ಮುಂದುವರಿದ 'ಪಡಿತರ ಚೀಟಿ ಪಡಿಪಾಟಲು': ಅರ್ಜಿ ಸಲ್ಲಿಸಿ ವರ್ಷವಾಗುತ್ತಾ ಬಂದರೂ ಇನ್ನೂ ಬಂದಿಲ್ಲ ಬಿಪಿಎಲ್ ಕಾರ್ಡ್

ಶಿವಮೊಗ್ಗ, ಮಾ. 4: ರಾಜ್ಯ ಆಹಾರ ಇಲಾಖೆ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ, ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಪಡಿತರ ಚೀಟಿ ವಿತರಣೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗಿದೆ. ಆನ್‍ಲೈನ್ ಮೂಲಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಹಾಗೂ ಅರ್ಜಿದಾರರಿಗೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಈ ವ್ಯವಸ್ಥೆಯಲ್ಲಿ ಇತ್ತೀಚೆಗೆ ಇನ್ನಷ್ಟು ಸರಳೀಕರಣಗೊಳಿಸಿರುವ ರಾಜ್ಯ ಸರ್ಕಾರ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಸೂಕ್ತ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿಗೆ ತೆರಳಿದರೆ ಸ್ಥಳದಲ್ಲಿಯೇ ಪಡಿತರ ಚೀಟಿ ವಿತರಿಸುವ ವ್ಯವಸ್ಥೆ ಕೂಡ ಆರಂಭಿಸಿದೆ. ಇದಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಆದರೆ ಕಳೆದ ಸರಿಸುಮಾರು ಒಂದು ವರ್ಷದ ಹಿಂದೆ, ಆನ್‍ಲೈನ್ ಮೂಲಕ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದ ರಾಜ್ಯದ ನೂರಾರು ಅರ್ಜಿದಾರರಿಗೆ ಇಲ್ಲಿಯವರೆಗೂ 'ಸ್ಪೀಡ್ ಪೋಸ್ಟ್' ಮೂಲಕ ಪಡಿತರ ಚೀಟಿ ಲಭ್ಯವಾಗಿಲ್ಲ. ಹಾಗೆಯೇ ಸರ್ಕಾರ ಜಾರಿಗೊಳಿಸಿರುವ ಹೊಸ ವ್ಯವಸ್ಥೆಯಡಿಯೂ ಆಹಾರ ಇಲಾಖೆ ಕಚೇರಿಯಲ್ಲಿ ಪಡಿತರ ಚೀಟಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಈ ಅರ್ಜಿದಾರರು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಹೋಗುವಂತಾಗಿದ್ದು, ಪಡಿತರ ಚೀಟಿಗಾಗಿ ಪಡಿಪಾಟಲು ಪಡುವುದು ಮುಂದುವರಿದಿದೆ.
ಸಿಗುತ್ತಿಲ್ಲ: ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ, ಆದಾಯ ಪ್ರಮಾಣ ಪತ್ರ ಹಾಗೂ ಅರ್ಜಿಯೊಂದಿಗೆ ನೀಡಲಾದ ಕುಟುಂಬ ಸದಸ್ಯರ ಆಧಾರ್ ಕಾರ್ಡ್‍ಗಳ ವಿವರವನ್ನು ಆಹಾರ ಇಲಾಖೆಗೆ ಕೊಂಡೊಯ್ದರೆ ಸ್ಥಳದಲ್ಲಿಯೇ ಕಾರ್ಡ್ ಮುದ್ರಿಸಿ ಕೊಡುವ ವ್ಯವಸ್ಥೆಗೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಅದರಂತೆ ಕಳೆದ ವರ್ಷ ಮಾರ್ಚ್- ಏಪ್ರಿಲ್ ತಿಂಗಳುಗಳ ಆಸುಪಾಸಿನಲ್ಲಿ ಅರ್ಜಿ ಸಲ್ಲಿಸಿದವರು ಸರ್ಕಾರ ನಿಗದಿಪಡಿಸಿದ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿಗೆ ಹೋದರೆ, ಕಾರ್ಡ್‍ಗಳು ಸಿಗುತ್ತಿಲ್ಲ. ಕಂಪ್ಯೂಟರ್ ನಲ್ಲಿ ಅರ್ಜಿಗಳು ಸ್ವೀಕೃತವಾಗಿವೆ. ಇನ್ನೂ ಪರಿಶೀಲನೆಯ ಹಂತದಲ್ಲಿವೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಸದ್ಯಕ್ಕೆ ನಿಮಗೆ ಕಾರ್ಡ್ ಮುದ್ರಣ ಮಾಡಿಕೊಡಲು ಸಾಧ್ಯವಾಗುವುದಿಲ್ಲ ಎಂದು ಕಚೇರಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.
'ಇತ್ತೀಚೆಗೆ ಬಿಪಿಎಲ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಸ್ಥಳ ಪರಿಶೀಲನೆ ನಡೆಸದ ಹೊರತಾಗಿಯೂ ಕಾರ್ಡ್‍ಗಳು ಲಭ್ಯವಾಗುತ್ತಿವೆ. ಆದರೆ ಕಳೆದ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಾರ್ಡ್‍ಗೆ ಅರ್ಜಿ ಸಲ್ಲಿಸಿದ ನಮಗೆ, ಸರಿಸುಮಾರು 12 ಹಂತಗಳ ಸುದೀರ್ಘ ತಪಾಸಣೆಯ ಹೊರತಾಗಿಯೂ ಕಾರ್ಡ್‍ಗಳು ಲಭ್ಯವಾಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ' ಎಂದು ಕೆಲ ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಂತ್ರಿಕ ಕಾರಣ: ಕಳೆದ ವರ್ಷ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್‍ಗಳ ವಿತರಣೆಯಲ್ಲಾಗುತ್ತಿರುವ ವಿಳಂಬಕ್ಕೆ ತಾಂತ್ರಿಕ ಕಾರಣಗಳನ್ನು ಅಧಿಕಾರಿಗಳು ಮುಂದಿಡುತ್ತಿದ್ದಾರೆ. 'ಕಳೆದ ಮಾರ್ಚ್, ಏಪ್ರಿಲ್ ನಲ್ಲಿ ಹಿಂದೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗಿರುವುದು ನಿಜ. ಈ ಅರ್ಜಿಗಳನ್ನು ಸುಮಾರು 12 ಹಂತಗಳಲ್ಲಿ ಪರಿಶೀಲನೆಗೊಳಪಡಿಸಲಾಗಿದೆ. ಇದಾದ ನಂತರ ಅರ್ಹ ಅರ್ಜಿಗಳನ್ನು ಕಾರ್ಡ್‍ಗಳ ಮುದ್ರಣಕ್ಕೆ ಕಳುಹಿಸಿ ಕೊಡಲಾಗಿದೆ. ಎನ್‍ಐಸಿ ಹಂತದಿಂದ ಈ ಅರ್ಜಿಗಳು ಮುಂದಿನ ಹಂತಕ್ಕೆ ರವಾನೆಯಾಗಿಲ್ಲ. ತಾಂತ್ರಿಕ ಕಾರಣಗಳಿಂದ ಈ ಅರ್ಜಿಗಳು ವಿಲೇವಾರಿಯಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಶೀಘ್ರ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ. ನಮ್ಮ ಹಂತದಲ್ಲಿ ಏನೂ ಮಾಡಲು ಆಗುವುದಿಲ್ಲ' ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಆಹಾರ ಇಲಾಖೆಯ ಅಧಿಕಾರಿಯೋರ್ವರು ಹೇಳುತ್ತಾರೆ.
ಗಮನಹರಿಸಲಿ: ವಿಧಾನಸಭೆ ಚುನಾವಣೆ ಮಾದರಿ ನೀತಿ- ಸಂಹಿತೆ ಜಾರಿಯಾದರೆ ಬಿಪಿಎಲ್ ಪಡಿತರ ಚೀಟಿ ವಿತರಣೆಯ ಮೇಲೆ ಸಂಪೂರ್ಣ ಕಡಿವಾಣ ಬೀಳಲಿದೆ. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವಷ್ಟೆ ಪ್ರಕ್ರಿಯೆ ಆರಂಭವಾಗಲಿದೆ. ಹೊಸ ಸರ್ಕಾರಗಳು ಮತ್ತೆನಾದರೂ ಹೊಸ ನೀತಿ ತಂದರೆ, ಪ್ರಸ್ತುತ ಅರ್ಜಿ ಹಾಕಿದವರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.
ಈ ಕಾರಣದಿಂದಲೇ ರಾಜ್ಯ ಸರ್ಕಾರ ಸ್ಥಳೀಯ ಆಹಾರ ಇಲಾಖೆ ಕಚೇರಿಗಳಲ್ಲಿಯೇ ಬಿಪಿಎಲ್ ಕಾರ್ಡ್ ಮುದ್ರಿಸಿ ಕೊಡುವ ವ್ಯವಸ್ಥೆಗೆ ಚಾಲನೆ ನೀಡಿದೆ. ಇದರ ಹೊರತಾಗಿಯೂ ಕಳೆದ ಮಾರ್ಚ್ - ಏಪ್ರಿಲ್ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್ ಮುದ್ರಣ ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಅಡೆತಡೆಗಳು ಎದುರಾಗುತ್ತಿವೆ. ಈ ಬಗ್ಗೆ ಬೆಂಗಳೂರಿನ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಇಲಾಖೆ ಸಚಿವ ಯು.ಟಿ.ಖಾದರ್ ರವರು ತುರ್ತು ಗಮನಹರಿಸಬೇಕಾಗಿದೆ. ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ಎದುರಾಗಿರುವ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂಬುವುದು ನಾಗರಿಕರ ಆಗ್ರಹವಾಗಿದೆ.
ಒಂದಲ್ಲ, ಎರಡಲ್ಲ 12 ಹಂತಗಳಲ್ಲಿ ತಪಾಸಣೆ ನಡೆಸಲಾಗಿತ್ತು
ಪ್ರಸ್ತುತ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ, ಆದಾಯ ಪ್ರಮಾಣ ಪತ್ರ, ಆಧಾರ್ ವಿವರವನ್ನು ಆಹಾರ ಇಲಾಖೆ ಕಚೇರಿಗೆ ಕೊಂಡೊಯ್ದರೆ ತತ್‍ಕ್ಷಣವೇ ಬಿಪಿಎಲ್ ಕಾರ್ಡ್ ಮುದ್ರಿಸಿ ಕೊಡಲಾಗುತ್ತಿದೆ. ಈ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಥಳ ಪರಿಶೀಲನೆಯಾಗಲಿ, ಇತರೆ ವಿವರ ಕಲೆಹಾಕುವ ಪ್ರಕ್ರಿಯೆಗಳೇ ನಡೆಯುತ್ತಿಲ್ಲ. ಆದರೆ ಕಳೆದ ವರ್ಷ ಆನ್‍ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಕಂದಾಯ ಇಲಾಖೆಯ ಮೂಲಕ ಕೂಲಂಕುಷ ತಪಾಸಣೆಗೊಳಪಡಿಸಲಾಗಿತ್ತು.
ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಗೆ ಆಗಮಿಸಿ ಖುದ್ದು ಪರಿಶೀಲಿಸಿದ್ದರು. ತದನಂತರ ಸುಮಾರು 12 ಹಂತಗಳಲ್ಲಿ ಅರ್ಜಿದಾರರು ಕೊಟ್ಟ ವಿವರಗಳ ಸತ್ಯಾಸತ್ಯತೆಯ ತಪಾಸಣೆಗೊಳಪಡಿಸಲಾಗಿತ್ತು. ಆನಂತರವಷ್ಟೆ ಬಿಪಿಎಲ್ ಕಾರ್ಡ್ ಮಂಜೂರುಗೊಳಿಸಿ, ಮುದ್ರಣಕ್ಕೆ ಕಳುಹಿಸಿ ಕೊಡಲಾಗುತ್ತಿತ್ತು. ತದನಂತರ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರಿಗೆ ತಲುಪಿಸಲಾಗುತ್ತಿತ್ತು. ಸೂಕ್ತ ತಪಾಸಣೆಯ ಹೊರತಾಗಿಯೂ ಈ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.







