ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಸಚಿವ ಅನಂತಕುಮಾರ್ ಹೆಗಡೆ

ಹೊನ್ನಾವರ,ಮಾ.4: 'ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಿಂದೆಂದೂ ಕಂಡರಿಯದ ಅಪರಾಧಿಕೃತ್ಯಗಳು ನಡೆದಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟುಹೋಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾ ಭವನದಲ್ಲಿ ಭಾನುವಾರ ನಡೆದ ಜನ ಸುರಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮದು ಆದರ್ಶ ಸರ್ಕಾರ ಎನ್ನುವ ಇವರು ಅಪರಾಧಿಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಅಮಾಯಕರ ಮಾರಣ ಹೋಮವಾಗಿದೆ. ರಾಜ್ಯದಲ್ಲಿ 3872 ಅತ್ಯಾಚಾರ ಪ್ರಕರಣ ನಡೆದಿದೆ. 35 ಸಾವಿರಕ್ಕೂ ಹೆಚ್ಚು ಚೀಟಿಂಗ್ ಪ್ರಕರಣ ನಡೆದಿದೆ. 11775 ಅಪಹರಣ ಪ್ರಕರಣಗಳು ನಡೆದಿವೆ. ಇಡೀ ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಇಂತಹ ಸಕಾರವನ್ನು ಕಿತ್ತೆಸೆದು ಜನರ ಸುರಕ್ಷೆಗಾಗಿ ಬಿಜೆಪಿಯನ್ನು ಆಡಳಿತಕ್ಕೆ ತರಬೇಕು ಎಂದರು.
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಪೊಲೀಸ್ ಉನ್ನತಾಧಿಕಾರಿಗಳ ಪತ್ನಿ ಕಾಂಗ್ರೆಸ್ ಮುಖಂಡೆಯಾಗಿದ್ದು, ಟಿಕೆಟ್‍ಗೆ ಆಕಾಂಕ್ಷಿಯಾಗಿದ್ದಾರೆ. ಇಂತವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ. ಅಖಂಡ ಭಾರತ ತಲೆಯೆತ್ತಿ ನಿಲ್ಲಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಮಾಜಿ ಶಾಸಕರಾದ ದಿನಕರ ಶೆಟ್ಟಿ, ಸುನಿಲ್ ಹೆಗಡೆ, ಮುಖಂಡರಾದ ಡಾ ಎಂ.ಪಿ.ಕರ್ಕಿ, ವೆಂಕಟ್ರಮಣ ಹೆಗಡೆ, ಸೂರಜ್ ನಾಯ್ಕ ಸೋನಿ, ನಾಗರಾಜ ನಾಯಕ ತೊರ್ಕೆ, ಯಶೋಧರ ನಾಯ್ಕ, ಎಂ.ಜಿ.ನಾಯ್ಕ, ಡಾ. ಜಿ.ಜಿ.ಹೆಗಡೆ, ವಿನೋದ ನಾಯ್ಕ, ಗಾಯತ್ರಿ ಗೌಡ, ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ಲೋಕೇಶ ಮೇಸ್ತ, ಪರೇಶ ತಂದೆ ಕಮಲಾಕರ ಮೇಸ್ತ, ತಾಯಿ ರುಕ್ಮಾಬಾಯಿ ಇತರರು ಉಪಸ್ಥಿತರಿದ್ದರು.
ಪಟ್ಟಣದ ಶರಾವತಿ ಸರ್ಕಲ್‍ನಿಂದ ಆರಂಭವಾದ ಬೃಹತ್ ಶೋಭಾಯಾತ್ರೆ ದುರ್ಗಾಕೇರಿಯ ಶ್ರೀ ದಂಡಿನದುರ್ಗಾ ದೇವಸ್ಥಾನ ಮಾರ್ಗವಾಗಿ ಬಜಾರರಸ್ತೆ ಮೂಲಕ ಪರೇಶ ಮೇಸ್ತ ಸರ್ಕಲ್ ಮಾರ್ಗವಾಗಿ ತೆರಳಿ, ಪ್ರಭಾತನಗರದ ಶ್ರೀ ಮೂಡಗಣಪತಿ ದೇವಸ್ಥಾನ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಸಾವಿರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.







