ಎಸ್ ಪಿ ಜೊತೆಗಿನ ಮೈತ್ರಿ ವರದಿಗಳ ಬಗ್ಗೆ ಮಾಯಾವತಿ ಹೇಳಿದ್ದೇನು?
ಉತ್ತರ ಪ್ರದೇಶ ಉಪಚುನಾವಣೆ

ಲಕ್ನೋ, ಮಾ.4: ಉತ್ತರ ಪ್ರದೇಶ ಉಪ ಚುನಾವಣೆಗೆ ಬಹುಜನ ಸಮಾಜ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ ಕೈ ಜೋಡಿಸಲಿದೆ ಎನ್ನುವ ವರದಿಗಳು ಸುಳ್ಳು ಹಾಗು ಆಧಾರರಹಿತ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
“ಕರ್ನಾಟಕವನ್ನು ಹೊರತುಪಡಿಸಿ ಬಿಎಸ್ ಪಿ ಯಾವುದೇ ರಾಜ್ಯದಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ ಎಂದು ನಾನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ. 2019ರ ಲೋಕಸಭಾ ಚುನಾವಣೆಯಲ್ಲಿ, ಗೋರಖ್ ಪುರ ಹಾಗು ಫುಲ್ ಪುರ ಉಪಚುನಾವಣೆಗಳಲ್ಲೂ ನಾವು ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಮೈತ್ರಿಗೆ ಸಂಬಂಧಿಸಿದ ವರದಿಗಳು ಸುಳ್ಳು ಹಾಗು ಆಧಾರರಹಿತ ಎಂದು ಅವರು ಹೇಳಿದ್ದಾರೆ.
ಮೈತ್ರಿ ಮಾಡಿಕೊಳ್ಳುವ ಆಲೋಚನೆಯಿದ್ದರೆ ಬಿಎಸ್ ಪಿ ಅದನ್ನು ಸಾರ್ವಜನಿಕವಾಗಿ ಹೇಳುತ್ತದೆಯೇ ಹೊರತು ರಹಸ್ಯವಾಗಿ ಮಾಡುವುದಿಲ್ಲ . ಇಂತಹ ಯಾವುದೇ ನಿರ್ಧಾರಗಳಿದ್ದರೂ ಮಾಧ್ಯಮಗಳಿಗೆ ಮೊದಲಿಗೆ ತಿಳಿಸುತ್ತೇವೆ ಎಂದರು.
ಮುಂಬರುವ ಗೋರಖ್ ಪುರ್ ಹಾಗು ಫುಲ್ಪುರ್ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದೊಂದಿಗೆ ಬಿಎಸ್ ಪಿ ಪಕ್ಷವು ಎಸ್ಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದೆ ಎಂದು ವರದಿಯಾಗಿತ್ತು.





