ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಿದ ಈಶಾನ್ಯ ಚುನಾವಣೆ: ದೀಪಕ್ ದೊಡ್ಡಯ್ಯ

ಚಿಕ್ಕಮಗಳೂರು ಮಾ.4, ಶನಿವಾರ ಹೊರಬಿದ್ದ ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳ ಚುನಾವಣಾ ಫಲಿತಾಂಶ ಭಾರತದ ರಾಷ್ಟ್ರೀಯತೆಗೆ ತಂದು ಕೊಟ್ಟ ಹೊಸ ಶಕ್ತಿಯಾಗಿದೆ ಎಂದು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯ ಕೇಂದ್ರ ಸಲಹಾ ಮಂಡಳಿ ಸದಸ್ಯ ಹಾಗೂ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಪತ್ರಿಕಾ ಪ್ರಕಟನೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶ ಮೊದಲು ಎಂಬ ದ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುವ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಈ ಬಾರಿ ನಡೆದ ಮೂರು ರಾಜ್ಯಗಳ ಫಲಿತಾಂಶ ಹೊಸ ಭಾಷ್ಯ ಬರೆಯುವಂತೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಮತದಾರರು ಇಡೀ ದೇಶದಲ್ಲಿ ಆ ಪಕ್ಷವನ್ನು ಆಡಳಿತದಿಂದ ದೂರವಿಡಲು ಚಿಂತಿಸಿದ್ದಾರೆ. ಕಮ್ಯೂನಿಸ್ಟ್ ಪಕ್ಷವನ್ನು ಜನರು ಮನಸ್ಸಿನಿಂದಲೇ ತೆಗೆದುಹಾಕುವಂತೆ ಮತದಾರರು ಮಾಡಿದ್ದಾರೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಚುನಾವಣೆಗಳ ಫಲಿತಾಂಶವನ್ನು ಗಮನಿಸಿದರೆ ಭಾರತೀಯ ಜನತಾಪಕ್ಷ ಇಡೀ ದೇಶದ್ಯಾಂತ ಹೆಮ್ಮರವಾಗಿ ಬೆಳೆದು ನಿಂತಿರುವುದು ಜನ ಸಾಮಾನ್ಯರ ಅರಿವಿಗೆ ಬರುತ್ತದೆ. ಪಕ್ಷ ಹಿಂದೆಂದೂ ಪಡೆಯದಷ್ಟು ಮತಗಳನ್ನು ಇಡೀ ದೇಶದ್ಯಾಂತ ಪಡೆಯುತ್ತಿರುವುದು ಹಾಗೂ 22 ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು, ಉಳಿದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ತಮ್ಮ ನೆಲೆ ಉಳಿಸಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಉದ್ಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂಬ ಅದ್ಭುತ ಜೋಡಿ, ಈ ದೇಶವನ್ನು ವಿಶ್ವಗುರುವಾಗಿಸುವಲ್ಲಿ ನಡೆಸುತ್ತಿರುವ ಪ್ರಯತ್ನದ ಫಲಿತಾಂಶವೇ ಈ ಚುನಾವಣೆಗಳ ದಿಗ್ವಿಜಯಕ್ಕೆ ಸಾಕ್ಷಿ. ಈ ಚುನಾವಣೆಗಳ ಫಲಿತಾಂಶ ಸದ್ಯದಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ







