗ್ರಾಮೀಣ ಭಾಗದ ಅನೇಖ ನೇಕಾರರು ದಿನಗೂಲಿ ನೌಕರರಂತೆ ದುಡಿದು ಕನಿಷ್ಟ ಕೂಲಿ ಪಡೆಯುತ್ತಿದ್ದಾರೆ. ಅವರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಶಕ್ತಿ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ, ಹಿಂದುಳಿದ ವರ್ಗಕ್ಕೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ, ನೇಕಾರರು ನೇಯ್ದ ಬಟ್ಟೆಗಳಿಗೆ ಸರಕಾರದ ಮಜೂರಿ ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು.
ಜಾಗತಿಕರಣದ ಪ್ರಭಾವದಿಂದ ಅತಂತ್ರ ಸ್ಥಿತಿ ತಲುಪಿದ್ದ ಕೈಮಗ್ಗ ನೇಕಾರರ ಜೀವನವನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರಕಾರ ಆದ್ಯತೆ ನೀಡಿದ್ದು, ಖಾದಿ ಉದ್ಯಮವನ್ನು ಬಲಪಡಿಸಲಾಗುತ್ತಿದೆ ಇದಕ್ಕೆ ರಾಜ್ಯ ಸರಕಾರ ಸಹಕರಿಸಬೇಕೆಂದು ಯಡಿಯೂರಪ್ಪ ಹೇಳಿದರು.
ನೇಕಾರರು ಧಾರ್ಮಿಕವಾಗಿ ಒಗ್ಗಟ್ಟಾಗಿರುವಂತೆ ದೇವಾಂಗ, ತೊಗಟವೀರ, ಪದ್ಮಸಾಲಿ, ಶಿವಸಂಸಾಲಿ ಸೇರಿದಂತೆ ಅನೇಕ ಪಂಗಡಗಳು ಹರಿದು ಹಂಚಿ ಹೋಗಿದ್ದಾರೆ. ರಾಜಕೀಯವಾಗಿ ಸಂಘಟಿತರಾದಾಗ ಮಾತ್ರ ರಾಜಕೀಯ ಶಕ್ತಿ ಪಡೆದುಕೊಳ್ಳಲು ಸಾಧ್ಯ ಹೀಗಾಗಿ ಸಮುದಾಯದ ಜನರು ಸಂಘಟಿತರಾಗಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು.
ದಯಾನಂದಪುರಿ ಸ್ವಾಮಿ, ಜ್ಞಾನಾನಂದಗಿರಿ ಸ್ವಾಮಿ, ಬಸವರಾಜ ಪಟ್ಟದಾರ್ಯ ಸ್ವಾಮಿ, ಪ್ರಭುಲಿಂಗ ಸ್ವಾಮಿ, ಘನಲಿಂಗಸ್ವಾಮಿ, ಶಿವಶಂಕರ ಸ್ವಾಮಿಗೆ ಇದೇ ವೇಳೆ ಗುರುವಂದನೆ ಸಲ್ಲಿಸಲಾಯಿತು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕರಾದ ಸುರೇಶ್ ಕುಮಾರ್, ಎಸ್.ಆರ್. ವಿಶ್ವನಾಥ್, ಮಹಾಸಭಾ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಹಾಜರಿದ್ದರು.







